ಬೆಂಗಳೂರು: ಸಾರ್ವಜನಿಕ ವಾಹನಗಳಿಗೆ ಮತ್ತು ಟ್ಯಾಕ್ಸಿಗಳಲ್ಲಿ ಪ್ರಯಾಣಿಕರ ಸುರಕ್ಷತೆ, ಮುಖ್ಯವಾಗಿ ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆಗಾಗಿ ಕಡ್ಡಾಯವಾಗಿ ವೆಹಿಕಲ್ ಲೊಕೇಷನ್ ಟ್ರ್ಯಾಕಿಂಗ್ ಉಪಕರಣ ಹಾಗೂ ತುರ್ತು ಆಪತ್ಕಾಲಿನ ಬಟನ್ ಅಳವಡಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ 21.22 ಕೋಟಿ ರೂ.ವೆಚ್ಚದಲ್ಲಿ ಯೋಜನೆ ಜಾರಿಗೆ ತರಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆಸಿ ಮಾಧುಸ್ವಾಮಿ, ಈ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ 60:40ರ ಅನುಪಾತದಲ್ಲಿ ಅನುದಾನ ಒದಗಿಸಲಿದೆ. ನಮ್ಮ ರಾಜ್ಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಅಂದಾಜು 20.35 ಕೋಟಿ ರೂ.ಯೋಜನಾ ವೆಚ್ಚ ನಿಗದಿಪಡಿಸಿದೆ ಎಂದರು.
ರಾಜ್ಯದ ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳಲ್ಲಿ ಸಾರಿಗೆ ವರ್ಗದ ಭಾರಿ ಪ್ರಯಾಣಿಕ ವಾಹನಗಳು ಅತಿ ವೇಗದಿಂದ ಸಂಚರಿಸಿ ರಸ್ತೆ, ಅಪಘಾತಗಳಿಗೆ ಕಾರಣವಾಗುತ್ತವೆ. ಇದನ್ನು ನಿಯಂತ್ರಿಸಲು ವಿಎಲ್‌ಟಿಎಸ್ ಆಧಾರಿತ ಜಿಪಿಆರ್‌ಎಸ್ ವ್ಯವಸ್ಥೆಯ ಉಪಕರಣವನ್ನು ವಾಹನಗಳಲ್ಲಿ ಅಳವಡಿಸಲಾಗುವುದು. ಇದರಿಂದ ವಾಹನಗಳು ಸಂಚರಿಸುವ ವೇಗ, ನಿಗದಿಪಡಿಸಿದ ಸ್ಥಳಗಳಲ್ಲಿ ನಿಲುಗಡೆ ಮಾಡಲಾಗುತ್ತಿದೆಯೇ ಎಂಬುವುದನ್ನು ಪತ್ತೆ ಹಚ್ಚಬಹುದಾಗಿದೆ ಎಂದು ವಿವರಿಸಿದರು.
ವಾಹನಗಳು ಸಮಯಕ್ಕೆ ಸರಿಯಾಗಿ ನಿಗದಿತ ಸ್ಥಳ ತಲುಪಿ ಅನವಶ್ಯಕ ವಿಳಂಬ ತಡೆಯಬಹುದು. ಅನಧಿಕೃತವಾಗಿ ಸಂಚರಿಸುವ ವಾಹನಗಳ ಮೇಲೆ ನಿಗಾ ವಹಿಸಲು ಅನುಕೂಲವಾಗುತ್ತದೆ. ವಾಹನ ಚಾಲಕರು ನಿಯಮಬಾಹಿರವಾಗಿ ಸಾರ್ವಜನಿಕರಿಗೆ, ಪ್ರಯಾಣಿಕರಿಗೆ ತೊಂದರೆಯಾಗುವಂತೆ ಬೇರೆ ಮಾರ್ಗಗಳಲ್ಲಿ ಸಂಚರಿಸುವುದನ್ನು ತಪ್ಪಿಸಬಹುದಾಗಿದೆ ಎಂದ ತಿಳಿಸಿದರು.