ಬೆಂಗಳೂರು:ಅಮರ್ ಜ್ಯೋತಿ ಯೋಜನೆಯಡಿ ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಎಸ್ಸಿ ಮತ್ತು ಎಸ್ಟಿ ಪಂಗಡದ ಕುಟುಂಬಗಳಿಗೆ ಮಾಸಿಕ 75 ಯೂನಿಟ್ ಉಚಿತ ವಿದ್ಯುತ್ ಯೋಜನೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್ನಲ್ಲಿ ಘೋಷಿಸಿದ್ದಾರೆ. ಬೆಳಕು ಯೋಜನೆಯಡಿ 124 ಕೋಟಿ ರೂ. ವೆಚ್ಚದಲ್ಲಿ 2.35 ಲಕ್ಷ ವಿದ್ಯುತ್‌ರಹಿತ ಮನೆಗಳಿಗೆ ವಿದ್ಯುತ್ ಸಂಪರ್ಕ, 24 ಗಂಟೆಗಳಲ್ಲಿ ವಿದ್ಯುತ್ ಪರಿವರ್ತಕ ಬದಲಾಯಿಸುವ ಕಾರ್ಯಕ್ರಮದಡಿ 1.37 ಲಕ್ಷ ವಿಫಲ ಪರಿವರ್ತಕಗಳ ಬದಲಾವಣೆ, 67,713 ಹೊಸ ವಿದ್ಯುತ್ ಪರಿವರ್ತಕಗಳ ಅಳವಡಿಕೆ ಹಾಗೂ ಗಂಗಾ ಕಲ್ಯಾಣ ಯೋಜನೆಯಡಿ 4,268 ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಸೇರಿ ಹಲವು ಜನಸ್ನೇಹಿ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಪ್ರಕಟಿಸಿದರು.
ರಾಜ್ಯದಲ್ಲಿ 10 ಗಿಗಾ ವ್ಯಾಟ್(GW) ಸಾಮರ್ಥ್ಯದ ನವೀಕರಿಸಬಹುದಾದ ಇಂಧನ ಉತ್ಪಾದನೆ ಗುರಿಯೊಂದಿಗೆ ಕರ್ನಾಟಕ ನವೀಕರಿಸಬಹುದಾದ ಇಂಧನ ನೀತಿ 2022-27 ಜಾರಿಗೊಳಿಸಲಾಗಿದೆ. ಕಳೆದ ವರ್ಷ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಗ್ರೀನ್ ಹೈಡ್ರೋಜನ್ ಸೇರಿದಂತೆ ನವೀಕರಿಸಬಹುದಾದ ಇಂಧನ ಹೂಡಿಕೆಗೆ 1.68 ಲಕ್ಷ ಕೋಟಿ ರೂ. ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದರು. 50 ಹೊಸ ಉಪ ಕೇಂದ್ರಗಳು, 1,060 ಸರ್ಕಿಟ್ ಕಿ.ಮೀ. ಪ್ರಸರಣ ಮಾರ್ಗ ಮತ್ತು 100 ಹಾಲಿ ಇರುವ ಉಪಕೇಂದ್ರಗಳ ಸಾಮರ್ಥ್ಯ ಉನ್ನತೀಕರಣ ಕಾಮಗಾರಿ ಸೇರಿದಂತೆ ಈ ವರ್ಷ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ವತಿಯಿಂದ 3 ಸಾವಿರ ಕೋಟಿ ರೂ.ಹೂಡಿಕೆ ಮಾಡಲಾಗುವುದು. ಕರ್ನಾಟಕ ವಿದ್ಯುತ್ ನಿಗಮದ ಸ್ವಿಚ್‌ಯಾರ್ಡ್ ವ್ಯವಸ್ಥೆಗಳ ಆಧುನೀಕರಣವನ್ನು ಕೇಂದ್ರ ಸರ್ಕಾರದ ಪವರ್ ಸಿಸ್ಟಂ ಡೆವೆಲಪ್‌ಮೆಂಟ್ ಫಂಡ್ ಫೇಸ್-3 ಅಡಿಯಲ್ಲಿ 102 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುತ್ತದೆ.
ಸರ್ಕಾರ ಈಗಾಗಲೇ ಶರಾವತಿ ಪಂಪ್ ಸ್ಟೋರೇಜ್ ಪವರ್ ಪ್ಲಾಂಟ್ (PSP) ವಿಸ್ತ್ರತ ಯೋಜನಾ ವರದಿ ತಯಾರಿಸಿದೆ. ಈ ಯೋಜನೆಯನ್ನು ಕೇಂದ್ರ ಸರ್ಕಾರದ ಸಹಯೋಗದೊಂದಿಗೆ 7,394 ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕ ನಿಗಮದ ಮೂಲಕ ಅನುಷ್ಠಾನಗೊಳಿಸಲಾಗುತ್ತದೆ. ಅಲ್ಲದೇ, ಸಾವಿರ MW ನ ಹೊಸ ಪಂಪ್ ಸ್ಟೋರೇಜ್ ಘಟಕವನ್ನು ಪಿಪಿಪಿ ಮಾದರಿಯಲ್ಲಿ ಸ್ಥಾಪನೆ ಮಾಡಲಾಗುವುದು ಎಂದರು.