ಬೆಂಗಳೂರು:ವಿಧಾನಸಭೆಗೆ ಚುನಾವಣೆ ನಡೆಯುವ ವರ್ಷದಲ್ಲಿ ಜನಪ್ರಿಯ ಘೋಷಣೆಗಳಿರುವ ಎಲೆಕ್ಷನ್ ಬಜೆಟ್ ಮಂಡಿಸಿದ ಮಾದರಿಯಲ್ಲಿಯೇ ರಾಜ್ಯದಲ್ಲಿ 'ಚುನಾವಣೆ ಸಂಪುಟ' (ಎಲೆಕ್ಷನ್ ಕ್ಯಾಬಿನೆಟ್) ರಚಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ಹೈಕಮಾಂಡ್ ತೀವ್ರ ಕಸರತ್ತು ನಡೆಸುತ್ತಿದೆ ಎಂದು ಹೇಳಲಾಗಿದೆ.
ಸಚಿವ ಸ್ಥಾನ ಆಕಾಂಕ್ಷಿಗಳ ಯಾವುದೇ ಒತ್ತಡಗಳು, ಲಾಬಿ, ಹಿರಿಯ ನಾಯಕರ ಶಿಪಾರಸ್ಸುಗಳಿಗೆ ಮನ್ನಣೆ ನೀಡದೆ ಚುನಾವಣೆಯನ್ನೇ ದೃಷ್ಟಿಯಲ್ಲಿಟ್ಟುಕೊಂಡು ಸಚಿವ ಸಂಪುಟ ರಚಿಸುವ ಪ್ರಯತ್ನಗಳು ದೇಶದ ರಾಜಧಾನಿ ದೆಹಲಿ ಅಂಗಳದಲ್ಲಿ ನಡೆದಿವೆ.
ರಾಜ್ಯ ವಿಧಾನಸಭೆಗೆ 2023ರಲ್ಲಿ ನಡೆಯುವ ಸಾರ್ವಜನಿಕ ಚುನಾವಣೆ ಮತ್ತು 2024ರಲ್ಲಿ ಲೋಕಸಭೆಗೆ ನಡೆಯುವ ಚುನಾವಣೆಯಲ್ಲಿ ಪಕ್ಷಕ್ಕೆ ಹೆಚ್ಚು ಅನುಕೂಲವಾಗುವಂತೆ, ಅರ್ಹ ಬಿಜೆಪಿ ಶಾಸಕರಿಗೆ ಸಚಿವ ಸಂಪುಟದಲ್ಲಿ ಅವಕಾಶ ನೀಡುವ ಉದ್ದೇಶ ಇಟ್ಟುಕೊಂಡು ಸಂಭಾವ್ಯ ಸಚಿವರ ಪಟ್ಟಿಯನ್ನು ಬಿಜೆಪಿ ಹೈಕಮಾಂಡ್ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಿದ್ಧಪಡಿಸಿದೆ ವಿಶ್ವಾಸನೀಯ ಮೂಲಗಳಿಂದ ತಿಳಿದುಬಂದಿದೆ.
ಚುನಾವಣೆಯಲ್ಲಿ ಪಕ್ಷಕ್ಕೆ ಸಹಾಯವಾಗುವಂತೆ ಪ್ರಾದೇಶಿಕವಾರು, ಜಾತಿವಾರು, ಹಿರಿತನ-ಕಿರಿತನ , ಶಾಸಕರ ಅರ್ಹತೆ, ಹಿಂದುತ್ವ, ಪಕ್ಷ ನಿಷ್ಠೆ ಸೇರಿದಂತೆ ಹಲವಾರು ಮಾನದಂಡಗಳನ್ನು ಆಧಾರವಾಗಿಟ್ಟುಕೊಂಡು ಸಚಿವ ಸಂಪುಟ ಸೇರಲಿರುವವರ ಪಟ್ಟಿಯನ್ನು ಅಂತಿಮಗೊಳಿಸಲಾಗುತ್ತಿದೆ ಎನ್ನಲಾಗಿದೆ.
ಈ ಹಿಂದೆ ಬಿಜೆಪಿ ಸರ್ಕಾರ ಮತ್ತು ಬಿಜೆಪಿ ಆಡಳಿತದ ಸಮ್ಮಿಶ್ರ ಸರ್ಕಾರದ ಆಡಳಿತಾವಧಿಯಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿ ವಿಫಲರಾದವರನ್ನು, ಹೆಚ್ಚು ಭ್ರಷ್ಟಾಚಾರ ಆರೋಪಗಳಿರುವ ಅಭ್ಯರ್ಥಿಗಳು, ವಿವಾದಾತ್ಮಕ ಹೇಳಿಕೆ ನೀಡಿ ಪಕ್ಷಕ್ಕೆ ಮುಜುಗರವುಂಟು ಮಾಡಿದವರಿಗೆ ಸಚಿವ ಸಂಪುಟದಲ್ಲಿ ಅವಕಾಶ ದೊರೆಯುವ ಸಾಧ್ಯತೆ ಕ್ಷೀಣವೆಂದು ಹೇಳಲಾಗುತ್ತಿದೆ.