ಬೆಂಗಳೂರು: ಹೊರ್ತಿ-ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಹಾಗೂ ವಿಜಯಪುರ, ಬಾಗಲಕೋಟೆ, ಹಾಸನ ಜಿಲ್ಲೆಗಳಲ್ಲಿ ಹಲವು ನೀರಾವರಿ ಯೋಜನೆಗಳಿಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ವಿಧಾನಸೌಧದಲ್ಲಿ ಇಂದು ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆ ನಂತರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ಹೊರ್ತಿ-ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯಡಿ ಪ್ರಸ್ತುತ ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಪ್ರತ್ಯೇಕವಾಗಿ 3.245 ಟಿ.ಎಂ.ಸಿ. ನೀರನ್ನು ಲಿಫ್ಟ್ ಮಾಡಿ (ಆರ್.ಎಲ್.504.75 ಮೀ.ನಿಂದ ಆರ್.ಎಲ್.660.00 ಮೀ.ವರೆಗೆ) ಪೈಪ್ ಲೈನ್ ಅಳವಡಿಕೆಯೊಂದಿಗೆ ಇಂಡಿ ಮತ್ತು ವಿಜಯಪುರ ತಾಲೂಕುಗಳ (ನಾಗಠಾಣ ಮತಕ್ಷೇತ್ರ ಒಳಗೊಂಡಂತೆ) 28,000 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಯೋಜಿಸಿರುವ 3 ಹಂತಗಳ 2,638.00 ಕೋಟಿ ರೂಪಾಯಿ ಅಂದಾಜು ಮೊತ್ತದ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.