ನವದೆಹಲಿ/ಬೆಂಗಳೂರು:ಬಹು ನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಡೆಸಿದ ಸಭೆಯಲ್ಲಿ ತಕ್ಷಣದ ನಿರ್ಧಾರ ಕೈಗೊಳ್ಳದ ಹಿನ್ನೆಲೆಯಲ್ಲಿ ಮತ್ತೆ ಬರಿಗೈಯಲ್ಲಿ ಸಿಎಂ ರಾಜ್ಯಕ್ಕೆ ವಾಪಸಾಗಬೇಕಾಗಿದೆ.
ಮುಖ್ಯಮಂತ್ರಿ ಬೊಮ್ಮಾಯಿ ಅವರು ಇಂದು ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ ಜೋಶಿ ಸಮ್ಮುಖದಲ್ಲಿ ಸಂಪುಟ ವಿಸ್ತರಣೆ ಕುರಿತು ಮಹತ್ವದ ಮಾತುಕತೆ ನಡೆಸಿದರು. ಎಲ್ಲವನ್ನು ಆಲಿಸಿದ ಅಮಿತ್ ಶಾ ನೀವು ರಾಜ್ಯಕ್ಕೆ ವಾಪಸ್ ತೆರಳಿ, ನಾವು ಈ ಬಗ್ಗೆ ಚರ್ಚಿಸಿ ನಿರ್ಧಾರ ತಿಳಿಸುತ್ತೇವೆ ಎಂದಿದ್ದಾರೆ. ಹೀಗಾಗಿ ಮತ್ತೊಮ್ಮೆ ಸಚಿವಾಕಾಂಕ್ಷಿಗಳಿಗೆ ಮತ್ತೆ ನಿರಾಸೆಯಾಗಿದೆ. ಸಚಿವರ ಪಟ್ಟಿಯೊಂದಿಗೆ ರಾಜ್ಯಕ್ಕೆ ಸಿಎಂ ಮರಳಲಿದ್ದಾರೆ ಎನ್ನುವ ನಿರೀಕ್ಷೆ ಹುಸಿಯಾಗಿದೆ.
ನಡ್ಡಾ ಜೊತೆ ಚರ್ಚಿಸಿ ನಿರ್ಧಾರ:ಅಮಿತ್ ಶಾ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ರಾಜ್ಯದ ರಾಜಕೀಯ ವಿದ್ಯಮಾನಗಳು, ಸ್ಥಿತಿಗತಿಗಳು ಮತ್ತು ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಚರ್ಚೆ ನಡೆಸಲಾಗಿದೆ ಮತ್ತು ನಿನ್ನೆ ಸುಪ್ರೀಂಕೋರ್ಟ್ ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತು ನೀಡಿರುವ ಆದೇಶ, ಅದರ ಪರಿಣಾಮಗಳೇನು? ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎನ್ನುವುದು ಸೇರಿದಂತೆ ಎಲ್ಲವೂ ಕೂಡ ಚರ್ಚೆಯಾಗಿದೆ. ನಾವು ಎಲ್ಲವನ್ನೂ ಅವರಿಗೆ ತಿಳಿಸಿದ್ದು, ಸುದೀರ್ಘವಾಗಿ ಕೇಳಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಜೊತೆ ಮಾತನಾಡಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ. 2-3 ದಿನಗಳ ಬೆಳವಣಿಗೆ ಆಧಾರದಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.