ಬೆಂಗಳೂರು:2023-24 ನೇ ಸಾಲಿನ ಆಯವ್ಯದಲ್ಲಿ ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ ವಲಯಕ್ಕೆ 80,318 ಕೋಟಿ ಅನುದಾನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದು, ಕೆಲ ಹೊಸ ಯೋಜನೆಗಳ ಘೋಷಣೆ, ಅನುದಾನ ಹೆಚ್ಚಳ, ಹೊಸ ಆಸ್ಪತ್ರೆ ಸ್ಥಾಪನೆ, ಕಾರ್ಮಿಕರ ಕಲ್ಯಾಣ, ಎಸ್ಸಿ, ಎಸ್ಟಿ ಅಭ್ಯುದಯಕ್ಕೆ ಭರಪೂರ ಕೊಡುಗೆ ನೀಡಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ತಮ್ಮ ಎರಡನೇ ಬಜೆಟ್ ಮಂಡಿಸಿದರು. ಚುನಾವಣಾ ವರ್ಷವಾಗಿರುವ ಹಿನ್ನೆಲೆಯಲ್ಲಿ ಹಲವು ಹೊಸ ಯೋಜನೆಗಳನ್ನು ಘೋಷಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾಗಿ ಮುಖ್ಯಮಂತ್ರಿ ವಿದ್ಯಾಶಕ್ತಿ ಯೋಜನೆ ಮೊದಲನೆಯದ್ದಾಗಿದೆ. ಎಲ್ಲಾ ಪ್ರೌಢ ಶಾಲಾ ಮಕ್ಕಳು ಉನ್ನತ ಶಿಕ್ಷಣ ಹೊಂದಲು ಈ ಯೋಜನೆ ಘೋಷಿಸಿದ್ದು, ಇದರಡಿ ಪ್ರವೇಶ ಪಡೆಯುವ ಎಲ್ಲ ಸರ್ಕಾರಿ ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳಲ್ಲಿ ಪೂರ್ಣ ಶುಲ್ಕ ವಿನಾಯಿತಿ ನೀಡಲಾಗುತ್ತದೆ. 8 ಲಕ್ಷ ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗಲಿದೆ.
ನಮ್ಮ ನೆಲೆ ಹೊಸ ಯೋಜನೆ :ನಮ್ಮ ನೆಲೆ ಹೊಸ ಯೋಜನೆ ಘೋಷಣೆ ಮಾಡಿದ್ದು, ಗೃಹ ಮಂಡಳಿ ನಿರ್ಮಿಸುವ ನಿವೇಶನಗಳಲ್ಲಿ ಮೂರನೇ ಒಂದು ಭಾಗ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಹಂಚಿಕೆ ಮಾಡುವ ಘೋಷಣೆ ಮಾಡಿದ್ದು ಆ ಮೂಲಕ ದುರ್ಬಲ ವರ್ಗದ ಮತಬುಟ್ಟಿಗೆ ಬೊಮ್ಮಾಯಿ ಸರ್ಕಾರ ಕೈ ಹಾಕಿದೆ.
ಗ್ರಾಮೀಣ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್ಸುಗಳ ಸೇವೆ ಒದಗಿಸಲು 100 ಕೋಟಿ ವೆಚ್ಚಸಲ್ಲಿ 1000 ಹೊಸ ಕಾರ್ಯಾಚರಣೆ ಮಾಡಲು ಮಕ್ಕಳ ಬಸ್ಸು ಯೋಜನೆ ಆರಂಭಿಸುತ್ತಿದ್ದು ಇದರಿಂದ 2 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಗ್ರಾಮೀಣ ಪ್ರದೇಶದಲ್ಲಿ ವರ್ಷಕ್ಕೆರಡು ಬಾರಿ ನವಜಾತ ಶಿಶುಗಳಿಂದ ಆರು ವರ್ಷದವರೆಗಿನ ಮಕ್ಕಳ ಆರೋಗ್ಯ ತಪಾಸಣೆ ಮಾಡಲು ವಾತ್ಸಲ್ಯ ಎನ್ನುವ ಹೊಸ ಯೋಜನೆ ರೂಪಿಸಲಾಗಿದೆ. ಅಲ್ಲದೆ 12.5 ಕೋಟಿ ವೆಚ್ಚದಲ್ಲಿ ನಗು ಮಗು ವಾಹನ ಯೋಜನೆ ತಂದಿದ್ದು ತಾಲೂಕು ಆಸ್ಪತ್ರೆಯಲ್ಲಿ ಹೆರಿಗೆಯಾದ ತಾಯಿ, ನವಜಾತ ಶಿಶುವನ್ನು ಮನಗೆ ತಲುಪಿಸಲು ಈ ಯೋಜನೆ ತರಲಾಗಿದೆ.
ಮಹಿಳೆಯರ ಆರ್ಥಿಕ ಚಟುವಟಿಕೆ ಉತ್ತೇಜಿಸಲು ಗೃಹಿಣಿ ಶಕ್ತಿ ಯೋಜನೆ ಘೋಷಣೆ ಮಾಡಲಾಗಿದೆ. ಇದರ ಅಡಿಯಲ್ಲಿ ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಮಾಸಿಕ 500 ರೂ.ಸಹಾಯಧನ ಡಿಬಿಟಿ ಮೂಲಕ ಪಾವತಿ, 1000 ಕೋಟಿ ಅನುದಾನದಲ್ಲಿ ಅಸಂಘಟಿತ ವಲಯದ ಮಹಿಳಾ ಕಾರ್ಮಿಕರಿಗೆ ಉಚಿತ ಬಸ್ ಯೋಜನೆ, ವಿದ್ಯಾರ್ಥಿನಿಯರಿಗೆ ವಿದ್ಯಾವಾಹಿನಿ ಯೋಜನೆಯಡಿ 350 ಕೋಟಿ ವೆಚ್ಚದಲ್ಲಿ ಉಚಿತ ಬಸ್ ಪಾಸ್ ನೀಡುವ ಘೋಷಣೆ ಮಾಡಲಾಗಿದೆ.
ಇನ್ನುಳಿದಂತೆ ಆಶಾ ಕಾರ್ಯಕರ್ತೆಯರು, ಅಂಗನವಾಡಿ, ಬಿಸಿಯೂಟ ತಯಾರಕರು, ಅತಿಥಿ ಉಪನ್ಯಾಸಕರು, ಅತಿಥಿ ಶಿಕ್ಷಕರು, ಗ್ರಾಮ ಸಹಾಯಕರ ಗೌರವಧನ ಹೆಚ್ಚಳ ಮಾಡಿದ್ದು ಇದಕ್ಕಾಗಿ 775 ಕೋಟಿ ಬಿಡುಗಡೆ ಮಾಡಿದ್ದು, ಆಶಾ ಕಾರ್ಯಕರ್ತೆಯರು, ಗ್ರಂಥಪಾಲರು ಮಾಸಿಕ ಗೌರವಧನ 1000 ರೂ.ದಂತೆ ಹೆಚ್ಚಳ ಮಾಡಲಾಗಿದೆ.
ರೈತ ವಿದ್ಯಾನಿಧಿ ವಿಸ್ತರಣೆ:ರೈತ ವಿದ್ಯಾನಿಧಿ ಸೌಲಭ್ಯವನ್ನು ಕೃಷಿ ಕೂಲಿ ಕಾರ್ಮಿಕರು, ನೇಕಾರರು, ಮೀನುಗಾರರು, ಯಲ್ಲೋಬೋರ್ಡ್ ಟ್ಯಾಕ್ಸಿ ಚಾಲಕರು, ಆಟೋರಿಕ್ಷಾ ಚಾಲಕರ ಮಕ್ಕಳಿಗೆ ವಿಸ್ತರಣೆ ಮಾಡಲಾಗಿದೆ.
ಪಬ್ಲಿಕ್ ಶಾಲೆ ಇಲ್ಲದ ರಾಜ್ಯದ 23 ತಾಲ್ಲೂಕಿನಲ್ಲಿ ಈ ಬಾರಿ ಹೊಸದಾಗಿ ಪಬ್ಲಿಕ್ ಶಾಲೆ ಆರಂಭ ಮಾಡುವುದಾಗಿ ಬಜೆಟ್ ನಲ್ಲಿ ಘೋಷಿಸಿದ್ದು, ಚಿಕ್ಕಮಗಳೂರಿನಲ್ಲಿ ಹೊಸ ವಿಶ್ವವಿದ್ಯಾಲಯ ಸ್ಥಾಪನೆ ಮಾಡುವುದಾಗಿ ಪ್ರಕಟಿಸಲಾಗಿದೆ. ಬೆಂಗಳೂರು, ಹಾವೇರಿ, ಹಾಸನ, ಕಾರವಾರ, ಕೆ.ಆರ್.ಪೇಟೆ, ತಳ್ಕಲ್, ರಾಮನಗರ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಕೆಐಟಿಗಳಾಗಿ ಉನ್ನತೀಕರಿಸಲು 50 ಕೋಟಿ ಅನುದಾನ ನೀಡಲಾಗಿದೆ.
ಹಳ್ಳಿಮುತ್ತು ಯೋಜನೆಯಡಿ 500 ಗ್ರಾಮೀಣ ವಿದ್ಯಾರ್ಥಿಗಳಿಗೆ ವೃತ್ತಿಶಿಕ್ಷಣ ಉಚಿತವಾಗಿ ನೀಡುವ ಘೋಷಣೆ ಮಾಡಿದ್ದು, ಬೆಂಗಳೂರಿನಲ್ಲಿ 5 ಕಿಲೋಮೀಟ್ ಒಳಗಡೆ ಪಾರಂಪರಿಕ ಮತ್ತು ಶೈಕ್ಷಣಿಕ ಜಿಲ್ಲೆ ಘೋಷಣೆಗೆ ಅಧ್ಯಯನ ನಡೆಸುವುದಾಗಿ ತಿಳಿಸಲಾಗಿದೆ.
ಕ್ರಿಟಿಕಲ್ ಕೇರ್ ಬ್ಲಾಕ್ ಸ್ಥಾಪನೆ:ತುಮಕೂರು, ಚಿಕ್ಕನಾಯಕನಹಳ್ಳಿಯಲ್ಲಿ ಹೊಸ ಪಾಲಿಟೆಕ್ನಿಕ್ ಆರಂಭ, ಖಾನಾಪುರ, ಆನೇಕಲ್, ಶಿರಹಟ್ಟಿ, ಶೃಂಗೇರಿ, ಯಳಂದೂರು, ನೆಲಮಂಗಲ, ಹೊಸಕೋಟೆ ಸಮುದಾಯ ಆರೋಗ್ಯ ಕೇಂದ್ರವನ್ನು 100 ಹಾಸಿಗೆ ತಾಲ್ಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವುದು, ಪಿಎಂ-ಎಬಿಹೆಚ್ಐಎಂ ಅಡಿ ಕೋಲಾರ, ಬಾಗಲಕೋಟೆ, ಯಾದಗಿರಿ, ಗದಗ, ಚಿಕ್ಕಮಗಳೂರು, ರಾಮನಗರ, ವಿಜಯಪುರ, ದೊಡ್ಡಬಳ್ಳಾಪುರ ಆಸ್ಪತ್ರೆಗಳಲ್ಲಿ 50 ಹಾಸಿಗೆಯ ಕ್ರಿಟಿಕಲ್ ಕೇರ್ ಬ್ಲಾಕ್ ಮತ್ತು ತುಮಕೂರು, ಬೆಂಗಳೂರಿನಲ್ಲಿ 100 ಹಾಸಿಗೆಯ ಕ್ರಿಟಿಕಲ್ ಕೇರ್ ಬ್ಲಾಕ್ ಸ್ಥಾಪನೆ ಮಾಡುವ ಘೋಷಣೆ ಮಾಡಲಾಗಿದೆ.
ಹಾವೇರಿ ಮತ್ತು ಸವಣೂರಿನಲ್ಲಿ ಹೊಸದಾಗಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸ್ಥಾಪನೆ, ಮಹಿಳೆಯರ ರಕ್ತಹೀನತೆ, ಅಪೌಷ್ಟಿಕತೆ ನಿವಾರಣೆಗೆ 100 ಕೋಟಿ,25 ಕೋಟಿ ವೆಚ್ಚದಲ್ಲಿ ನಿಮ್ಹಾನ್ಸ್ ಸಹಯೋಗದಲ್ಲಿ ಮೆದುಳು ಆರೋಗ್ಯ ಯೋಜನೆ, ಕ್ಯಾನ್ಸರ್ ಪತ್ತೆ ಸಾಧನ ಖರೀದಿಗೆ 12 ಕೋಟಿ ಅನುದಾನ, ಡಯಾಲಿಸಿಸ್ ಸೈಕಲ್ ಹೆಚ್ಚಳ ಮಾಡಿದ್ದು 60 ಸಾವಿರದಿಂದ 1 ಲಕ್ಷ ಸೈಕಲ್ ಡಯಾಲಿಸಿಸ್ ಘೋಷಣೆ ಮಾಡಲಾಗಿದೆ.
ರೆಫರಲ್ ಪ್ರಯೋಗಾಲಯ ಸ್ಥಾಪನೆ:ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾ ಪ್ರಯೋಗಾಲಯ, ತಾಲ್ಲೂಕು ಪ್ರಯೋಗಾಲಯ, ಬೆಂಗಳೂರಿನಲ್ಲಿ ರಾಜ್ಯ ರೆಫರಲ್ ಪ್ರಯೋಗಾಲಯ ಸ್ಥಾಪನೆ ಮಾಡುವುದಾಗಿ ಬಜೆಟ್ ನಲ್ಲಿ ತಿಳಿಸಿದ್ದು, 65 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಗೆ 137 ಕೋಟ ಅನುದಾನ, ರಾಯಚೂರಿನಲ್ಲಿ ಏಮ್ಸ್ ಮಾದರಿ ಆಸ್ಪತ್ರೆ, ಹಾಗು ಬಹು ಬೇಡಿಕೆಯಾಗಿದ್ದ ಉತ್ತರ ಕನ್ನಡ ಜಿಲ್ಲೆ ಕುಮುಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ಮಾಡುವ ಘೋಷಣೆ ಮಾಡಲಾಗಿದೆ.
ಇದೇ ಮೊದಲ ಬಾರಿಗೆ ಬೆಂಗಳೂರು, ಹುಬ್ಬಳ್ಳಿ, ಮೈಸೂರು, ಕಲಬುರಗಿಯ 4 ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಐವಿಎಫ್ ಕ್ಲಿನಿಕ್ ಆರಂಭಿಸಲು 6 ಕೋಟಿ ಅನುದಾನದ ಜೊತೆಗೆ ನಿಮ್ಹಾನ್ಸ್ ಆವರಣದಲ್ಲಿ 146 ಕೋಟಿ ವೆಚ್ಚದಲ್ಲಿ ಅಂಗಾಂಗ ಜೋಡಣೆಗೆ ಮೀಸಲಾದ ದೇಶದ ಮೊದಲ ಸಾರ್ವಜನಿಕ ಆಸ್ಪತ್ರೆ ಸ್ಥಾಪನೆ ಮಾಡುವುದಾಗಿ ತಿಳಿಸಲಾಗಿದೆ.
ಸ್ವಯಂ ಉದ್ಯೋಗಕ್ಕೆ ಬಡ್ಡಿ ರಹಿತ ಸಾಲ ಸೌಲಭ್ಯ:45 ಸಾವಿರ ಸ್ವಸಹಾಯ ಗುಂಪುಗಳಿಗೆ 1800 ಕೋಟಿ ಶೂನ್ಯ ಬಡ್ಡಿ ದರದ ಸಾಲ ಸೌಲಭ್ಯ, 3538 ಅಂಗನಾಡಿ ಸ್ಥಾಪನೆಗೆ 270 ಕೋಟಿ ಅನುದಾನ, ಆಸಿಡ್ ದಾಳಿ ಸಂತ್ರಸ್ಥ ಮಹಿಳೆಯರಿಗೆ ಸ್ವಯಂ ಉದ್ಯೋಗಕ್ಕೆ ಬಡ್ಡಿ ರಹಿತ ಸಾಲ ಸೌಲಭ್ಯ, ವಿಶೇಷ ಚೇತನರಿಗಾಗಿ ಸ್ವಚೇತನಾ ಯೋಜನೆಯಡಿ 5 ಸಾವಿರ ಅರ್ಹರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನಕ್ಕೆ 50 ಕೋಟಿ ಅನುದಾನ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರಿಯರಿಗೆ ಗ್ರಾಚ್ಯುಟಿ ನೀಡಲು 40 ಕೋಟ ಅನುದಾನ ಸೇರಿ ಒಟ್ಟಾರೆಯಾಗಿ ಮಕ್ಕಳ ಅಭ್ಯೂದಯಕ್ಕೆ 47256 ಕೋಟಿ ಅನುದಾನ ಒದಗಿಸಲಾಗಿದೆ.
ಎಸ್ಸಿ, ಎಸ್ಟಿ ಸಮುದಾಯದ ಅಭ್ಯುದಯಕ್ಕೆ 30,215 ಕೋಟಿ ಅನುದಾನ, ಹಿಂದುಳಿದ ವರ್ಗ ಸಮುದಾಯಗಳ ಮಠಗಳಿಗೆ ಶೈಕ್ಷಣಿಕ ಕಾರ್ಯಗಳಿಗಾಗಿ 1,115 ಸಂಸ್ಥೆಗಳಿಗೆ 375 ಕೋಟಿ ಅನುದಾನ ಪ್ರಕಟಿಸಿದ್ದು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗದಲ್ಲಿ 18 ಕೋಟಿ ವೆಚ್ಚದಲ್ಲಿ ನಾರಾಯಣಗುರು ವಸತಿ ಶಾಲೆ ಆರಂಭ ಮಾಡುವುದಾಗಿ ತಿಳಿಸಿದೆ. ರಾಜ್ಯದಲ್ಲಿ 40 ಸಾವಿರಕ್ಕಿಂತಲೂ ಹೆಚ್ಚಿನ ವಕ್ಫ್ ಆಸ್ತಿ ರಕ್ಷಣೆಗೆ 10 ಕೋಟಿ, ಖಬರಸ್ತಾನ ಅಭಿವೃದ್ಧಿಗೆ 10 ಕೋಟಿ ಅನುದಾನ ಪ್ರಕಟಿಸಿದ್ದು, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮಕ್ಕೆ 110 ಕೋಟಿ ಅನುದಾನ ನೀಡಲಾಗಿದೆ. ಈ ಬಾರಿ ಪಡಿತರದಲ್ಲಿ 1 ಕೆಜಿ ಹೆಚ್ಚುವರಿ ಅಕ್ಕಿ ವಿತರಣೆ ಮಾಡುವ ಘೋಷಣೆ ಮಾಡಿದ್ದು ಇದಕ್ಕಾಗಿ 4000 ಕೋಟಿ ಅನುದಾನ ಮೀಸಲಿರಿಸಿದೆ.
ಅಸಂಘಟಿತ ಕಾರ್ಮಿಕರ ಕಲ್ಯಾಣ ನಿಧಿ:ರಾಜ್ಯಾದ್ಯಂತ 19 ಕಾರ್ಮಿಕ ರಾಜ್ಯ ವಿಮಾ ಚಿಕಿತ್ಸಾಲಯ ನಿರ್ಮಾಣ, ಹುಬ್ಬಳ್ಳಿ ಮತ್ತು ದಾವಣಗೆರೆಯಲ್ಲಿ ಇಎಸ್ಐ ಆಸ್ಪತ್ರೆ 50 ರಿಂದ 100 ಆಸ್ಪತ್ರೆಗೆ ಮೇಲ್ದರ್ಜೆಗೇರಿಸುವ ಘೋಷಣೆ ಮಾಡಿದ್ದು, ಏಳು ಇಎಸ್ಐ ಆಸ್ಪತ್ರೆಗಳಲ್ಲಿ ಐಸಿಯು ಘಟಕ ಆರಂಭ, 6 ಆಸ್ಪತ್ರೆಗಳಲ್ಲಿ ಆಯುಷ್ ಘಟಕ ಪ್ರಾರಂಭ ಮತ್ತು ಜಿಲ್ಲೆಗೊಂದು ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳಾಗಿ ಉನ್ನತೀಕರಿಸಲು ಕೇಂದ್ರ ಕಾರ್ಮಿಕ ಮಂತ್ರಾಲಯಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸಲಾಗಿದೆ. 75 ಲಕ್ಷ ಅಸಂಘಟಿತ ಕಾರ್ಮಿಕರಿಗಾಗಿ ಅಸಂಘಟಿತ ಕಾರ್ಮಿಕರ ಕಲ್ಯಾಣ ನಿಧಿ ಸ್ಥಾಪನೆ ಮಾಡುವುದಾಗಿ ತಿಳಿಸಿದೆ.
ವಿದೇಶಿ ಉದ್ಯೋಗಾಕಾಂಕ್ಷಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲು ಅಂತಾರಾಷ್ಟ್ರೀಯ ವಕಸೆ ಕೇಂದ್ರದ ವತಿಯಿಂದ 8 ಜಿಲ್ಲೆಗಳಲ್ಲಿ ಸಂಪನ್ಮೂಲ ಮತ್ತು ಮಾಹಿತಿ ಕೇಂದ್ರಗಳನ್ನು ಸ್ಥಾಪಿಸಿದ್ದು, ವಿದೇಶಾಂಗ ಸಚಿವಾಲಯವು 4 ಜಿಲ್ಲೆಗಳಲ್ಲಿ ಪೂರ್ವ ನಿರ್ಗಮನದ ತರಬೇತಿ ಕೇಂದ್ರ ಸ್ಥಾಪಿಸಲು ಅನುಮೋದನೆ ನೀಡಲಾಗಿದೆ.
ಇದನ್ನೂ ಓದಿ:ಗೃಹಿಣಿ ಶಕ್ತಿ, ನಮ್ಮ ನೆಲೆ ಹೊಸ ಯೋಜನೆ ಘೋಷಣೆ; ಬಜೆಟ್ ವಲಯವಾರು ಹಂಚಿಕೆ ಹೀಗಿದೆ