ಬೆಂಗಳೂರು:ಇಲಾಖಾವಾರು ಬಜೆಟ್ ಮಂಡನೆ ಬದಲು ವಲಯಾವಾರು ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ ವಲಯಕ್ಕೆ 72093 ಕೋಟಿ ಹಣ ಮೀಸಲಿರಿಸಿದ್ದು, ಇದೇ ಮೊದಲ ಬಾರಿಗೆ ಬಜೆಟ್ ಗಾತ್ರದ ಶೇ.15.88 ರಷ್ಟು ಗಾತ್ರದ ಮಕ್ಕಳ ಬಜೆಟ್ ಅನ್ನು 37,783 ಕೋಟಿ ವೆಚ್ಚದಲ್ಲಿ ಮಂಡಿಸಿದ್ದಾರೆ.
ಪ್ರತ್ಯೇಕ ಕೃಷಿ ಬಜೆಟ್ ಮೂಲಕ ಹಿಂದೆ ಗಮನ ಸೆಳೆದಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದೀಗ ಮತ್ತೊಂದು ಹೊಸ ಪ್ರಯೋಗ ನಡೆಸಿದ್ದಾರೆ. ಕೇವಲ ಆರು ವಲಯಗಳಲ್ಲಿ ಎಲ್ಲಾ ಇಲಾಖೆಗಳ ಯೋಜನೆಗಳನ್ನು ಪ್ರಸ್ತಾಪಿಸುವ ಜೊತೆಗೆ ಮಕ್ಕಳ ಬಜೆಟ್ ಪ್ರಸ್ತಾಪಿಸಿ ಗಮನ ಸೆಳೆದಿದ್ದಾರೆ.
ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ ವಲಯದ ಹೈಲೈಟ್ಸ್:
• ಎಸ್ಸಿ ,ಎಸ್ಟಿ ಕಲ್ಯಾಣಕ್ಕೆ ಕಡ್ಡಾಯವಾಗಿ ನೀಡಬೇಕಾದ ಅನುದಾನಕ್ಕಿಂತ ಹೆಚ್ಚಿನ ಅನುದಾನ ನೀಡಿಕೆಗೆ 26,930 ಕೋಟಿ ಮೀಸಲು
• ಎಸ್ಸಿ,ಎಸ್ಟಿ ಪಂಗಡದ ನಿರುದ್ಯೋಗಿ ಯುವಕ -ಯುವತಿಯರಿಗೆ ವಾಹನ ಚಾಲನಾ ತರಬೇತಿ ನೀಡಲು ಕೆಎಸ್ಆರ್ಟಿಸಿ ಮೂಲಕ ಬೆಳಗಾವಿ ವಿಭಾಗದಲ್ಲಿ ವ್ಯವಸ್ಥೆ
• ಎಸ್ಸಿ,ಎಸ್ಟಿ ಪಂಗಡದ ನಿರುದ್ಯೋಗಿ ಯುವಕ-ಯುವತಿಯರಿಗೆ ಸಣ್ಣ ಸರಕು ಸಾಗಣೆ ವಾಹನಗಳನ್ನು ಖರೀದಿಸಲು ಸಾಲಸೌಲಭ್ಯ
• ಎಸ್ಸಿ, ಎಸ್ಟಿ ಸಮುದಾಯದ ಜನರು ನಿರ್ವಹಿಸುತ್ತಿರುವ ಸಹಕಾರ ಸಂಘಗಳಿಗೆ ಆರ್ಥಿಕ ಚಟುವಟಿಕೆಗಳಿಗಾಗಿ ಷೇರು ಬಂಡವಾಳವನ್ನು 10 ಲಕ್ಷಗಳಿಂದ 20 ಲಕ್ಷ ರೂಗಳಿಗೆ ಹೆಚ್ಚಳ
• ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಎಸ್ಸಿ-ಎಸ್ಟಿ ಪಂಗಡದ ವಿದ್ಯಾರ್ಥಿಗಳಿಗೆ 1 ಲಕ್ಷ ನಗದು ಪ್ರಶಸ್ತಿ ಇದಕ್ಕಾಗಿ 60 ಲಕ್ಷ ನಿಗದಿ
• ರಾಜ್ಯದಲ್ಲಿರುವ ವಿವಿಧ ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ 78 ಕೋಟಿ ರೂ. ಮೀಸಲು
• ಉಪ್ಪಾರ ಅಭಿವೃದ್ಧಿ ನಿಗಮಕ್ಕೆ 10 ಕೋಟಿ, ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ 25ಕೋಟಿ ,ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ 50ಕೋಟಿ, ಆರ್ಯವೈಶ್ಯ ಅಭಿವೃದ್ಧಿ ನಿಗಮಕ್ಕೆ ಅಧಿಕಾರ ಸಮುದಾಯದವರ ಅಭಿವೃದ್ದಿಗಾಗಿ 20 ಕೋಟಿ ಮತ್ತು ಗೊಲ್ಲರ ಸಮುದಾಯದವರ ಅಭಿವೃದ್ದಿಗಾಗಿ ಹತ್ತು ಕೋಟಿಗಳನ್ನು ಒದಗಿಸಲಾಗಿದೆ.
• ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಿರುವ ಕೊಳಚೆ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು 200 ಕೋಟಿ ಅನುದಾನ ಮೀಸಲು
• ಕ್ರೈಸ್ತ ಸಮುದಾಯದ ಸರ್ವತೋಮುಖ ಅಭಿವೃದ್ಧಿಯನ್ನು 200 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು
• ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಸಾವಿರ ಕೋಟಿ ರೂಗಳ ಹೆಚ್ಚುವರಿ ಆರ್ಥಿಕ ನೆರವು, 2 ಲಕ್ಷ ಮನೆಗಳನ್ನು 2,500 ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸುವ ಭರವಸೆ
• ಪೂರ್ವ ಪ್ರಾಥಮಿಕ ತರಗತಿಗಳಿಂದ ಪದವಿ ಪೂರ್ವ ತರಗತಿವರೆಗೆ ಒಂದೇ ಸೂರಿನಡಿ ಶಿಕ್ಷಣ ನೀಡಲು 276 ಕರ್ನಾಟಕ ಪಬ್ಲಿಕ್ ಶಾಲೆಗಳ ಸೌಕರ್ಯಕ್ಕೆ 100 ಕೋಟಿ ಅನುದಾನ
• ನೆರೆ ಹಾನಿಯಿಂದ ಹಾನಿಗೀಡಾಗಿರುವ ಶಾಲಾ ಕೊಠಡಿಗಳ ಕಾಮಗಾರಿಯನ್ನು ನಬಾರ್ಡ್ ಸಹಾಯದೊಂದಿಗೆ 750 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುತ್ತದೆ.
• ದಾವಣಗೆರೆ ,ಉಡುಪಿ ಮತ್ತು ದೊಡ್ಡಬಳ್ಳಾಪುರ ಸ್ಕೌಟ್ಸ್ ಮತ್ತು ಗೈಡ್ಸ್ ಕೇಂದ್ರಗಳಿಗೆ 4 ಕೋಟಿ ಅನುದಾನ
• 400 ಸರ್ಕಾರಿ ಉರ್ದು ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಕ್ಕೆ ಒಂದು ಕೋಟಿ ರೂ ಅನುದಾನ
• ಬೆಂಗಳೂರಿನಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ಕಾಲೇಜನ್ನು ಐಐಟಿ ಮಾದರಿಯಲ್ಲಿ ಸ್ವಚ್ಛಗೊಳಿಸಿ ಅಭಿವೃದ್ಧಿಪಡಿಸಲು 10 ಕೋಟಿ ಅನುದಾನ