ಬೆಂಗಳೂರು:ಸಿಎಂಯಡಿಯೂರಪ್ಪ ಅವರು 2021-22ನೇ ಸಾಲಿನ ಬಜೆಟ್ನಲ್ಲಿ ಮಹಿಳೆಯರಿಗೆ ಬಂಪರ್ ಕೊಡುಗೆ ಘೋಷಿಸಿದ್ದಾರೆ.
ರಾಜ್ಯಾದ್ಯಂತ 60 ಸಾವಿರ ಮಹಿಳೆಯರಿಗೆ ಸ್ವ ಉದ್ಯೋಗ ನೀಡಲಾಗುವುದು. ಈ ಬಾರಿ ಯಾವುದೇ ತೆರಿಗೆ ವಿಧಿಸದಿರಲು ನಿರ್ಧಾರ ಮಾಡಲಾಗಿದ್ದು. 2 ಕೋಟಿ ರೂಪಾಯಿಗಳವರೆಗೆ ಮಹಿಳೆಯರಿಗೆ ಸಾಲ ನೀಡಲು ನಿರ್ಧರಿಸಲಾಗಿದ್ದು, ಶೇ.4ರಷ್ಟು ಬಡ್ಡಿದರದಲ್ಲಿ ಸಾಲ ನೀಡಲು ನಿರ್ಧರಿಸಲಾಗಿದೆ. ಮಹಿಳಾ ಸ್ವಯಂ ಸೇವಾ ಸಂಘಗಳ ಉತ್ಪನ್ನಗಳಿಗೆ ಮಾರುಕಟ್ಟೆ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಸಿಂಗೇನ ಅಗ್ರಹಾರದಲ್ಲಿ ತರಕಾರಿ ಮಾರುಕಟ್ಟೆ, ಗೋದಾಮು ಮತ್ತು ಅಂಗಡಿ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು. ಹಪ್ಪಳ, ಉಪ್ಪಿನಕಾಯಿ ತಯಾರಕರಿಗೆ ಆನ್ ಲೈನ್ ಮಾರುಕಟ್ಟೆ ಒದಗಿಸಲಾಗುವುದು.
60 ಸಾವಿರ ಮಹಿಳೆಯರಿಗೆ ಸ್ವ- ಉದ್ಯೋಗಕ್ಕೆ ಅವಕಾಶ ಎಪಿಎಂಸಿಗಳಲ್ಲಿ ಮಹಿಳೆಯರಿಗೆ ಶೇ.10ರಷ್ಟು ಮೀಸಲಾತಿ. ನಿರ್ಭಯಾ ಯೋಜನೆಯಡಿ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಸೇಫ್ ಸಿಟಿ ಯೋಜನೆ ಚುರುಕುಗೊಳಿಸಿ ಬೆಂಗಳೂರು ನಗರದ ಸಾರ್ವಜನಿಕ ಸ್ಥಳಗಳಲ್ಲಿ 7,500 ಸಿಸಿ ಕ್ಯಾಮರಾ ಅಳವಡಿಸುವ ಮೂಲಕ ಮಹಿಳೆಯರಿಗೆ ಹೆಚ್ಚಿನ ಸುರಕ್ಷತೆಯನ್ನು ಖಾತ್ರಿಪಡಿಸಲಾಗುವುದು.
ಕೃಷಿ ವಿವಿಯಲ್ಲಿ ರೈತರ ಮಕ್ಕಳಿಗೆ ಮೀಸಲಾತಿ ಹೆಚ್ಚಳ ಮಾಡಲಾಗಿದ್ದು, ಶೇಕಡಾ 40 ರಿಂದ 50ಕ್ಕೆ ಮೀಸಲಾತಿ ಹೆಚ್ಚಿಸಲಾಗಿದೆ. ಬಿಎಂಟಿಸಿ ಬಸ್ ಗಳಲ್ಲಿ ಗಾರ್ಮೆಂಟ್ಸ್ ಮಹಿಳೆಯರಿಗೆ ವನಿತಾ ಸಂಗಾತಿ ಬಸ್ ಪಾಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಕಳೆದ ವರ್ಷದ ಬಜೆಟ್ನಲ್ಲಿ ಈ ಯೋಜನೆ ಘೋಷಿಸಲಾಗಿತ್ತು. ಆದರೆ ಕೋವಿಡ್ ಕಾರಣಕ್ಕೆ ಯೋಜನೆ ಜಾರಿಗೊಂಡಿಲ್ಲ. ಆದರೆ ಈ ಬಾರಿ ಮಹಿಳೆಯರಿಗೆ ಈ ಯೋಜನೆಯ ಲಾಭ ದೊರೆಯಲಿದೆ. ರಿಯಾಯ್ತಿ ನೀಡಲಾಗುವುದು. 16 ಬಸ್ ಡಿಪೋಗಳನ್ನು ಆರಂಭಿಸಲಾಗುವುದು.
ಮಹಿಳಾ ಉದ್ಯೋಗಿಗಳಿಗೆ 6 ತಿಂಗಳು ಪ್ರಸೂತಿ ರಜೆ ಸೌಲಭ್ಯ ಒದಗಿಸಲಾಗುವುದು. ನಗರ ಪ್ರದೇಶದ ಉದ್ಯೋಗಸ್ಥ ತಾಯಂದಿರ ಮಕ್ಕಳ ಆರೈಕೆ ದೃಷ್ಟಿಯಿಂದ ಬೆಂಗಳೂರು ಸೇರಿದಂತೆ ಇತರ ಮಹಾನಗರಗಳಲ್ಲಿರುವ ಅಂಗನವಾಡಿಗಳನ್ನು ಹಂತ-ಹಂತವಾಗಿ ಶಿಶುಪಾಲನಾ ಕೇಂದ್ರಗಳಾಗಿ ಮಾಡಲಾಗುವುದು. ಎದೆಹಾಲು ಬ್ಯಾಂಕ್ ಸ್ಥಾಪನೆ ಮಾಡಲಾಗುವುದು ಎಂದು ಘೋಷಿಸಿದ್ದಾರೆ.
ಮಹಿಳಾ ಸ್ವ ಸಹಾಯ ಸಂಘಗಳುತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಬೆಂಗಳೂರು,ಮೈಸೂರು ಮತ್ತು ಕಲಬುರಗಿ ನಗರದಲ್ಲಿ ಒಂದು ವಾರದ ಅವಧಿಗೆ ವಾರ್ಷಿಕ ಮಾರಾಟ ಮೇಳ ಹಮ್ಮಿಕೊಳ್ಳಲಾಗುವುದು. ಇಳಕಲ್ ಉಡುಪಿ, ಬನಹಟ್ಟಿ ಕೈ ಮಗ್ಗದ ಸೀರೆಗಳು, ಚನ್ನಪಟ್ಟಣದ ಆಟಿಕೆಗಳು, ಗಿರಿಜನ ಮಹಿಳೆಯರು ತಯಾರಿಸುವ ಜೇನು, ಲಂಬಾಣಿ, ಕಸೂತಿ ಮುಂತಾದ ಪಾರಂಪರಿಕ ಕರಕುಶಲ ಉತ್ಪನ್ನಗಳು ಸೇರಿದಂತೆ ಸ್ತ್ರೀ ಶಕ್ತಿ ಗುಂಪುಗಳು ತಯಾರಿಸಿದ ಉತ್ಪನ್ನಗಳಿಗೆ ವ್ಯಾಪಕ ಪ್ರಚಾರ ಮತ್ತು ಉತ್ತಮ ಬೆಲೆ ಒದಗಿಸಲು ಇ- ಮಾರುಕಟ್ಟೆ ಸೌಲಭ್ಯ ಜಾರಿಗೊಳಿಸಲಾಗುವುದು.
ಉದ್ಯೋಗದಲ್ಲಿ ಸಮಾನ ಅವಕಾಶ ನೀಡುವ ದೃಷ್ಟಿಯಿಂದ ಮಹಿಳೆಯರು ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸಲು ಅನುಕೂಲವಾಗುವಂತೆ ಜಾರಿಗೆ ತಂದ ನಿಯಮಾವಳಿಗಳನ್ನು ಮರು ಪರಿಶೀಲಿಸಲಾಗುವುದು. ಮಹಿಳಾ ಮತ್ತು ಮಕ್ಕಳ ಆಯವ್ಯಯವನ್ನು ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಸೇರಿಸಲು ಉದ್ದೇಶಿಸಿದೆ. ಇದರಿಂದ ತಳಹಂತದಲ್ಲಿ ಲಿಂಗಸಮಾನತೆ ಕುರಿತು ಸಂವೇದನೆ ಮೂಡಿಸಲು ಸಾಧ್ಯವಾಗಲಿದೆ. ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ರಾಜ್ಯದೆಲ್ಲೆಡೆ ತಂತ್ರಜ್ಞಾನಾಧರಿತ ಇ- ಬೀಟ್ಮೂಲಕ ತೀವ್ರಗೊಳಿಸಲಾಗುವುದು.
ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಸೂಕ್ತ ನೆರವು ಮತ್ತು ಮಾರ್ಗದರ್ಶನ ನೀಡಲು ನಿಮ್ಹಾನ್ಸ್ ಮತ್ತು ರಾಷ್ಟ್ರೀಯ ಕಾನೂನು ಸಹಯೋಗದೊಂದಿಗೆ ಒಂದು ಕೇಂದ್ರವನ್ನು ಸ್ಥಾಪಿಸಲಾಗುವುದು. ಈ ಕೇಂದ್ರ ಮಹಿಳೆಯರ ಸುರಕ್ಷತೆ ಕುರಿತ ನೀತಿ ನಿರೂಪಣೆ ರೂಪಿಸಲು ಸರ್ಕಾರಕ್ಕೆ ನೆರವಾಗಲಿದೆ.