ಬೆಂಗಳೂರು:2023-24ರ ಬಜೆಟ್‌ನಲ್ಲಿ ಪ್ರವಾಸೋದ್ಯಮಕ್ಕೆ ಬೊಮ್ಮಾಯಿ ಅವರು ಹಲವಾರು ಘೋಷಣೆಗಳನ್ನು ಮಾಡಿದ್ದು, ನಂದಿ ಗಿರಿಧಾಮ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆ, ನಂದಿಬೆಟ್ಟಕ್ಕೆ ಖಾಸಗಿ-ಸರ್ಕಾರಿ ಸಹಭಾಗಿತ್ವದಲ್ಲಿ ರೋಪ್ ವೇ ನಿರ್ಮಾಣ, ಪ್ರವಾಸಿ ಗೈಡ್‌ಗಳ ಮಾಸಿಕ ಪ್ರೋತ್ಸಾಹ ಧನ 2 ರಿಂದ 5 ಸಾವಿರ ರೂ.ಗೆ ಏರಿಕೆ, ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 100 ರೂ. ಕೋಟಿ ಬಿಡುಗಡೆ ಮಾಡಿದ್ದಾರೆ.
ಅಂಜನಾದ್ರಿ 100 ಕೋಟಿ ರೂ: ಆಂಜನೇಯನ ಜನ್ಮ ಸ್ಥಳವಾದ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 100 ಕೋಟಿಯನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿದೆ. ಪ್ರವಾಸೋದ್ಯಮ ಕೇಂದ್ರವಾಗಿ ಮಾಡುವ ಉದ್ದೇಶದಿಂದ ರಸ್ತೆ ಹಾಗು ಇನ್ನಿತರ ಅಭಿವೃದ್ಧಿಗೆ ಈ ಹಣ ವಿನಿಯೋಗವಾಗಲಿದೆ.
ರಾಮಮಂದಿರ ನಿರ್ಮಾಣ:ರಾಮನಗರದ ರಾಮದೇವರ ಬೆಟ್ಟದಲ್ಲಿ ರಾಮಮಂದಿರ ನಿರ್ಮಾಣದ ಬಗ್ಗೆ ಘೋಷಣೆ ಮಾಡಲಾಗಿದೆ. ಚಾಮುಂಡಿ ಬೆಟ್ಟದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಮ್ಯೂಸಿಯಂ, ಕಲಾ ಗ್ಯಾಲರಿ ನಿರ್ಮಾಣ ಮಾಡಲಾಗುವುದು. ಹೊನ್ನಾವರದಲ್ಲಿ ಚೆನ್ನಭೈರಾದೇವಿ ಸ್ಮಾರಕ ಪಾರ್ಕ್ ನಿರ್ಮಾಣ ಮಾಡಲಾಗುವುದು.
ಭುವನೇಶ್ವರಿ ತಾಯಿಯ ಬೃಹತ್ ಮೂರ್ತಿ:'ಶ್ರೀ ಭುವನೇಶ್ವರಿ ತಾಯಿಯ ಬೃಹತ್ ಮೂರ್ತಿ ಹಾಗೂ ಥೀಮ್ ಪಾರ್ಕ್' ಅನ್ನು ಬೆಂಗಳೂರು ನಗರದಲ್ಲಿ ಅಭಿವೃದ್ಧಿಪಡಿಸುವ ಬಗ್ಗೆ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ.
ಬಂಕಾಪೂರ ಪ್ರವಾಸಿ ತಾಣವಾಗಿ ಅಭಿವೃದ್ಧಿ:ನಾಡಪ್ರಭು ಕೆಂಪೇಗೌಡರ ಐತಿಹಾಸಿಕ ಕುರುಹುಗಳಿರುವ ತಾಣಗಳ ಪ್ರವಾಸಿ ಸರ್ಕಿಟ್ ಒಂದನ್ನು ಈ ವರ್ಷದಿಂದದ ಪ್ರಾರಂಭಿಸಲು ಬಜೆಟ್‌ನಲ್ಲಿ ತಿಳಿಸಲಾಗಿದೆ. ದಾವಣಗೆರೆಯ ಚನ್ನಗಿರಿಯ ಹೊದಿಗೆರೆಯಲ್ಲಿರುವ ಷಹಾಜಿ ಮಹಾರಾಜ್ ಸಮಾಧಿ ಅಭಿವೃದ್ಧಿಗೆ 5 ಕೋಟಿ ಮೀಸಲಿಡಲಾಗಿದೆ. ಹಾವೇರಿಯ ಬಂಕಾಪೂರದಲ್ಲಿ ಐತಿಹಾಸಿಕ 101 ಕಂಬಗಳ ನಗರೇಶ್ವರ ದೇವಸ್ಥಾನ ಪ್ರದೇಶವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಬಗ್ಗೆ ಘೋಷಿಸಲಾಗಿದೆ.