ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು 3,27,747 ಕೋಟಿ ಗಾತ್ರದ ಬಜೆಟ್ ಮಂಡಿಸಿದ್ದು, ಗ್ಯಾರಂಟಿ ಹೊರೆ ನೀಗಿಸಲು ಹೆಚ್ಚಿನ ಸಾಲದ ಮೊರೆ ಹೋಗಿದೆ. 2023-24 ಸಾಲಿನಲ್ಲಿ 85,818 ಕೋಟಿ ರೂ. ಸಾಲ ಮಾಡಲು ನಿರ್ಧರಿಸಿದೆ. ಬೊಮ್ಮಾಯಿ ಮಂಡಿಸಿದ್ದ ಬಜೆಟ್ನಲ್ಲಿ 2023-24ರಲ್ಲಿ ಅಂದಾಜು 77,750 ಕೋಟಿ ಸಾಲ ಮಾಡುವುದಾಗಿ ತಿಳಿಸಿದ್ದರು. ಇದೀಗ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪಂಚ ಗ್ಯಾರಂಟಿಯ ಹೊರೆ ನೀಗಿಸಲು ಮತ್ತಷ್ಟು ಸಾಲದ ಮೊರೆ ಹೋಗಿದೆ. 9 ತಿಂಗಳ ಅವಧಿಯ ಬಜೆಟ್ನಲ್ಲಿ ಒಟ್ಟು 85,818 ಕೋಟಿ ರೂ. ಮಾಡಲು ಅಂದಾಜಿಸಿದೆ.
2023-24 ಸಾಲಿನಲ್ಲಿ ಕೇಂದ್ರ ಸರ್ಕಾರದಿಂದ 6,254 ಕೋಟಿ ರೂ. ಸಾಲ ಪಡೆಯಲು ಅಂದಾಜಿಸಲಾಗಿದೆ. ಬಹಿರಂಗ ಮಾರುಕಟ್ಟೆ ಮೂಲಕ 78,363 ಕೋಟಿ ರೂ. ಸಾಲ ಮಾಡಲು ಸರ್ಕಾರ ಮುಂದಾಗಿದೆ.
ಅಧಿಕ ಆದಾಯ ಸಂಗ್ರಹದ ಗುರಿ: ಬೊಮ್ಮಾಯಿ ಸರ್ಕಾರ ಮಂಡಿಸಿದ ತಮ್ಮ 2023-24 ಬಜೆಟ್ನಲ್ಲಿ ಒಟ್ಟು 2,26,909 ಕೋಟಿ ರೂ. ಆದಾಯ ಸಂಗ್ರಹದ ಗುರಿ ನಿಗದಿ ಪಡಿಸಲಾಗಿತ್ತು. ಅದರಂತೆ ವಾಣಿಜ್ಯ ತೆರಿಗೆ ಸಂಗ್ರಹದ ಗುರಿಯನ್ನು 92,000 ಕೋಟಿ ರೂ.ಗೆ ನಿಗದಿ ಪಡಿಸಲಾಗಿತ್ತು. ಇದೀಗ ಕಾಂಗ್ರೆಸ್ ಸರ್ಕಾರ ಹೊಸ ಬಜೆಟ್ ನಲ್ಲಿ 2023-24 ಸಾಲಿನಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ರಾಜಸ್ವ ಸಂಗ್ರಹಣೆ ಗುರಿಯನ್ನು 1,01,000 ಕೋಟಿ ರೂ. ನಿಗದಿ ಮಾಡಿದೆ.
2023-24 ಸಾಲಿನ ಬೊಮ್ಮಾಯಿ ಬಜೆಟ್ನಲ್ಲಿ 35,000 ಕೋಟಿ ರೂ. ಅಬಕಾರಿ ಆದಾಯ ಸಂಗ್ರಹದ ಗುರಿ ನಿಗದಿ ಮಾಡಲಾಗಿತ್ತು. ಸಿಎಂ ಸಿದ್ದರಾಮಯ್ಯ ತಮ್ಮ ಬಜೆಟ್ನಲ್ಲಿ 2023-24 ಸಾಲಿನಲ್ಲಿ ಅಬಕಾರಿ ಇಲಾಖೆಗೆ 36,000 ಕೋಟಿ ರೂ. ರಾಜಸ್ವ ಸಂಗ್ರಹದ ಗುರಿ ನಿಗದಿ ಮಾಡಿದೆ.
2023-24 ಸಾಲಿನಲ್ಲಿ ನಿರ್ಗಮಿತ ಸಿಎಂ ಬೊಮ್ಮಾಯಿ ತಮ್ಮ ಬಜೆಟ್ನಲ್ಲಿ ನೋಂದಣಿ ಹಾಗೂ ಮುದ್ರಾಂಕ ಶುಲ್ಕ ರೂಪದಲ್ಲಿ ಸುಮಾರು 19,000 ಕೋಟಿ ರೂ. ಆದಾಯ ಸಂಗ್ರಹದ ಗುರಿ ನಿಗದಿ ಪಡಿಸಿದ್ದರು. ಆದರೆ ಸಿಎಂ ಸಿದ್ದರಾಮಯ್ಯ ತಮ್ಮ ಬಜೆಟ್ನಲ್ಲಿ 2023-24 ಸಾಲಿನಲ್ಲಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಮೂಲಕ 25,000 ಕೋಟಿ ರೂ. ಸಂಗ್ರಹ ಗುರಿ ನಿಗದಿ ಮಾಡಿದೆ.
2023-24 ಸಾಲಿನಲ್ಲಿ ನಿರ್ಗಮಿತ ಸಿಎಂ ಬೊಮ್ಮಾಯಿ ತಮ್ಮ ಬಜೆಟ್ನಲ್ಲಿ ಮೋಟಾರು ವಾಹನ ತೆರಿಗೆ ರೂಪದಲ್ಲಿ ಸುಮಾರು 10,500 ಕೋಟಿ ರೂ. ರಾಜಸ್ವ ಸಂಗ್ರಹದ ಗುರಿ ನಿಗದಿ ಪಡಿಸಿದ್ದರು. ಇದೀಗ ಕಾಂಗ್ರೆಸ್ ಸರ್ಕಾರ ಬಜೆಟ್ನಲ್ಲಿ ಮೋಟಾರು ಮತ್ತು ವಾಹನ ತೆರಿಗೆ ಮೂಲಕ 11,500 ಕೋಟಿ ರೂ. ಸಂಗ್ರಹದ ಗುರಿ ನಿಗದಿ ಮಾಡಿದೆ. ಇನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ 9,000 ಕೋಟಿ ರೂ. ರಾಜಸ್ವ ಸಂಗ್ರಹದ ಗುರಿ ನೀಡಿದೆ.