ಬೆಂಗಳೂರು:ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪರಿಚಯಿಸಿದ್ದ ವಲಯವಾರು ರೀತಿಯ ಬಜೆಟ್ ಹಂಚಿಕೆಯನ್ನೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಮುಂದುವರೆಸಿದ್ದು, ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ ವಲಯಕ್ಕೆ 68,479 ಕೋಟಿ ಅನುದಾನ ಪ್ರಕಟಿಸಿದ್ದಾರೆ. ಕಳೆದ ಸಾಲಿಗಿಂತ ಈ ಬಾರಿ 6,329 ಕೋಟಿ ಹೆಚ್ಚು ಅನುದಾನ ನೀಡಿದ್ದಾರೆ.
ಮರಕ್ಕೆ ಬಾಯಿ ಬೇರೆಂದು ತಳಕ್ಕೆ ನೀರೆರೆದರೆ ಮೇಲೆ ಪಲ್ಲವಿಸಿತ್ತು ನೋಡಾ! ಎನ್ನುವ ಬಸವಣ್ಣನ ವಚನದ ಸಾಲುಗಳನ್ನು ಪ್ರಸ್ತಾಪಿಸಿ ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ ವಲಯಕ್ಕೆ ಬಜೆಟ್ನಲ್ಲಿ ನೀಡಲಾದ ಅನುದಾನದ ವಿವರಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಶಿಕ್ಷಣ, ಆರೋಗ್ಯ, ಸಮಾಜ ಕಲ್ಯಾಣ, ಒಬಿಸಿ ಕಲ್ಯಾಣ, ಅಲ್ಪಸಂಖ್ಯಾತ ಕಲ್ಯಾಣ, ವಸತಿ, ಕಾರ್ಮಿಕ, ಕೌಶಲ್ಯಾಭಿವೃದ್ಧಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗಳನ್ನು ಒಳಗೊಂಡ ಇಲಾಖೆಗಳಿಗೆ ಈ ವಲಯ ಅನ್ವಯಿಸಲಿದೆ.
ಖಾಸಗಿ ವೈದ್ಯಕೀಯ ಕಾಲೇಜುಗಳ ದುಬಾರಿ ಶುಲ್ಕಕ್ಕೆ ಅಂಕುಶ?ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್ನಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳ ಶುಲ್ಕ ನಿಯಂತ್ರಣ ಪ್ರಸ್ತಾಪ ಮಾಡಿದ್ದಾರೆ. ಉಕ್ರೇನ್ ಘಟನೆ ನಂತರ ವೈದ್ಯಕೀಯ ಶಿಕ್ಷಣ ಸುಧಾರಣೆಗೆ ಮುಂದಾಗಿರುವ ಸಿಎಂ ಅಲ್ಪ ಸಮಯದಲ್ಲೇ ಈ ಕುರಿತು ಬಜೆಟ್ನಲ್ಲೇ ಪ್ರಸ್ತಾಪ ಮಾಡಿದ್ದಾರೆ. ಖಾಸಗಿ ವೈದ್ಯಕೀಯ ಕಾಲೇಜುಗಳನ್ನು ಎ.ಬಿ.ಸಿ.ಡಿ ಎಂದು ವರ್ಗೀಕರಿಸಿ ಶುಲ್ಕ ನಿಯಂತ್ರಣ ಸಮಿತಿ ಮೂಲಕ ಶುಲ್ಕ ನಿಗದಿಪಡಿಸಲಾಗುತ್ತದೆ ಎನ್ನುವ ಘೋಷಣೆ ಮಾಡಿದ್ದಾರೆ.
ಅನುದಾನದ ವಿವರ:
• 100 ತಾಲೂಕುಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಎರಡು ವರ್ಷದಲ್ಲಿ 25 ಹಾಸಿಗೆ ಮಾದರಿ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಸಾವಿರ ಕೋಟಿ ವೆಚ್ಚದಲ್ಲಿ ಉನ್ನತೀಕರಣ.
• ಎಸ್ಟಿಪಿ /ಟಿಎಸ್ಪಿ ಯೋಜನೆಯಡಿ ಎಸ್ಸಿ/ಎಸ್ಟಿ ವಿದ್ಯಾರ್ಥಿಗಳಿಗೆ 750 ಕೋಟಿ ವೆಚ್ಚದಲ್ಲಿ 100 ಅಂಬೇಡ್ಕರ್ ವಿದ್ಯಾರ್ಥಿನಿಲಯ, 10 ಕ್ರೈಸ್ ವಸತಿ ಶಾಲೆ ಕಟ್ಟಡ ನಿರ್ಮಾಣ.
• 165 ಕೋಟಿ ವೆಚ್ಚದಲ್ಲಿ 50 ಕನಕದಾಸ ವಿದ್ಯಾರ್ಥಿ ನಿಲಯಗಳಿಗೆ ಸುಸಜ್ಜಿತ ಕಟ್ಟಡ ನಿರ್ಮಾಣ.
• ಅಪೌಷ್ಟಿಕತೆ ನಿವಾರಣೆಗೆ ಹೆಚ್ಚುವರಿಯಾಗಿ 37 ಪೌಷ್ಟಿಕ ಪುನರ್ವಸತಿ ಕೇಂದ್ರ ಸ್ಥಾಪನೆ.
• ಸ್ವಂತ ಕಟ್ಟಡ ಇಲ್ಲದ 1000 ಅಂಗನವಾಡಿಗಳಿಗೆ ನರೇಗಾ ಯೋಜನೆ ಅಡಿ ಕಟ್ಟಡ ನಿರ್ಮಾಣ.
• ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ 500 ಕೋಟಿ ಅನುದಾನ.
• ರಾಷ್ಟ್ರೀಯ ಶಿಕ್ಷಣ ನೀತಿಯಾನುಸಾರ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣ, ಶಿಕ್ಷಕರ ಶಿಕ್ಷಣ ಮತ್ರು ಮತ್ತು ವಯಸ್ಕರ ಶಿಕ್ಷಣಕ್ಕೆ ನೂತನ ಪಠ್ಯಕ್ರಮ ಜಾರಿ ಹಾಗು 20 ಸಾವಿರ ಅಂಗನವಾಡಿಗಳಲ್ಲಿ 30 ಕೋಟಿ ವೆಚ್ಚದ ಪಠ್ಯಕ್ರಮ.
• 2 ವರ್ಷದಲ್ಲಿ ಸಾವಿರ ಗ್ರಾಮ ಪಂಚಾಯತ್ಗಳನ್ನು ಸಂಪೂರ್ಣ ಸಾಕ್ಷರ ಗ್ರಾಮ ಪಂಚಾಯತ್ ಆಗಿ ಮಾರ್ಪಾಡು.
• 15 ಸಾವಿರ ಶಿಕ್ಷಕರ ನೇಮಕಾತಿಗೆ ಅನುಮೋದನೆ, ನೇಮಕಾತಿವರೆಗೂ 27 ಸಾವಿರ ಅತಿಥಿ ಉಪನ್ಯಾಸಕರ ನೇಮಕ.
• ಕೆಪಿಎಸ್ಸಿ, ಯುಪಿಎಸ್ಸಿ, ಎಸ್ಸೆಸ್ಸಿ, ಬ್ಯಾಂಕಿಂಗ್, ರೈಲ್ವೆ, ಸಿಡಿಎಸ್, ನೀಟ್, ಜೆಇಇ ತರಬೇತಿಗೆ ಮುಖ್ಯಮಂತ್ರಿ ವಿದ್ಯಾರ್ಥಿ ಮಾರ್ಗದರ್ಶಿನಿ ಹೊಸ ಯೋಜನೆ ಜಾರಿ, ಆನ್ಲೈನ್ ಮೂಲಕ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ.
• ರಾಜ್ಯದ ಏಳು ಇಂಜಿನಿಯರಿಂಗ್ ಕಾಲೇಜುಗಳನ್ನು ಕರ್ನಾಟಕ ತಾಂತ್ರಿಕ ಸಂಸ್ಥೆಗಳಾಗಿ ಉನ್ನತೀಕರಿಸಿ ವಿದೇಶಿ ವಿವಿ ಜೊತೆ ಒಪ್ಪಂದ.
• ಚಾಮರಾಜನಗರ, ಬೀದರ್, ಹಾವೇರಿ, ಹಾಸನ, ಕೊಡಗು, ಕೊಪ್ಪಳ, ಬಾಗಲಕೋಟೆ ಜಿಲ್ಲೆಗಳಲ್ಲಿ ವಿನೂತನ ಮಾದರಿಯ ಏಳು ವಿಶ್ವವಿದ್ಯಾಲಯಗಳ ಸ್ಥಾಪನೆ.
ಆರೋಗ್ಯ:
• ರಾಜ್ಯದ ಪ್ರಮುಖ ನಗರಗಳಲ್ಲಿ 438 ನಮ್ಮ ಕ್ಲಿನಿಕ್ ಸ್ಥಾಪನೆ. ಬೆಂಗಳೂರಿನ ಎಲ್ಲಾ ವಾರ್ಡ್ಗೂ ವಿಸ್ತರಣೆ.
• ರಾಜ್ಯದ ಏಳು ತಾಲೂಕು ಆಸ್ಪತ್ರೆಗಳನ್ನು 100 ಹಾಸಿಗೆ ಆಸ್ಪತ್ರೆ ಆಗಿ ಮೇಲ್ದರ್ಜೆಗೇರಿಸುವುದು.
• ರಾಜ್ಯದ 75 ತಾಲೂಕು ಆಸ್ಪತ್ರೆಯಲ್ಲಿ ಜಯದೇವ ಹೃದ್ರೋಗ ಸಂಸ್ಥೆ ಸಹಯೋಗದಲ್ಲಿ ಹೃದಯ ಸಂಬಂಧಿ ಚಿಕಿತ್ಸೆ.
• 200 ಕ್ಕೂ ಹೆಚ್ಚು ಹಾಸಿಗೆ ಸಾಮರ್ಥ್ಯ ಇರುವ ಸರ್ಕಾರಿ ಆಸ್ಪತ್ರೆಗಳನ್ನು ಬೋಧನಾ ಆಸ್ಪತ್ರೆಗಳಾಗಿ ಪರಿವರ್ತನೆ.
• ದಕ್ಷಿಣ ಕನ್ನಡ, ಚಾಮರಾಜ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ವಿದ್ಯಾರ್ಥಿನಿಯರಿಗೆ ಮೆನ್ ಸ್ಟ್ರುಯಲ್ ಕಪ್ ವಿತರಣೆ.
• ಬೀದರ್, ಚಾಮರಾಜನಗರ, ಹಾವೇರಿ, ಚಿಕ್ಕಮಗಳೂರಿನಲ್ಲಿ ಮುಖ್ಯಮಂತ್ರಿ ಆರೋಗ್ಯ ವಾಹಿತಿ ಹೊಸ ಯೋಜನೆ ಜಾರಿ. 11 ಕೋಟಿ ವೆಚ್ಚದಲ್ಲಿ ಸಂಚಾರಿ ಕ್ಲಿನಿಕ್ ಆರಂಭ.
• ಖಾಸಗಿ ವಲಯದಲ್ಲಿ ಏರ್ ಆಂಬ್ಯುಲೆನ್ಸ್ ಸೇವೆ ಪ್ರಾರಂಭಕ್ಕೆ ಪ್ರೋತ್ಸಾಹ.
• ಶಿವಮೊಗ್ಗ ಆಯುಷ್ ವಿವಿ ಬಲವರ್ಧನೆ, ಹಾವೇರಿ ಜಿಲ್ಲೆ ಸವಣೂರು ತಾಲೂಕಿನಲ್ಲಿ ಹೊಸ ಆಯುರ್ವೇದ ಕಾಲೇಜು ಸ್ಥಾಪನೆ, ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ಆಯಷ್ ವಿಭಾಗ ಆರಂಭ.
• ಆಶಾ ಕಾರ್ಯಕರ್ತೆಯರ ಗೌರವ ಧನ ಸಾವಿರ ರೂ. ಗಳಷ್ಟು ಹೆಚ್ಚಳ.
• 600 ಕೋಟಿ ವೆಚ್ಚದಲ್ಲಿ ರಾಮನಗರದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿ ಕ್ಯಾಂಪಸ್ ಅಭಿವೃದ್ಧಿ.
• ಹುಬ್ಬಳ್ಳಿಯಲ್ಲಿ 250 ಕೋಟಿ ವೆಚ್ಚದಲ್ಲಿ ಜಯದೇವ ಹೃದ್ರೋಗ ಸಂಸ್ಥೆ ಪ್ರಾದೇಶಿಕ ಕೇಂದ್ರ ಸ್ಥಾಪನೆ.
• ಬೌರಿಂಗ್ ಆಸ್ಪತ್ರೆಯಲ್ಲಿ 500 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಹೊಸದಾಗಿ ಮೂರು ಹಂತದಲ್ಲಿ ಮಾಡ್ಯುಲಾರ್ ವಿಧಾನದಲ್ಲಿ ನಿರ್ಮಾಣ.
• ಬೆಳಗಾವಿಯಲ್ಲಿ ಕಿದ್ವಾಯಿ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರ 50 ಕೋಟ ವೆಚ್ಚದಲ್ಲಿ ನಿರ್ಮಾಣ.
• ನಿಮ್ಹಾನ್ಸ್ ನಲ್ಲಿ ಅಂಗಾಂಗ ಮರುಪಡೆಯುವಿಕೆ ಕೇಂದ್ರ ಆರಂಭ.
• ಚಿತ್ರದುರ್ಗ ಜಿಲ್ಲೆಯಲ್ಲಿ ಹೊಸ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ.
• ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ಬಡ ಮಕ್ಕಳಿಗೆ ನೀಟ್ ತರಬೇತಿ, ವೈದ್ಯಕೀಯ ವ್ಯಾಸಂಗ ಮಾಡಲು ಬ್ಯಾಂಕ್ ಗಳಿಂದ ಸಾಲಸೌಲಭ್ಯ, ಖಾಸಗಿ ವೈದ್ಯಕೀಯ ಕಾಲೇಜುಗಳನ್ನು ಎ.ಬಿ.ಸಿ.ಡಿ ಎಂದು ವರ್ಗೀಕರಿಸಿ ಶುಲ್ಕ ನಿಯಂತ್ರಣ ಸಮಿತಿ ಮೂಲಕ ಶುಲ್ಕ ನಿಗದಿ.