ಬೆಂಗಳೂರು: 2023-24ನೇ ಸಾಲಿನ ಬಜೆಟ್ (ಆಯವ್ಯಯ) ಮಂಡನೆಗೆ (ಜುಲೈ 7) ಸಿಎಂ ಸಿದ್ದರಾಮಯ್ಯ ಅಂತಿಮ ಸ್ಪರ್ಶ ಕೊಡುತ್ತಿದ್ದಾರೆ. ಮುಖ್ಯಮಂತ್ರಿಗಳು ಹಣಕಾಸು ವರ್ಷದ ಉಳಿದ ಒಂಬತ್ತು ತಿಂಗಳಿಗೆ ಮಂಡಿಸುವ ಈ ಬಜೆಟ್‌ನಲ್ಲಿ ಒಂದಷ್ಟು ಹೊರೆಗಳು ಸವಾಲಾಗಿವೆ. ಈ ಬಾರಿಯ ಬಜೆಟ್‌ನಲ್ಲಿ ಹೊಸ ಯೋಜನೆಗಳನ್ನು ಘೋಷಣೆ ಮಾಡುವ ಸಾಧ್ಯತೆ ಕಡಿಮೆ. ಬೊಮ್ಮಾಯಿ ಸರ್ಕಾರ ಮಂಡಿಸಿದ್ದ ಲೇಖಾನುದಾನದಲ್ಲಿ ಮೀಸಲಿರಿಸಿದ ಅನುದಾನಗಳನ್ನೇ ಪೂರ್ಣಪ್ರಮಾಣದ ಬಜೆಟ್‌ನಲ್ಲಿ ಮರು ಹಂಚಿಕೆ ಮಾಡುವ ಸಂಭವ ಹೆಚ್ಚು.
ಅಂದಾಜು 3.35 ಲಕ್ಷ ಕೋಟಿ ರೂ ಗಾತ್ರದ ಬಜೆಟ್ ಮಂಡನೆಗೆ ಸಿದ್ದರಾಮಯ್ಯ ಸಿದ್ಧತೆಯಲ್ಲಿದ್ದಾರೆ. ಮುಖ್ಯಮಂತ್ರಿಯವರೇ ಈ ಬಗ್ಗೆ ಇತ್ತೀಚೆಗೆ ಮುನ್ಸೂಚನೆ ನೀಡಿದ್ದರು. ಆದಾಯ ಸಂಗ್ರಹ ಹೆಚ್ಚಿಸುವ ಮೂಲಕ ಸುಮಾರು 25 ಸಾವಿರ ಕೋಟಿ ರೂ. ಅಧಿಕ ಗಾತ್ರದ ಬಜೆಟ್ ಮಂಡನೆಗೆ ಕಸರತ್ತು ನಡೆಸುತ್ತಿದ್ದಾರೆ. ಈಗಾಗಲೇ ಪ್ರಮುಖ ತೆರಿಗೆ ಇಲಾಖೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಸಂಗ್ರಹದ ಗುರಿ ನೀಡಲಾಗಿದೆ.
ಪಂಚ ಗ್ಯಾರಂಟಿಗಳ ಹೊರೆ : 5 ಗ್ಯಾರಂಟಿಗಳಿಗೆ ಹಣ ಹೊಂದಿಸುವುದು ಸಿಎಂ ಸಿದ್ದರಾಮಯ್ಯಗೆ ದೊಡ್ಡ ತಲೆನೋವು. ಇದಕ್ಕಾಗಿ ವಾರ್ಷಿಕ ಅಂದಾಜು 60 ಸಾವಿರ ಕೋಟಿ ರೂ. ಮೀಸಲಿಡಬೇಕು. 2023-24ನೇ ಹಣಕಾಸು ವರ್ಷದಲ್ಲಿ ಅಂದಾಜು 40,000 ಕೋಟಿ ರೂ. ಹಣ ಬೇಕಾಗಿದೆ. ಗ್ಯಾರಂಟಿಗಳ ಪೈಕಿ ಶಕ್ತಿ ಯೋಜನೆ ಜೂನ್ನಲ್ಲಿ ಆರಂಭವಾಗಿದೆ. ಜೂನ್ 11ಕ್ಕೆ ಜಾರಿಯಾಗಿರುವ ಈ ಯೋಜನೆಯಡಿ ಜೂನ್ 30ರ ವರೆಗೆ ಸುಮಾರು 250 ಕೋಟಿ ರೂ. ಉಚಿತ ಪ್ರಯಾಣದ ಟಿಕೆಟ್ ವೆಚ್ಚ ಆಗಿದೆ. ನಿರೀಕ್ಷೆಗೂ ಮೀರಿ ಮಹಿಳಾ ಪ್ರಯಾಣಿಕರಿಂದ ಸ್ಪಂದನೆ ಸಿಗುತ್ತಿರುವ ಕಾರಣ ಉಚಿತ ಪ್ರಯಾಣದ ಟಿಕೆಟ್ ಮೊತ್ತವೂ ಅಧಿಕವಾಗಿದೆ. ಇನ್ನು ಅನ್ನಭಾಗ್ಯ ಯೋಜನೆಗೆ ಅಕ್ಕಿ ಬದಲು ಹಣ ಪಾವತಿ ಜು.10ರಿಂದ ಆರಂಭಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ. ಇದಕ್ಕಾಗಿ ತಿಂಗಳಿಗೆ ಅಂದಾಜು 750-800 ಕೋಟಿ ರೂ. ವೆಚ್ಚವಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಮುನಿಯಪ್ಪ ತಿಳಿಸಿದ್ದಾರೆ. ಹಾಗಾಗಿ, ಹಣ ಜಮೆಗಾಗಿ ಬಜೆಟ್‌ನಲ್ಲಿ ಅನುದಾನ ಮೀಸಲಿಡುವುದು ಅನಿವಾರ್ಯ.
ಉಳಿದಂತೆ, ಗೃಹ ಜ್ಯೋತಿಯ ಹೊರೆ ಆಗಸ್ಟ್ನಿಂದ ಆರಂಭವಾಗಲಿದ್ದು, ಗೃಹ ಲಕ್ಷ್ಮಿ ಯೋಜನೆಯ ಹೊರೆಯೂ ಆಗಸ್ಟ್ ಬಳಿಕ ಶುರುವಾಗಲಿದೆ. ಯುವನಿಧಿ ಯೋಜನೆಯ ಹೊರೆ ಬಹುತೇಕ ನವೆಂಬರ್ ಬಳಿಕವೇ ಆರಂಭ. ಹೀಗಾಗಿ, ಈ ಹಣಕಾಸು ವರ್ಷದ ಉಳಿದಿರುವ 9 ತಿಂಗಳಲ್ಲಿ ಪಂಚ ಗ್ಯಾರಂಟಿಗಳಿಗೆ ಅಂದಾಜು 30,000 - 40,000 ಕೋಟಿ ರೂ. ಬೇಕಾಗಬಹುದು ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
30,000 ಕೋಟಿ ಬಾಕಿ ಬಿಲ್ಗಳ ತಲೆವರಿ : ಸಿಎಂ ಸಿದ್ದರಾಮಯ್ಯಗೆ ಈ ಬಾರಿಯ ಬಜೆಟ್ ಸಿದ್ಧತೆಯಲ್ಲಿ ಎದುರಾಗಿರುವ ಮತ್ತೊಂದು ತಲೆವರಿ ಬಾಕಿ ಬಿಲ್ಗಳ ಸವಾಲು. ಗುತ್ತಿಗೆದಾರರಿಗೆ ಸಾವಿರಾರು ಕೋಟಿ ಹಣ ಪಾವತಿಸಬೇಕಾಗಿದೆ. ಅಷ್ಟು ದೊಡ್ಡ ಪ್ರಮಾಣದಲ್ಲಿ ಹಣ ಹೊಂದಿಸುವುದು ಕೂಡಾ ಸರ್ಕಾರದ ನಿದ್ದೆಗೆಡಿಸಿದೆ.