ಬೆಂಗಳೂರು: ಹಲವು ವರ್ಷಗಳಿಂದ ಕನಿಷ್ಟ ಗೌರವ ಧನಕ್ಕೆ ಹೋರಾಟ ನಡೆಸುತ್ತಿರುವ ರಾಜ್ಯದ ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಆಶಾ ಕಾರ್ಯಕರ್ತೆಯರು ರಾಜ್ಯ ಸರ್ಕಾರದ 2022-23ನೇ ಸಾಲಿನ ಬಜೆಟ್‌ನಲ್ಲಾದರೂ ತಮ್ಮ ಬೇಡಿಕೆಗಳು ಈಡೇರುತ್ತವಾ? ಎಂಬ ನಿರೀಕ್ಷೆಯಲ್ಲಿದ್ದಾರೆ.
ಈ ಕುರಿತಂತೆ ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆಯ ಅಧ್ಯಕ್ಷ ಸೋಮಶೇಖರ ಯಾದಗಿರಿ ಹಾಗೂ ಆಶಾ ಕಾರ್ಯಕರ್ತೆಯ ಸಂಘಟನೆಯ ಮುಖ್ಯಸ್ಥೆ ನಾಗಲಕ್ಷ್ಮಿ ಈಟಿವಿ ಭಾರತದೊಂದಿಗೆ ತಮ್ಮ ಬೇಡಿಕೆಗಳ ಕುರಿತು ಮಾಹಿತಿ ಹಂಚಿಕೊಂಡರು.
ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳು:ಪ್ರಸ್ತುತ ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡುತ್ತಿರುವ 10 ಸಾವಿರ ರೂಪಾಯಿಯನ್ನು ಗೌರವಧನವನ್ನು ಹೆಚ್ಚಿಸುವಂತೆ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದೇವೆ. ಈ ಕುರಿತಂತೆ ಇಲಾಖೆ ಸಚಿವರು ಹಾಗೂ ಕಾರ್ಯದರ್ಶಿ ಜತೆ ಮಾತುಕತೆ ನಡೆಸಿದ್ದೇವೆ. ಈ ಬಾರಿ ಪರಿಗಣಿಸುವ ಭರವಸೆ ನೀಡಿದ್ದಾರೆ ಎಂದು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷ ಸೋಮಶೇಖರ ಯಾದಗಿರಿ ತಿಳಿಸಿದ್ದಾರೆ.
ಕಾರ್ಯಕರ್ತೆಯರಿಗೆ ಎಲ್ಲರಿಗೂ ಒಂದೇ ರೀತಿಯ ಗೌರವಧನ ನೀಡಲಾಗುತ್ತಿದೆ. ಹೀಗಾಗಿ ಸೇವಾ ಹಿರಿತನದ ಆಧಾರದ ಮೇಲೆ 5 ವರ್ಷಕ್ಕೆ 500 ಹೆಚ್ಚಿಸುವಂತೆ ಕೋರಿದ್ದೇವೆ. ಅಂಗನವಾಡಿ ಕಾರ್ಯಕರ್ತೆಯರು ನಿವೃತ್ತಿ ಹೊಂದಿದಾಗ ಅವರಿಗೆ ಯಾವುದೇ ನಿವೃತ್ತಿ ಸೌಲಭ್ಯಗಳಿರುವುದಿಲ್ಲ. ಇಡಗಂಟು ಸೌಲಭ್ಯವನ್ನು ಪುನರ್ ಪ್ರಾರಂಭಿಸುವಂತೆ ಮನವಿ ಒತ್ತಾಯಿಸಲಾಗಿದೆ.