ಸಚಿವ ಸಂಪುಟ ಸಭೆಯ ನಿರ್ಧಾರಗಳ ಬಗ್ಗೆ ಸಚಿವ ಹೆಚ್.ಕೆ ಪಾಟೀಲ್ ಮಾಹಿತಿ ಬೆಂಗಳೂರು:ನಂದಿನಿ ಹಾಲಿನ ದರ ಏರಿಕೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ನಂದಿನಿ ಹಾಲಿಗೆ 3 ರೂ. ಹೆಚ್ಚಳಕ್ಕೆ ಸಂಪುಟ ಸಭೆ ತೀರ್ಮಾನಿಸಿದೆ. ಕಳೆದ ವಾರ ಕೆಎಂಎಫ್ ಜೊತೆ ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಾಲಿನ ದರ 3 ರೂ. ಹೆಚ್ಚಿಸಲು ನಿರ್ಧರಿಸಲಾಗಿತ್ತು.
ಈ ಸಂಬಂಧ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನಿಸುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಅದರಂತೆ ಇದೀಗ ಸಚಿವ ಸಂಪುಟ ಸಭೆಯಲ್ಲಿ ದರ ಏರಿಕೆಗೆ ತೀರ್ಮಾನಿಸಲಾಗಿದೆ. ಆ ಮೂಲಕ ಆಗಸ್ಟ್ 1ರಿಂದ ಹಾಲಿನ ದರ 3 ರೂ. ಹೆಚ್ಚಳವಾಗಲಿದೆ.
ಅಕ್ರಮ ಕಲ್ಲು ಗಣಿಗಾರಿಕೆಗೆ ದಂಡ ವಸೂಲಿಗೆ ತೀರ್ಮಾನ: ಕಲ್ಲುಗಣಿ ಗುತ್ತಿಗೆ ಪ್ರದೇಶದಲ್ಲಿ ಒತ್ತುವರಿ ಮಾಡಿದಂತಹ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆಯನ್ನು ಮಾಡಿ ಹೆಚ್ಚಿಗೆ ಉಪಖನಿಜ ತೆಗೆದು ಸಾಗಣೆ ಮಾಡಿದವರಿಗೆ, 6,105 ಕೋಟಿ ರೂ. ದಂಡ ಮತ್ತು ರಾಯಧನ ವಸೂಲಿಗೆ ತೀರ್ಮಾನ ಮಾಡಲಾಗಿದೆ. ಒನ್ ಟೈಂ ಸೆಟ್ಲೆಮೆಂಟ್ ಮೂಲಕ ಹಣ ವಸೂಲಿಗೆ ತೀರ್ಮಾನಿಸಲಾಗಿದ್ದು, ಈ ಸಂಬಂಧ ಸಚಿವ ಸಂಪುಟ ಉಪ ಸಮಿತಿ ರಚನೆಗೆ ನಿರ್ಧರಿಸಲಾಗಿದೆ ಎಂದು ಕಾನೂನು ಸಚಿವ ಹೆಚ್.ಕೆ. ಪಾಟೀಲ್ ತಿಳಿಸಿದರು.
ಸಂಪುಟ ಸಭೆಯ ಇತರೆ ತೀರ್ಮಾನಗಳು:
- ಸಹಕಾರ ಇಲಾಖೆಯಡಿ ಆರ್ಐಡಿಎಫ್ 28 ಯೋಜನೆಯಡಿ ಎಪಿಎಂಸಿಗಳಿಗೆ ರಸ್ತೆ ಮಾಡಲು ಹಾಗೂ ಇತರ ಮೂಲ ಸೌಕರ್ಯ ಒದಗಿಸಲು 130.40 ಕೋಟಿ ರೂ. ಮೊತ್ತದ ನಬಾರ್ಡ್ ಸಾಲಕ್ಕೆ ಮಂಜೂರಾತಿ.
- ಮೊಟ್ಟೆ ವಿತರಣೆಗಾಗಿ ವಿಭಾಗವಾರು ಮೊಟ್ಟೆಯನ್ನು ಖರೀದಿಸಿ ವಿತರಿಸಲು ನಿರ್ಣಯ. ಟೆಂಡರ್ ಪ್ರಕ್ರಿಯೆಯಲ್ಲಿ ಕೆಟಿಪಿಪಿ ಕಾಯ್ದೆ ಸಂಪೂರ್ಣವಾಗಿ ಪಾಲಿಸಲು ತೀರ್ಮಾನ. 2023-24ರಲ್ಲಿ ಪ್ರತಿ ಮೊಟ್ಟೆಗೆ ರೂ. 6 ಮೀರದಂತೆ ಒಟ್ಟು 297 ಕೋಟಿ ರೂ. ಅನುದಾನ ಒದಗಿಸಲು ತೀರ್ಮಾನ. 29 ಲಕ್ಷ ಫಲಾನುಭವಿಗಳಿಗೆ ಅನುಕೂಲ.
- ಹಿಂದುಳಿದ ಆಯೋಗದ ಸಲಹೆ ಹಾಗೂ ಹೈಕೋರ್ಟ್ ನಿರ್ದೇಶನದಂತೆ 3A ಪ್ರವರ್ಗದಲ್ಲಿ ಕೊಡಗರು ಎಂದಿರುವುದು ಕೊಡವ, ಕೊಡವರು ಎಂದು ಬದಲಾವಣೆ.
- 2012 ಗೆಜೆಟೆಟ್ ಪ್ರೊಬೆಷನರಿ ನೇಮಕಾತಿ ಹುದ್ದೆಯಲ್ಲಿ ಆರ್ಡಿಪಿಆರ್ನಲ್ಲಿ ಡಾ.ಮೈತ್ರಿಗೆ ಕೆಎಎಸ್ ಗ್ರೂಪ್ ಎ ಕಿರಿಯ ಶ್ರೇಣಿ ಹುದ್ದೆ ನೀಡುವ ಪ್ರಸ್ತಾಪ ಪುರಸ್ಕಾರ.
- ರಾಷ್ಟ್ರೀಯ ಉದ್ಯಾನವನ, ವನ್ಯಜೀವಿ ಧಾಮಗಳ ಸುತ್ತಮುತ್ತಲಿನ ಪ್ರದೇಶ ಪರಿಸರ ಸೂಕ್ಷ್ಮವಲಯ ಎಂದು ಘೋಷಣೆ ಮಾಡುವುದು, ಅಧ್ಯಯನಕ್ಕೆ ಸಚಿವ ಸಂಪುಟ ಉಪ ಸಮಿತಿಯ ರಚನೆ.
- ಶಿವಾಜಿನಗರದ ಅಟಲ್ ಬಿಹಾರಿ ವೈದ್ಯಕೀಯ ಕಾಲೇಜಿನಲ್ಲಿ ಚರಕ ಆಸ್ಪತ್ರೆ ನಿರ್ಮಾಣ, ನೆಪ್ರೋ ಯೂರಾಲಜಿಯಲ್ಲಿ ಅನೆಕ್ಸ್ ಕಟ್ಟಡವನ್ನು 22.70 ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭಿಸಲು ಆಡಳಿತಾತ್ಮಕ ಅನುಮೋದನೆ.
- ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನೆಪ್ರೋ ಯುರಾಲಜಿಯಲ್ಲಿ ಅನೆಕ್ಸ್ ಕಟ್ಟಡ ನಿರ್ಮಾಣಕ್ಕೆ 26 ಕೋಟಿ ರೂ. ಪರಿಷ್ಕೃತ ವೆಚ್ಚದ ಮೊತ್ತಕ್ಕೆ ಅನುಮೋದನೆ.
- ಪಿಪಿಪಿ ಯೋಜನೆಯಡಿ ರಾಜ್ಯ ರಸ್ತೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಸಂಪುಟ ಅನುಮೋದನೆ. ಖಾಸಗಿ ಬಂಡವಾಳ ಆಕರ್ಷಿಸಲು ಪ್ರಾಧಿಕಾರ ರಚನೆಗೆ ನಿರ್ಧಾರ.
- ಆ.15ರ ಸ್ವಾತಂತ್ರ ದಿನದಂದು 67 ಸಜಾ ಬಂದಿಗಳ ಬಿಡುಗಡೆಗೆ ಸಂಪುಟದ ಒಪ್ಪಿಗೆ.
ಸಚಿವರ ವಿರುದ್ಧ ಶಾಸಕರ ಅಸಮಾಧಾನದ ಬಗ್ಗೆ ಚರ್ಚೆ:ಸಚಿವರ ವಿರುದ್ಧ ಶಾಸಕರ ಅಸಮಾಧಾನ ಪತ್ರ ವಿಚಾರವಾಗಿ ಸಚಿವ ಸಂಪುಟ ಸಭೆಯಲ್ಲಿ ಗಂಭೀರವಾಗಿ ಚರ್ಚೆ ನಡೆಸಲಾಯಿತು. ಸರ್ಕಾರ ಬಂದ ಎರಡೇ ತಿಂಗಳಿಗೆ ಶಾಸಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇದು ಸರಿಯಾದ ಬೆಳವಣಿಗೆ ಅಲ್ಲ. ವಿಶೇಷ ಅನುದಾನ ಕೊಡಲು ಸಾಧ್ಯವಿಲ್ಲ ಎಂದು ನೀವೇ ಹೇಳಿದ್ದೀರಾ. ಆದರೂ ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡುವುದು ಸರಿ ಇಲ್ಲ ಎಂದು ಕೆಲ ಸಚಿವರು ಆಕ್ಷೇಪ ವ್ಯಕ್ತಪಡಿಸಿದರು.
ಇಲಾಖೆಯಲ್ಲಿ ನಮಗೆ ಸ್ವತಂತ್ರವಾಗಿ ಕೆಲಸ ಮಾಡಲು ಬಿಡಬೇಕು. ಯಾರೋ ಒಬ್ಬರು, ಇಬ್ಬರೋ ಶಾಸಕರಿಗೆ ಸ್ಪಂದಿಸಲ್ಲ ಅಂತಂದು ಎಲ್ಲರ ವಿರುದ್ಧ ಆರೋಪ ಮಾಡೋದು ಸರಿ ಅಲ್ಲ ಎಂದು ಕೆಲ ಸಚಿವರು ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ. ಇದೇ ವೇಳೆ, ಸಚಿವರಿಗೆ ಸಿಎಂ ಸಿದ್ದರಾಮಯ್ಯ ಕಿವಿಮಾತು ಹೇಳಿದ್ದು, ಶಾಸಕರಿಗೆ ಅಲ್ಪ ಸ್ಪಲ್ಪ ಅಸಮಾಧಾನ ಇರುವುದು ಸಹಜ. ಆದರೆ, ಎಲ್ಲರನ್ನೂ ಸಮಾಧಾನಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಶಾಸಕರ ಅಭಿಪ್ರಾಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡಿ ಎಂದು ಸಲಹೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ:ಕಾಂಗ್ರೆಸ್ ಶಾಸಕಾಂಗ ಸಭೆ ಆರಂಭ: ಹಲವು ಮಹತ್ವದ ವಿಚಾರಗಳ ಚರ್ಚೆ