ಬೆಂಗಳೂರು : ಕೋವಿಡ್ ಹಾಗೂ ಪ್ರವಾಹದ ಕಾರಣದಿಂದ ದುಡಿಯುವ ವರ್ಗಕ್ಕೆ ಸಹಾಯ ಮತ್ತು ಹೆಣ್ಣುಮಕ್ಕಳಿಗೆ ನೆರವಾಗುವ ಯೋಜನೆಗಳನ್ನು ಸರ್ಕಾರ ರೂಪಿಸುತ್ತಿದೆ. ಕುಟುಂಬದ ಮಹಿಳೆ ಸ್ವತಂತ್ರವಾಗಿ ಕನಿಷ್ಠ ಮನೆ ನಿರ್ವಹಣೆಗೆ ಅಗತ್ಯವಿರುವ ಆರ್ಥಿಕ ನೆರವು ನೀಡುವಂತಹ ಯೋಜನೆಯನ್ನು ಆಯವ್ಯಯದಲ್ಲಿ ಘೊಷಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಸಿಎಂ ಮಾತನಾಡಿದರು.
ಪ್ರತಿ ಕುಟುಂಬಕ್ಕೆ ಮನೆ ನಿರ್ವಹಿಸಲು ಹೆಣ್ಣು ಮಕ್ಕಳಿಗೆ ವಿಶೇಷ ಕಾರ್ಯಕ್ರಮ ನೀಡಲಾಗುವುದು. ಸ್ತ್ರೀ ಸಾಮರ್ಥ್ಯದ ಜೊತೆಗೆ ಸ್ತ್ರೀ ಶಕ್ತಿ ಯೋಜನೆಯಡಿ ಮನೆ ನಡೆಸಲು, ಕೋವಿಡ್ ಉಪಚಾರ, ಆರೋಗ್ಯ, ಮುಂತಾದವಕ್ಕೆ ಸಹಾಯವಾಗುವ ವಿಶೇಷ ಯೋಜನೆ ಇದಾಗಿದೆ. ಪ್ರತಿ ಕುಟುಂಬದ ಅಗತ್ಯವನ್ನು ನೋಡಿಕೊಂಡು 1,000, 1,500, 2,000 ರೂ. ಸೇರಿ ಎಷ್ಟು ವೆಚ್ಚವಾಗುತ್ತದೆ ಎನ್ನುವುದನ್ನು ಪರಿಗಣಿಸಿ ಮನೆಯ ಜವಾಬ್ದಾರಿ ನೋಡಿಕೊಳ್ಳುವ ಮಹಿಳೆಗೆ ನೀಡಲಾಗುವುದು. ಸ್ತ್ರೀ ಸಾಮರ್ಥ್ಯ ಯೋಜನೆಯನ್ನು ಮೊದಲು ಚಾಲನೆಗೊಳಿಸಿ, ಅದನ್ನು ಅನುಷ್ಠಾನಗೊಳಿಸಿ, ಪ್ರತಿ ಮನೆಗೆ ಸ್ತ್ರೀಯರ ಹೆಸರಿನಲ್ಲಿ ನೆರವು ನೀಡಲಾಗುವುದು ಎಂದರು.
ಯುವಕರು - ಮಹಿಳೆಯರಿಗೆ ಶಕ್ತಿ ತುಂಬುವ ಕಾರ್ಯಕ್ರಮ:ಜನಕಲ್ಯಾಣ ಕಾರ್ಯಕ್ರಮಕ್ಕೆ ಹೆಚ್ಚಿನ ಒತ್ತು ನೀಡುವ ಯೋಜನೆಗಳ ಬಗ್ಗೆ ಚಿಂತನೆ ಮಾಡುತ್ತಿದ್ದೇವೆ. ದುಡಿಯುವ ವರ್ಗಕ್ಕೆ ಹೆಚ್ವಿನ ಅನುಕೂಲ ಮಾಡಲಾಗುತ್ತಿದೆ. ರೈತರು, ಕಾರ್ಮಿಕರು, ಮಹಿಳೆಯರು ಪರಿಶಿಷ್ಟ ಜಾತಿ, ಪಂಗಡ ಮತ್ತು ಒಬಿಸಿ ಜನಾಂಗದವರ ಶ್ರೇಯೋಭಿವೃದ್ಧಿಗೆ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಯುವಕರಿಗೆ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ, 5 ಲಕ್ಷ ಯುವಕರಿಗೆ ಸ್ವಯಂ ಉದ್ಯೋಗಕ್ಕೆ ಒಂದು ಲಕ್ಷ ನೀಡಿ, ಬ್ಯಾಂಕ್ ಜೋಡಿಸಿ ಅವರನ್ನು ಸ್ವಾವಲಂಬಿಯಾಗಿಸಲು ಎಂಡ್ ಟು ಎಂಡ್ ಅಪ್ರೋಚ್ ಇರುವ ಕಾರ್ಯಕ್ರಮ ಇದಾಗಿದೆ ಎಂದರು.
ಸ್ತ್ರೀ ಸಾಮರ್ಥ್ಯ ಯೋಜನೆಯನ್ನು ಇದೇ ತಿಂಗಳು ಪ್ರಾರಂಭಿಸಲಾಗುತ್ತಿದೆ. ಪ್ರತಿ ಗ್ರಾಮದಲ್ಲಿ 2 ಸ್ತ್ರೀ ಶಕ್ತಿ ಸಂಘಕ್ಕೆ 5 ಲಕ್ಷ ರೂಪಾಯಿವರೆಗೆ ಸಹಾಯಧನ ನೀಡಲಾಗುವುದು. ಜನವರಿ ಅಂತ್ಯ ಹಾಗೂ ಫೆಬ್ರವರಿ ಪ್ರಾರಂಭದಲ್ಲಿ ಚಾಲನೆ ನೀಡಲಾಗುವುದು. ಯುವಕರಿಗೆ, ಮಹಿಳೆಯರಿಗೆ ಶಕ್ತಿ ತುಂಬುವ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬಜೆಟ್ಗೆ ಪೂರ್ವಭಾವಿ ಸಿದ್ಧತೆ : ಸಚಿವ ಸಂಪುಟದಲ್ಲಿ ವಿಧಾನಸಭೆಯ ಜಂಟಿ ಅಧಿವೇಶನಕ್ಕೆ ದಿನಾಂಕ ಗೊತ್ತು ಮಾಡಲಾಗುವುದು. ಬಜೆಟ್ ಅಧಿವೇಶನವನ್ನು ಫೆ. 17ರಂದು ನಡೆಸುವ ಸಾಧ್ಯತೆ ಇದೆ. ಅದಕ್ಕೆ ಪೂರ್ವಭಾವಿಯಾಗಿ ಎಲ್ಲ ಸಿದ್ಧತೆ ಪ್ರಾರಂಭಿಸಿದ್ದೇವೆ. ಈಗಾಗಲೇ ಡಿಸೆಂಬರ್ವರೆಗೆ ನಮ್ಮ ರಾಜ್ಯದ ಆದಾಯವು ಮೂರು ಪಟ್ಟು ಹೆಚ್ಚಾಗಿದೆ. ಇದನ್ನು ಇನ್ನಷ್ಟು ಹೆಚ್ಚಿಸಲು, ಗುರಿ ಹೆಚ್ಚು ಮಾಡಲು ಸೂಚನೆ ನೀಡಲಾಗಿದೆ. ಜನಪರ ಆಯವ್ಯಯ ನೀಡಲು ತೀರ್ಮಾನಿಸಲಾಗಿದೆ. ಚುನಾವಣೆ ಇರುವುದರಿಂದ ವಿಶೇಷ ಬಜೆಟ್ ಇರಲಿದೆ. ಅಸ್ಸೋಂ ಹಾಗೂ ಗುಜರಾತ್ ಸರ್ಕಾರಗಳು ಕೆಲವು ಘೋಷಣೆ ಮಾಡಿವೆ. ಆದರೆ ಘೋಷಣೆಯೇ ಬೇರೆ ಅನುಷ್ಠಾನವೇ ಬೇರೆ ಎಂದು ಹೇಳಿದರು.
ದುಡಿಯುವ ವರ್ಗಕ್ಕೆ ಹೆಚ್ಚಿನ ಸಹಾಯ:ಪೌಷ್ಟಿಕ ಆಹಾರ ನೀಡಲು ದೊಡ್ಡ ಪ್ರಮಾಣದ ಘೋಷಣೆ ಮಾಡಲಾಗಿದೆ. ತೀವ್ರ, ಮಧ್ಯಮ ಎಂಬ ವರ್ಗೀಕರಣವಿದೆ. ತೀವ್ರ ಕೊರತೆ ಇರುವವರಿಗೆ ನೀಡುವ ಆಹಾರವನ್ನೇ ಮಧ್ಯಮ ಕೊರತೆ ಇರುವವರಿಗೆ ನೀಡಲಾಗುವುದು, ಈಗಾಗಲೇ ಅನುಷ್ಠಾನಗೊಳ್ಳುತ್ತಿದೆ. 5 - 6 ಜಿಲ್ಲೆಗಳಲ್ಲಿ ಐ.ಎಂ.ಆರ್ ಎಂಎಮರ್ ಕಡಿಮೆಯಿದ್ದು, ಅದನ್ನು ಹೆಚ್ಚಿಗೆ ಮಾಡುವ ಸಲುವಾಗಿ ನಾವು ಚಿಂತನೆ ಮಾಡುತ್ತಿದ್ದೇವೆ. ಜನಸಾಮಾನ್ಯರ ಆರೋಗ್ಯ, ಶಿಕ್ಷಣ, ಉದ್ಯೋಗ ಆರ್ಥಿಕ ನೆರವು, ದುಡಿಯುವ ವರ್ಗಕ್ಕೆ ಹೆಚ್ಚಿನ ಸಹಾಯ ಯುವಕರಿಗೆ ಮತ್ತು ಸ್ತ್ರೀಯರಿಗೆ ಸಹಾಯ ಮಾಡಲಾಗುವುದು ಎಂದು ಹೇಳಿದರು.
ಇದನ್ನೂ ಓದಿ:ಗೃಹ ಸಚಿವರು ಗುಜರಾತ್ಗೆ ಹೋದ ಮೇಲೆ ಸ್ಯಾಂಟ್ರೋ ರವಿ ಬಂಧನ ಆಗಿದ್ಯಾಕೆ: ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನೆ