ಕರ್ನಾಟಕ

karnataka

ETV Bharat / state

ಎಸ್​​ಸಿ -ಎಸ್ಟಿ, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಏನೆಲ್ಲ ಘೋಷಣೆ? - ಕರ್ನಾಟಕ ರಾಜ್ಯ ಬಜೆಟ್​ 2020

ಸಮಾಜದ ಎಲ್ಲಾ ಸ್ತರಗಳಲ್ಲಿರುವ ಸಮುದಾಯಗಳ ಅಭಿವೃದ್ಧಿಯಿಂದ ಮಾತ್ರ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗುತ್ತದೆ. ಅದಕ್ಕಾಗಿ ಶೋಷಿತ, ದುರ್ಬಲ ವರ್ಗಗಳ ಅಭಿವೃದ್ಧಿಗೆ ಬಿಎಸ್​ವೈ ಸರ್ಕಾರ ವಿಶೇಷ ಆದ್ಯತೆ ನೀಡಿದೆ.

Karnataka budget 2020 in kannada
ಎಸ್​​ಸಿ -ಎಸ್ಟಿ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಅನುದಾನ

By

Published : Mar 5, 2020, 2:22 PM IST

ಬೆಂಗಳೂರು:ಪರಿಶಿಷ್ಟ ಜಾತಿ ಮತ್ತು ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಮಹಿಳೆಯರು, ಮಕ್ಕಳು, ಯುವಜನರು, ಹಿರಿಯ ನಾಗರಿಕರು, ವಿಕಲಚೇತನರು, ಕಾರ್ಮಿಕರು, ಬಡವರು ಸೇರಿ ಎಲ್ಲರಿಗೂ ಅಭಿವೃದ್ಧಿಯ ಪಾಲು ತಲುಪಿಸುವುದರ ಮೂಲಕ ರಾಜ್ಯದ ಬೆಳವಣಿಗೆ ಸಾಧಿಸಲು ಈ ಕೆಳಗಿನಂತೆ ಪ್ರಸ್ತಾವನೆಗಳನ್ನು ಮಂಡಿಸಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನಾಂಗದವರ ಕಲ್ಯಾಣಕ್ಕೆ ಸರ್ಕಾರ ಒತ್ತು ನೀಡಿದೆ. ಶೇ. 24.1 ರಷ್ಟು ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಗಳಿಗೆ ಒತ್ತು ನೀಡಿದೆ. 2020-21ನೇ ಸಾಲಿನ ಆಯವ್ಯಯದ ಅಂದಾಜಿನ ಪ್ರಕಾರ SSP/ SP ಅಡಿ 26,131 ಕೋಟಿ ರೂ.ಗಳ ಹಂಚಿಕೆ ಮಾಡಲಾಗಿದೆ.

ಎಸ್​​ಸಿ -ಎಸ್ಟಿ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಅನುದಾನ

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿಂದ ನಡೆಸಲಾಗುತ್ತಿರುವ ವಸತಿ ಶಾಲೆಗಳಲ್ಲಿ ಕನಿಷ್ಠ ಶೇ. 25 ರಷ್ಟು ಸೀಟುಗಳನ್ನು, ಆಯಾ ತಾಲೂಕಿನ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಲು ಅವಕಾಶ ಕಲ್ಪಿಸಲಾಗುವುದು.

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ನಡೆಸಲಾಗುತ್ತಿರುವ ವಸತಿ ಶಾಲೆಗಳನ್ನು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮೇಲ್ವಿಚಾರಣಾ ಸಮಿತಿ ರಚಿಸಲಾಗುವುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ/ಯುವತಿಯರಿಗೆ ವಾಹನ ಚಾಲನಾ ತರಬೇತಿ ನೀಡಲು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಮೂಲಕ ಬೆಳಗಾವಿ ಹಾಗೂ ಕಲಬುರಗಿ ವಿಭಾಗಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ/ಯುವತಿಯರಿಗೆ ವಿವಿಧ ಪ್ಯಾರಾಮೆಡಿಕಲ್ ಸರ್ಟಿಫಿಕೇಟ್ ಕೋಸ್​​ಗಳೊಂದಿಗೆ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕೌಶಲ್ಯಾಭಿವೃದ್ಧಿ ಇಲಾಖೆಯ ಸಮನ್ವಯದೊಂದಿಗೆ ನೀಡಲಾಗುವುದು. ಯುವಕ/ಯುವತಿಯರಿಗೆಸಣ್ಣ ಸರಕುಸಾಗಾಣಿಕೆ ವಾಹನಗಳನ್ನು ಖರೀದಿಸಲು ಸಾಲದ ಸೌಲಭ್ಯ ಕೂಡ ಒದಗಿಸಲಾಗುವುದು.

ಎಸ್​​ಸಿ -ಎಸ್ಟಿ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಅನುದಾನ

ಸಹಕಾರ ಸಂಘಗಳಿಗೆ ಆರ್ಥಿಕ ಚಟುವಟಿಕೆಗಳಿಗಾಗಿ ಪ್ರಸ್ತುತ ನೀಡಲಾಗುತ್ತಿರುವ ಷೇರು ಬಂಡವಾಳವನ್ನು 10 ಲಕ್ಷ ರೂ.ಗಳಿಂದ 20 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುವುದು. ಸ್ವಾತಂತ್ರ್ಯ ಹೋರಾಟದ ಭಾಗವಾದ ಹಲಗಲಿ ಬೇಡರ ಬಂಡಾಯದಲ್ಲಿ ಹುತಾತ್ಮರಾದ ಜಡಗ ಮತ್ತು ಬಾಲ ಇವರ ಹೆಸರಿನಲ್ಲಿ ಪ್ರತಿ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಒಂದು ಲಕ್ಷ ರೂ. ನಗದು ಪ್ರಶಸ್ತಿಯನ್ನು ನೀಡಲಾಗುವುದು. ಈ ಉದ್ದೇಶಕ್ಕಾಗಿ 2020-21ನೇ ಸಾಲಿನಲ್ಲಿ 60 ಲಕ್ಷ ರೂ.ಗಳನ್ನು ನಿಗದಿಪಡಿಸಲಾಗಿದೆ.

ಬುಡಕಟ್ಟು ಜನರ ಪಾರಂಪರಿಕ ವೈದ್ಯಪದ್ಧತಿ ಮತ್ತು ಆಚರಣೆಗಳ ದಾಖಲೀಕರಣ ಮತ್ತು ಆಯ್ದ ಔಷಧಿಗಳ ಸಂಸ್ಕರಣಾ ಘಟಕಗಳನ್ನು ಶಿವಮೊಗ್ಗ ಮತ್ತು ಮೈಸೂರು ಜಿಲ್ಲೆಗಳಲ್ಲಿ ಆಯುಷ್ ಇಲಾಖೆಯ ಸಹಯೋಗದೊಂದಿಗೆ ಎರಡು ಕೋಟಿ ರೂ.ಗಳ ವೆಚ್ಚದಲ್ಲಿ ಸ್ಥಾಪನೆ ಮಾಡುವುದಾಗಿ ಸಿಎಂ ಪ್ರಕಟಿಸಿದ್ದಾರೆ.

ಚರ್ಮ ಕುಶಲಕರ್ಮಿಗಳು “ಚರ್ಮ ಶಿಲ್ಪ” ಎಂಬ ಯಂತ್ರಾಧಾರಿತ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಡಾ. ಬಾಬು ಜಗಜೀವನ್‍ರಾಮ್ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮದ ಮೂಲಕ ಘಟಕ ವೆಚ್ಚ 10 ಲಕ್ಷ ರೂ.ಗಳಲ್ಲಿ ಐದು ಲಕ್ಷ ರೂ. ಸಹಾಯಧನವನ್ನು 250 ಫಲಾನುಭವಿಗಳಿಗೆ ನೀಡಲಾಗುವುದು. ಈ ಉದ್ದೇಶಕ್ಕಾಗಿ 2020-21ನೇ ಸಾಲಿನಲ್ಲಿ 12.50 ಕೋಟಿ ರೂ.ಗಳನ್ನು ತೆಗೆದಿರಸಲಾಗಿದೆ.

ರಾಜ್ಯದಲ್ಲಿರುವ ವಿವಿಧ ಅಲೆಮಾರಿ, ಅರೆ ಅಲೆಮಾರಿ, ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ 78 ಕೋಟಿ ರೂ.ಗಳನ್ನು ಒದಗಿಸಲಾಗುವುದು. ಹಿಂದುಳಿದ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗಾಗಿ ಆದ್ಯತೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಉಪ್ಪಾರ ಅಭಿವೃದ್ಧಿ ನಿಗಮಕ್ಕೆ 10 ಕೋಟಿ ರೂ.ಗಳನ್ನು, ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ 25 ಕೋಟಿ ರೂ. ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ 50 ಕೋಟಿ ರೂ., ಆರ್ಯವೈಶ್ಯ ಅಭಿವೃದ್ಧಿ ನಿಗಮಕ್ಕೆ 10 ಕೋಟಿ ರೂ., ಕುಂಬಾರ ಸಮುದಾಯದವರ ಅಭಿವೃದ್ಧಿಗಾಗಿ 20 ಕೋಟಿ ರೂ.ಗಳನ್ನು ಮತ್ತು ಗೊಲ್ಲ ಸಮುದಾಯದವರ ಅಭಿವೃದ್ಧಿಗಾಗಿ 10 ಕೋಟಿ ರೂ.ಗಳನ್ನು 2020-21ನೇ ಸಾಲಿನ ಬಜೆಟ್​ನಲ್ಲಿ ನೀಡಲಾಗಿದೆ.

ಇತ್ತೀಚೆಗೆ ಇ-ವಾಣಿಜ್ಯ ಸಂಸ್ಥೆಗಳು ಮನೆಬಾಗಿಲಿಗೆ ತಮ್ಮ ಉತ್ಪನ್ನಗಳನ್ನು ತಲುಪಿಸುವುದು ಸಾಮಾನ್ಯವಾಗಿದೆ. ಇಂತಹ ಉತ್ಪನ್ನಗಳನ್ನು ಸರಬರಾಜು ಮಾಡುವ 1000 ಯುವಕರಿಗೆ ಬೈಕ್ ಕೊಳ್ಳಲು ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ತಲಾ 25,000 ರೂ.ಗಳಂತೆ ಒಟ್ಟು 2.5 ಕೋಟಿ ರೂ.ಗಳ ಆರ್ಥಿಕ ನೆರವು ನೀಡಲಾಗಿದೆ.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಐದು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಪದವಿ ಪೂರ್ವ ಕಾಲೇಜುಗಳನ್ನಾಗಿ ಉನ್ನತೀಕರಿಸಲಾಗುವುದು. ಕ್ರೈಸ್ತ ಸಮುದಾಯದವರ ಸರ್ವತೋಮುಖ ಅಭಿವೃದ್ಧಿಯನ್ನು 200 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ಸಿಎಂ ಘೋಷಣೆ ಮಾಡಿದ್ದಾರೆ.

ABOUT THE AUTHOR

...view details