ಬೆಂಗಳೂರು: ವಿಶ್ವದಲ್ಲಿಯೇ ತಂತ್ರಜ್ಞಾನದ ಕೇಂದ್ರವಾಗಿ ಗುರುತಿಸಿಕೊಂಡಿರುವ ನಗರ ಬೆಂಗಳೂರು. ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರದಲ್ಲಿ ಸುಗಮ ಸಂಚಾರ, ರಸ್ತೆ, ರಾಜಕಾಲುವೆಗಳ ಅಭಿವೃದ್ಧಿ, ಪ್ರವಾಹ ತಡೆಗಟ್ಟುವುದು, ವೈಜ್ಞಾನಿಕ ಹಾಗೂ ದಕ್ಷ ತ್ಯಾಜ್ಯ ನಿರ್ವಹಣೆ ವ್ಯವಸ್ಥೆ ರೂಪಿಸುವುದರೊಂದಿಗೆ ಜನರ ಬದುಕಿನ ಗುಣಮಟ್ಟ ಹೆಚ್ಚಿಸಲು ಶಿಕ್ಷಣ ಹಾಗೂ ಆರೋಗ್ಯ ಸೌಲಭ್ಯಗಳಿಗೆ ಸರ್ಕಾರ ಆದ್ಯತೆ ನೀಡಿದೆ.
6 ಸಾವಿರ ಕೋಟಿ ವೆಚ್ಚದ ಕಾಮಗಾರಿ:ಅಮೃತ ನಗರೋತ್ಥಾನ ಯೋಜನೆಯಡಿ ಬೆಂಗಳೂರು ನಗರದಲ್ಲಿ 6 ಸಾವಿರ ಕೋಟಿ ವೆಚ್ಚದ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಹೈ ಡೆನ್ಸಿಟಿ ಯೋಜನೆಯಡಿ ಒಟ್ಟು 108 ಕಿ.ಮೀ. ರಸ್ತೆಗಳನ್ನು 273 ಕೋಟಿ ರೂ. ಗಳ ಅಂದಾಜಿನಲ್ಲಿ ತೆಗೆದುಕೊಳ್ಳಲಾಗಿದೆ. ಮಳೆ ನೀರು ಮುಕ್ತವಾಗಿ ಹರಿಯುವುದನ್ನು ಖಚಿತಪಡಿಸಿಕೊಳ್ಳಲು ಹಾಗೂ ಪ್ರವಾಹ ತಪ್ಪಿಸಲು 195 ಕಿ.ಮೀ. ಉದ್ದದ ಚರಂಡಿ ಮತ್ತು ಕಲ್ವರ್ಟ್ ಅಭಿವೃದ್ಧಿಗಾಗಿ 1,813 ಕೋಟಿ ರೂ. ಅನುದಾನ ಒದಗಿಸಲಾಗಿದೆ.
ಮಕ್ಕಳ ಬಸ್- 100 ಕೋಟಿ ಅನುದಾನ:ಶಾಲಾ ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕೆ ಮಕ್ಕಳ ಬಸ್ ಯೋಜನೆ ಆರಂಭಿಸಲಾಗುವುದು. 100 ಕೋಟಿ ರೂ. ವೆಚ್ಚದಲ್ಲಿ ಮಕ್ಕಳ ಬಸ್ ಯೋಜನೆ ಅನುಷ್ಠಾನಗೊಳ್ಳಲಿದೆ. ಇದರಿಂದ 2 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಅಭಿವೃದ್ದಿ ಆಕಾಂಕ್ಷಿ ತಾಲೂಕೂಗಳಲ್ಲಿ ಶಿಕ್ಷಣ ಆರೋಗ್ಯ ಮತ್ತು ಪೌಷ್ಟಿಕತೆಗೆ 3 ಸಾವಿರ ಕೋಟಿ ರೂ. ಅನುದಾನ ನೀಡಲಾಗುವುದು. ರಾಜ್ಯದ ಎಲ್ಲಾ ಪ್ರೌಢ ಶಾಲಾ ವಿದ್ಯಾರ್ಥಿಗಳ ಉನ್ನತ ಶಿಕ್ಷಣ ದೃಷ್ಟಿಯಿಂದ ಮುಖ್ಯಮಂತ್ರಿ ವಿದ್ಯಾಶಕ್ತಿ ಯೋಜನೆ ಆರಂಭಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ಘೋಷಿಸಿದ್ದಾರೆ.