ಬೆಂಗಳೂರು:ಬೆಳಗಾವಿಯಲ್ಲಿ ಡಿ.19ರಿಂದ 30ರವರೆಗೆ ಚಳಿಗಾಲದ ಅಧಿವೇಶನ ನಡೆಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಧಿವೇಶನ ನಡೆಸುವ ಬಗ್ಗೆ ನಿರ್ಧರಿಸಲಾಗಿದೆ.
ಸಂಪುಟ ಸಭೆ ಬಳಿಕ ಸಚಿವ ಡಾ.ಕೆಸುಧಾಕರ್ ಸುದ್ದಿಗೋಷ್ಠಿ ನಡೆಸಿ, ಬೆಳಗಾವಿಯ ಸುವರ್ಣ ಸೌಧದಲ್ಲಿ ಒಟ್ಟು 10 ದಿನಗಳ ಕಾಲ ಕಲಾಪ ನಡೆಸಲು ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ಅಲ್ಲದೇ, ರಾಜ್ಯ ಸರ್ಕಾರ ಆಯವ್ಯಯದಲ್ಲಿ ಘೋಷಿಸಿದಂತೆ ಕರ್ನಾಟಕ ರಾಜ್ಯ ಶ್ರೀಗಂಧ ನೀತಿ 2022ಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ತಿಳಿಸಿದರು.
ಶ್ರೀಗಂಧ ನೀತಿ ಮೂಲಕ ರೈತರಿಗೆ ಖಾಸಗಿ ಜಮೀನಿನಲ್ಲಿ ಶ್ರೀಗಂಧ ಬೆಳೆಯಲು ಅವಕಾಶ ನೀಡಲಾಗುತ್ತದೆ. ಶ್ರೀಗಂಧವನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಲು ಅವಕಾಶ ಸಿಗಲಿದೆ. ರೈತರ ಆದಾಯ ಹೆಚ್ಚಿಸಲು ಈ ನೀತಿ ಪುರಕವಾಗಿದೆ. ಚಿಪ್, ತಂತ್ರಜ್ಞಾನ ಬಳಸಿ ಶ್ರೀಗಂಧ ಕಳವು ಪ್ರಕರಣ ನಿಯಂತ್ರಿಸುವ ಕ್ರಮಗಳು ಈ ನೀತಿಯಲ್ಲಿ ಒಳಗೊಂಡಿರಲಿದೆ ಎಂದು ವಿವರಿಸಿದರು.
ಅಲ್ಲದೇ, ರಾಜ್ಯದಲ್ಲಿ ಹೊಸದಾಗಿ ಉತ್ತಾರೆಗುಡ್ಡ ವನ್ಯಜೀವಿಧಾಮ, ಬಂಕಾಪುರ ವನ್ಯಜೀವಿಧಾಮ ಮತ್ತು ಅರಸೀಕೆರೆ ಕರಡಿ ಲಗತ್ತಿ ಧಾಮಗಳನ್ನು ಹಾಗೂ ಹಿರೆಸೂಲೇಕೆರೆ ಕರಡಿ ಸಂರಕ್ಷಣಾ ಮೀಸಲು ಪ್ರದೇಶ, ಚಿಕ್ಕಸಂಗಮ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶ, ಮುಂಡಿಗೆ ಕೆರೆ ಮತ್ತು ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶ ಮತ್ತು ಬೋನಾಳ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶಗಳನ್ನು ಘೋಷಿಸುವ ಪ್ರಸ್ತಾವನೆಗಳಿಗೆ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಮಾಹಿತಿ ನೀಡಿದರು.
ವರ್ಗಾವಣೆ ತಿದ್ದುಪಡಿ ನಿಯಮಕ್ಕೆ ಅಸ್ತು:ಎಲ್ಲ ಇಲಾಖೆಯ ಸಿ ಮತ್ತು ಡಿ ಗ್ರೂಪ್ ನ ನೌಕರ ಪತಿ - ಪತ್ನಿಯರಿಗೆ ವರ್ಗಾವಣೆಗೆ ಅವಕಾಶ ನೀಡುವ ತಿದ್ದುಪಡಿ ನಿಯಮಕ್ಕೆ ಸಂಪುಟ ಸಭೆ ಅನುಮೋದನೆ ನೀಡಿದೆ. ಈ ಮುಂಚೆ ಪತಿ ಪತ್ನಿ ಪ್ರಕರಣದಲ್ಲಿ 7-10 ವರ್ಷ ಆಗುವವರೆಗೆ ವರ್ಗಾಯಿಸಲು ಅವಕಾಶ ಇದ್ದಿಲ್ಲ. ಈ ಹೊಸ ತಿದ್ದುಪಡಿ ಮೂಲಕ ಈಗ ಏಳು ವರ್ಷದ ಬಳಿಕ ಪತಿ-ಪತ್ನಿ ಪ್ರಕರಣದಲ್ಲಿ ಮಾತ್ರ ಅಂತರ ಜಿಲ್ಲೆ ವರ್ಗಾವಣೆಗೆ ಅವಕಾಶ ನೀಡಲಾಗುವುದು ಎಂದು ಸಚಿವರು ತಿಳಿಸಿದರು.
ರಾಮನಗರದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿ ಮತ್ತು ಪೂರಕ ಕಟ್ಟಡ ನಿರ್ಮಾಣಕ್ಕೆ ಅಸ್ತು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ರಾಮನಗರದ ಅರ್ಚಕರ ಹಳ್ಳಿಯಲ್ಲಿ 600 ಕೋಟಿ ರೂ.ವೆಚ್ಚದಲ್ಲಿ ವಿವಿ ಕಟ್ಟಡ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದರು.
ಜೊತೆಗೆ ದಾಸನಪುರ ಹೋಬಳಿ, ಬೆಂಗಳೂರು ಉತ್ತರ ತಾಲೂಕಿನ ಗಂಗೊಡನನಹಳ್ಳಿಯಲ್ಲಿ ನಮ್ಮನೆ ಸುಮ್ಮನೆ ಎನ್ಜಿಒ ಸಂಸ್ಥೆಗೆ ಸರ್ವೆ ನಂ.18ರಲ್ಲಿ 15 ಗುಂಟೆ ಜಮೀನು ಮಂಜೂರು ಮಾಡಿ ಸಂಪುಟ ಸಭೆ ತೀರ್ಮಾನಿಸಿದೆ. ರಾಜ್ಯದ ವಿವಿಧ ಕಡೆ ನೂತನ 7 ತಾಯಿ ಮತ್ತು ಮಗುವಿನ ಆಸ್ಪತ್ರೆ ಆರಂಭಿಸಲು 158 ಕೋಟಿ ರೂ. ಮೊತ್ತಕ್ಕೆ ಅನುಮೋದನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಸಂಪುಟ ಸಭೆಯ ಪ್ರಮುಖ ತೀರ್ಮಾನ..
- ರಾಜ್ಯದ ಅತಿಸಣ್ಣ ಕುಶಲಕರ್ಮಿಗಳಿಗಾಗಿ ಸಾಲ ಸಹಾಯಧನ ಯೋಜನೆಯನ್ನು (Loan cum subsidy scheme) (35,000 ರೂ. ಸಾಲ, 15,000 ರೂ. ಸಾಲ ಸಹಾಯಧನ) ಅನುಷ್ಠಾನಗೊಳಿಸಲು ಅನುಮೋದನೆ.
- ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೌಜಲಗಿ, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ, ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ, ಉತ್ತರ ಕನ್ನಡ ಜಿಲ್ಲೆಯ ಕುಮುಟ ತಾಲೂಕಿನ ಗೋಕರ್ಣ, ಯಾದಗಿರಿ ಜಿಲ್ಲೆಯ ಸುರಪುರ, ಕಕ್ಕೇರದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮಾದರಿ ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಿ ಜು.27ರಂದು ಹೊರಡಿಸಿರುವ ಆದೇಶಕ್ಕೆ ಘಟನೋತ್ತರ ಅನುಮೋದನೆ.
- ಪ್ರಧಾನಮಂತ್ರಿ ಆಯುಷ್ಮಾನ್ ಭಾರತ ಆರೋಗ್ಯ ಮೂಲಸೌಕರ್ಯ ಅಭಿಯಾನ (PM-ABHIM) ಯೋಜನೆಯಡಿ ತುಮಕೂರು ಜಿಲ್ಲಾ ಆಸ್ಪತ್ರೆ ಆವರಣದಲ್ಲಿ 100 ಹಾಸಿಗೆಗಳ ಸಾಮರ್ಥ್ಯದ Critical Care Blockನ್ನು ಒಟ್ಟಾರೆ 56 ಕೋಟಿಗಳ ಅಂದಾಜು ವೆಚ್ಚದಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ.
- 15ನೇ ಹಣಕಾಸು ಆಯೋಗದ ಅನುದಾನದಲ್ಲಿ ಒಟ್ಟು 154.63 ಕೋಟಿಗಳ ವೆಚ್ಚದಲ್ಲಿ 2022-23ನೇ ಸಾಲಿಗೆ ಉಪ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ರೋಗ ಪತ್ತೆ ಉಪಕರಣ, ರಾಸಾಯನಿಕ ಮತ್ತು ರೋಗ ಪತ್ತೆ ಕಿಟ್‌ಗಳನ್ನು ಖರೀದಿಸಲು ಹಾಗೂ ಪ್ರಯೋಗಾಲಯ ಪರೀಕ್ಷೆಗಳ ಮಾದರಿಯನ್ನು ಹತ್ತಿರದ ಹಬ್ ಪ್ರಯೋಗಾಲಯಗಳಿಗೆ ಸಾಗಣೆ ಮಾಡಲು ಅನುಮೋದನೆ.
- ಪ್ರಧಾನಮಂತ್ರಿ ಆಯುಷ್ಮಾನ್ ಭಾರತ ಆರೋಗ್ಯ ಮೂಲಸೌಕರ್ಯ ಅಭಿಯಾನ (PM-ABHIM) ಯೋಜನೆಯಡಿಯಲ್ಲಿ ಅನುಮೋದನೆಗೊಂಡಿರುವ ಕೋಲಾರ ಜಿಲ್ಲಾಸ್ಪತ್ರೆ, ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಆವರಣದಲ್ಲಿ 3 ತೀವ್ರ ನಿಗಾ ಘಟಕ (Critical care Block) ನಿರ್ಮಾಣ ಕಾಮಗಾರಿಗಳ ಒಟ್ಟು ಮೊತ್ತ 49.89 ಕೋಟಿಗಳ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ.
- 2022-23ನೇ ಸಾಲಿನ ರಾಷ್ಟ್ರೀಯ ಆರೋಗ್ಯ ಅಭಿಯಾನದ ಕ್ರಿಯಾ ಯೋಜನೆಯಲ್ಲಿ ಅನುಮೋದನೆಗೊಂಡಿರುವ ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ರಾಯಚೂರು, ದಾವಣಗೆರೆ, ಬಾಗಲಕೋಟೆ ಜಿಲ್ಲೆಗಳಲ್ಲಿ ನೂತನ 5 ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ನಿರ್ಮಾಣ ಹಾಗೂ ಬೆಳಗಾವಿ ಮತ್ತು ದಾವಣಗೆರೆಯಲ್ಲಿ 2 ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವ 158 ಕೋಟಿಗಳ ಮೊತ್ತದ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ.
- ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕೆ.ಸಿ. ಜನರಲ್ ಆಸ್ಪತ್ರೆ ಆವರಣದಲ್ಲಿ ಟ್ರಾಮಾಕೇರ್ ಸೆಂಟರ್ ನಿರ್ಮಾಣ ಕಾಮಗಾರಿಯನ್ನು 35 ಕೋಟಿಗಳ ಅಂದಾಜು ವಚ್ಚದಲ್ಲಿ ಕೈಗೊಳ್ಳಲು ಅಡಳಿತಾತ್ಮಕ ಅನುಮೋದನೆ.
- ತುಮಕೂರು ಜಿಲ್ಲಾಸ್ಪತ್ರೆ ಆವರಣದಲ್ಲಿ ಸರ್ಕಾರಿ ನರ್ಸಿಂಗ್ ಕಾಲೇಜು ಮತ್ತು ನರ್ಸಿಂಗ್ ಹಾಸ್ಟೆಲ್ ಕಟ್ಟಡವನ್ನು 20 ಕೋಟಿಗಳ ಅಂದಾಜು ಮೊತ್ತದಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ.
- 2022-23 ಸಾಲಿನ Project Implementation Plan (ಪಿಐಪಿ) ಯೋಜನೆಯಡಿ ಕಾರ್ಮಿಕರ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆಗಳ ಇಲಾಖೆಯಲ್ಲಿನ ಆಸ್ಪತ್ರೆಗಳು/ ಚಿಕಿತ್ಸಾಲಯಗಳು/ ರೋಗ ಪತ್ತೆ ಹಚ್ಚುವ ಕೇಂದ್ರಗಳಿಗೆ ವೈದ್ಯಕೀಯ ಉಪಕರಣಗಳನ್ನು 44 ಕೋಟಿಗಳ ವೆಚ್ಚದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ
- ಮೈಸೂರು ಜಿಲ್ಲೆಯ ನಂಜನಗೂಡು ಶ್ರೀ ಶ್ರೀಕಂಠೇಶ್ವರ ದೇವಾಲಯದಲ್ಲಿ ವಿಐಪಿ ಭಕ್ತಾದಿಗಳಿಗೆ ಕೊಠಡಿಗಳು, ಡಾರ್ಮೆಟರಿ ಅತಿಥಿಗೃಹ ಕಟ್ಟಡದ ನಿರ್ಮಾಣದ 16.52 ಕೋಟಿಗಳ ಅಂದಾಜು ವೆಚ್ಚದ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ.