ಬೆಂಗಳೂರು: ಚುನಾವಣೆ ಹೊಸ್ತಿಲಲ್ಲಿರುವ ರಾಜ್ಯದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಂಡಿಸಲಿರುವ ಈ ಅವಧಿಯ ಕೊನೆಯ ಬಜೆಟ್ನ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ. ಜನಪ್ರಿಯ, ಹೊರೆ ಇಲ್ಲದ, ಹೆಚ್ಚುವರಿ ಆದಾಯದ ಬಜೆಟ್ ಮಂಡನೆಗೆ ಕಸರತ್ತು ನಡೆಸುತ್ತಿರುವ ಬೊಮ್ಮಾಯಿ ಸರ್ಕಾರ ಈ ಬಾರಿ ರಾಜ್ಯದ ಜನರ ಮೇಲೆ ಹಾಕುವ ಸಾಲದ ಹೊರೆ ಎಷ್ಟು ಎಂಬ ಬಗ್ಗೆ ಕುತೂಹಲ ಮೂಡಿದೆ.
ಸಿಎಂ ಬೊಮ್ಮಾಯಿ ಫೆ.17ರಂದು ಮಂಡಿಸಲಿರುವ ಬಜೆಟ್ ತಮ್ಮ ಅಧಿಕಾರವಧಿಯ ಎರಡನೇ ಬಜೆಟ್ ಆಗಿದೆ. ಕಳೆದ ಬಾರಿ ಹಿತ ಮಿತವಾದ ಹೊರೆ ಇಲ್ಲದ ಚೊಚ್ಚಲ ಬಜೆಟ್ ಅನ್ನು ಸಿಎಂ ಬೊಮ್ಮಾಯಿ ಮಂಡಿಸಿದ್ದರು. ಇದೀಗ ಚುನಾವಣೆ ವರ್ಷದಲ್ಲಿ ಬೊಮ್ಮಾಯಿ ಸರ್ಕಾರಕ್ಕೆ ಚುನಾವಣೆ ಬಜೆಟ್ ಮಂಡಿಸುವ ಅನಿವಾರ್ಯತೆ ಇದೆ. ರಾಜ್ಯದ ಜನರಿಗೆ ಹೆಚ್ಚಿನ ಹೊರೆ ಇಲ್ಲದೆ, ಹೊಸ ಜನಪ್ರಿಯ ಯೋಜನೆಗಳನ್ನು ಘೋಷಿಸುವ ಅಗತ್ಯತೆ ಇದೆ. ಇತ್ತ ಹೊಸ ಯೋಜನೆ ಘೋಷಣೆಗೆ ಹಣ ಹೊಂದಾಣಿಕೆ ಮಾಡುವುದು ಕಷ್ಟ ಸಾಧ್ಯ ಎಂದು ಆರ್ಥಿಕ ಇಲಾಖೆ ತಿಳಿಸಿದೆ. ಕೆಲ ಯೋಜನೆಗಳನ್ನು ಕೈ ಬಿಟ್ಟು ಹೊಸ ಯೋಜನೆಗಳಿಗೆ ಹಣ ಹೊಂದಿಸುವ ಬಗ್ಗೆ ಆರ್ಥಿಕ ಇಲಾಖೆ ಎಲ್ಲ ಇಲಾಖೆಗಳಿಗೆ ಸೂಚನೆ ನೀಡಿದೆ. ಅಧಿಕ ರಾಜಸ್ವ ವೆಚ್ಚದ ಕಾರಣ ಸೀಮಿತ ಆದಾಯ ಸಂಗ್ರಹದಿಂದ ಜನಪ್ರಿಯ ಯೋಜನೆಗಳನ್ನು ಘೋಷಿಸುವುದು ಕಷ್ಟಕರ ಎಂಬ ಬಗ್ಗೆ ಆರ್ಥಿಕ ಇಲಾಖೆ ಒಪ್ಪಿಕೊಂಡಿದೆ.
ಸಿಎಂ ಬೊಮ್ಮಾಯಿಗೆ ಸಾಲದ ಅನಿವಾರ್ಯತೆ:ಈ ಬಾರಿಯೂ ಸಿಎಂ ಬೊಮ್ಮಾಯಿ ಬಜೆಟ್ ಯೋಜನೆಗಳಿಗೆ ಹಣ ಹೊಂದಿಸಲು ಮತ್ತೆ ಸಾಲದ ಮೊರೆ ಹೋಗುವುದು ಅನಿವಾರ್ಯವಾಗಿದೆ ಎಂದು ಆರ್ಥಿಕ ಇಲಾಖೆ ಮೂಲಗಳು ತಿಳಿಸಿವೆ. ರಾಜ್ಯವನ್ನು ಸಾಲದ ಕೂಪಕ್ಕೆ ಬೀಳಿಸುತ್ತಿದೆ ಎಂಬ ಪ್ರತಿಪಕ್ಷಗಳಿಂದ ತೀವ್ರ ಟೀಕೆಗೆ ಒಳಗಾಗಿರುವ ಬಿಜೆಪಿ ಸರ್ಕಾರಕ್ಕೆ ಈ ಬಾರಿಯೂ ಬಹುವಾಗಿ ಸಾಲವನ್ನೇ ನೆಚ್ಚಿಕೊಳ್ಳುವ ಅಗತ್ಯತೆ ಇದೆ.
ಒಂದೆಡೆ ಜಿಎಸ್ಟಿ ಪರಿಹಾರ ಹಣ ಸ್ಥಗಿತವಾಗಿದ್ದರೆ, ಮತ್ತೊಂದೆಡೆ ರಾಜಸ್ವ ವೆಚ್ಚ 2023-24 ಸಾಲಿನಲ್ಲಿ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗುವ ಬಗ್ಗೆ ಮಧ್ಯಮಾವಧಿ ವಿತ್ತೀಯ ಯೋಜನೆ ವರದಿಯಲ್ಲಿ ಹೇಳಲಾಗಿದೆ. ಜನಪ್ರಿಯ ಯೋಜನೆ ಘೋಷಿಸುವ ಅನಿವಾರ್ಯತೆ ಇರುವ ಕಾರಣ ಸಿಎಂ ಬೊಮ್ಮಾಯಿ 2023-24 ಸಾಲಿನಲ್ಲೂ ದೊಡ್ಡ ಪ್ರಮಾಣದ ಸಾಲದ ಮೊರೆ ಹೋಗುವ ಅನಿವಾರ್ಯತೆಕ್ಕೊಳಗಾಗಿದ್ದಾರೆ.