ಬೆಂಗಳೂರು: ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖ ಯೋಜನೆಯಾದ 10 ಕೆಜಿ ಅಕ್ಕಿ ವಿಚಾರದಲ್ಲಿ ಗೊಂದಲಗಳಿಗೆ ತೆರೆ ಎಳೆಯುವ ಕೆಲಸವನ್ನು ಬಜೆಟ್ನಲ್ಲಿ ಮಾಡಲಾಗಿದೆ. ಕೇಂದ್ರದ ಐದು ಕೆಜಿ ಅಕ್ಕಿ ಜೊತೆ ರಾಜ್ಯ ಐದು ಕೆಜಿ ಸೇರಿ 10 ಕೆಜಿ ಉಚಿತ ಅಕ್ಕಿ ವಿತರಣೆಗೆ ಬದ್ಧರಿದ್ದೇವೆ. ಅಕ್ಕಿ ಲಭ್ಯವಾಗುವವರೆಗೂ ರಾಜ್ಯದ ಪಾಲಿನ ಅಕ್ಕಿಯ ಬದಲು ಹಣ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ. ಇದರ ಜೊತೆಗೆ ಕೇಂದ್ರ ಸರ್ಕಾರ ಅಕ್ಕಿ ನೀಡದೆ ರಾಜಕೀಯ ಮಾಡುತ್ತಿದೆ ಎಂದು ಟೀಕಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ನಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಗೆ ಅನ್ನಭಾಗ್ಯಕ್ಕೆ ಸೀಮಿತವಾದ ಅನುದಾನವನ್ನು ಪ್ರಕಟಿಸಲಾಗಿದೆ. ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗೆ ಕೇಂದ್ರ ಸರ್ಕಾರದಿಂದ ಒದಗಿಸುತ್ತಿರುವ ಐದು ಕೆ.ಜಿ. ಅಕ್ಕಿಯ ಜೊತೆಗೆ ರಾಜ್ಯ ಸರ್ಕಾರದಿಂದ ಒದಗಿಸುವ ಹೆಚ್ಚುವರಿ ಐದು ಕೆ.ಜಿ. ಸೇರಿದಂತೆ ಒಟ್ಟಾರೆ 10 ಕೆ.ಜಿ. ಆಹಾರ ಧಾನ್ಯವನ್ನು ಪ್ರತಿ ತಿಂಗಳು ವಿತರಿಸಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.
ಆದರೆ ಕೇಂದ್ರ ಸರ್ಕಾರ ಇದರಲ್ಲಿ ರಾಜಕೀಯ ಮಾಡುವ ಮೂಲಕ ಬಡವರ ಅನ್ನ ಕಸಿಯುವ ಕೆಲಸ ಮಾಡುತ್ತಿರುವುದು ದುರದೃಷ್ಟಕರ ಹಾಗೂ ಇದು ಒಕ್ಕೂಟ ವ್ಯವಸ್ಥೆಯ ಮೇಲಿನ ನಂಬಿಕೆಯನ್ನೇ ಬುಡಮೇಲು ಮಾಡುವಂತಹ ಬೆಳವಣಿಗೆ. ಶೀಘ್ರವೇ ಕೇಂದ್ರ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಿ, ಲಭ್ಯವಿರುವ ಆಹಾರ ಧಾನ್ಯವನ್ನು ಬಡವರಿಗೆ ಹಂಚಲು ಅನುವು ಮಾಡಿಕೊಡುವುದು ಎಂಬುದು ನಮ್ಮ ಆಶಯ ಎಂದಿದ್ದಾರೆ.
ನಾವು ನೀಡಿರುವ ಭರವಸೆಯಂತೆ ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸಲು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದೇವೆ. ಭತ್ತ ಬೆಳೆಯುವ ವಿವಿಧ ರಾಜ್ಯಗಳನ್ನು ಸಂಪರ್ಕಿಸಿದ್ದು, ಅಕ್ಕಿ ಖರೀದಿಸಲು ಮಾತುಕತೆ ನಡೆಸುತ್ತಿದ್ದೇವೆ. ಅಲ್ಲಿಯವರೆಗೂ ಪ್ರತಿ ಕಿಲೋ ಆಹಾರ ಧಾನ್ಯಕ್ಕೆ ವೆಚ್ಚವಾಗುವ ಮೊತ್ತವನ್ನು ಜುಲೈ ತಿಂಗಳಿನಿಂದಲೇ ನೇರ ನಗದು ವರ್ಗಾವಣೆ ಮೂಲಕ ಫಲಾನುಭವಿಗಳ ಖಾತೆಗೆ ಸಂದಾಯ ಮಾಡಲಾಗುವುದು. ಇದರಿಂದ ಫಲಾನುಭವಿಗಳು ಮಾರುಕಟ್ಟೆಯಿಂದ ಧಾನ್ಯಗಳನ್ನು ಖರೀದಿಸಬಹುದು. ನಾವು ಯಾವುದೇ ಕಾರಣಕ್ಕೂ ನೀಡಿರುವ ವಾಗ್ದಾನದಿಂದ ಹಿಂದೆ ಸರಿಯುವುದಿಲ್ಲ ಎಂಬುದನ್ನು ಬಜೆಟ್ ನಲ್ಲಿಯೇ ಸ್ಪಷ್ಟಪಡಿಸಲಾಗಿದೆ.
ಅನ್ನಭಾಗ್ಯ ಯೋಜನೆಯ ಮೂಲಕ ಬಡತನ ರೇಖೆಗಿಂತ ಕೆಳಗಿರುವ 4.42 ಕೋಟಿ ಫಲಾನುಭವಿಗಳಿಗೆ ಅನುಕೂಲವಾಗಲಿದೆ. ಇದಕ್ಕೆ ವರ್ಷಕ್ಕೆ ಸುಮಾರು 10,000 ಕೋಟಿ ರೂ.ಗಳಷ್ಟು ವೆಚ್ಚ ಮಾಡಲಾಗುತ್ತದೆ. ರಾಜ್ಯ ಸರ್ಕಾರವು ಗುರುತಿಸಿರುವ ಸುಮಾರು 40 ಲಕ್ಷ ಬಡತನ ರೇಖೆಗಿಂತ ಕೆಳಗಿರುವ ಫಲಾನುಭವಿಗಳಿಗೆ ಕೇಂದ್ರ ಸರ್ಕಾರವು ಅನುಮೋದನೆ ನೀಡದೇ ಇರುವುದರಿಂದ ಅವರಿಗೆ ಅನ್ನಭಾಗ್ಯ ಯೋಜನೆಯಡಿಯಲ್ಲಿ 10 ಕೆ.ಜಿ. ಆಹಾರ ಧಾನ್ಯಗಳನ್ನು ಸಂಪೂರ್ಣವಾಗಿ ರಾಜ್ಯ ಸರ್ಕಾರದ ವತಿಯಿಂದ ಖರೀದಿಸಿ ವಿತರಿಸಲು ವಾರ್ಷಿಕ 1,680 ಕೋಟಿ ರೂ. ಭರಿಸಲಾಗುವುದು ಎಂದು ತಿಳಿಸಿದೆ.