ಬೆಂಗಳೂರು:ರಾಜಕಾರಣಿಗಳು ಎಂದರೆ ಕಾರಣ ಕೊಡುವವರು ಎಂಬ ಕಾಲದಲ್ಲಿ ಅಭಿವೃದ್ಧಿಯ ರಾಜಕಾರಣ ಎಂದರೆ ಏನೆಂದು ಪ್ರತ್ಯಕ್ಷ ತೋರಿಸಿಕೊಟ್ಟವರು ನಮ್ಮ ಪ್ರಧಾನಿ ನರೇಂದ್ರ ಮೋದಿ. ಅವರ ಆಗಮನದಿಂದ ಕರ್ನಾಟಕ ಧನ್ಯವಾಗಿದೆ ಎಂದು ಬಿಜೆಪಿ ತಿಳಿಸಿದೆ. ಈ ಸಂಬಂಧ ಸರಣಿ ಟ್ವೀಟ್ ಮಾಡಿದ್ದು, ಅಧಿಕಾರಕ್ಕಾಗಿ ಹಪಹಪಿಸುವವರ ನಡುವೆ ಮೋದಿ ಭಾರತದ ಅಮೃತ ಕಾಲದ ಬಗ್ಗೆ ಮಾತನಾಡಿ ಸ್ಫೂರ್ತಿ ತುಂಬುತ್ತಾರೆ. ರೈತ ಯೋಜನೆ ಮತ್ತು ಕೈಗಾರಿಕಾ ಕ್ಷೇತ್ರಕ್ಕೆ ಭದ್ರ ಅಡಿಪಾಯ ಹಾಕುವ ಮೂಲಕ ಮುಂದಿನ ದಶಕಕ್ಕೆ ಅಭಿವೃದ್ಧಿಯ ಮಾದರಿ ಒದಗಿಸಿದ್ದಾರೆ. ನಾರಾಯಣಪುರ ಎಡದಂಡೆ ಕಾಲುವೆಗೆ ಸ್ವಯಂಚಾಲಿತ ಗೇಟುಗಳ ಅಳವಡಿಕೆ, ಜಲ ಜೀವನ್ ಮಿಷನ್ ಅಡಿ ಯಾದಗಿರಿ ಜಿಲ್ಲೆಯ 16 ಲಕ್ಷ ಮಂದಿಗೆ ಕುಡಿಯುವ ನೀರು ಕಲ್ಪಿಸುವ ಯೋಜನೆಗೆ ಚಾಲನೆ ಸೇರಿದಂತೆ 10,800 ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ ಎಂದು ಹೇಳಿದೆ.
ಅಭಿವೃದ್ದಿಯೊಂದೇ ಗುರಿ: ಪ್ರಧಾನಿ ನರೇಂದ್ರ ಮೋದಿ ಒಂದೇ ದಿನ 52,072 ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿ ಇತಿಹಾಸ ನಿರ್ಮಿಸಿದರು. ಇಷ್ಟು ಫಲಾನುಭವಿಗಳಿಗೆ ಏಕಕಾಲದಲ್ಲಿ ಹಕ್ಕುಪತ್ರ ವಿತರಣೆ ಗಿನ್ನಿಸ್ ದಾಖಲೆಗೂ ಸೇರಿದೆ. ಆದರೆ ದಾಖಲೆಗಿಂತ ಅಷ್ಟು ಕುಟುಂಬ ಈಗ ನೆಮ್ಮದಿಯಿಂದ ಇವೆ ಎನ್ನುವುದೇ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಸಂತೋಷದ ವಿಚಾರ ಎಂದು ಟ್ವೀಟ್ ಮಾಡಿದೆ. ನಮ್ಮ ಸರ್ಕಾರದ ಆದ್ಯತೆ ಮತಬ್ಯಾಂಕ್ ಅಲ್ಲ ಎಂಬುದನ್ನು ಸ್ಪಷ್ಟಪಡಿಸುವ ಮೂಲಕ ಡಬಲ್ ಎಂಜಿನ್ ಸರ್ಕಾರಕ್ಕೆ ಅಭಿವೃದ್ಧಿಯೊಂದೇ ಗುರಿ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ. ಕಲ್ಯಾಣ ಕರ್ನಾಟಕದ ಪಾಲಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಡಬಲ್ ಕಲ್ಯಾಣಕರ ಮತ್ತು ಅಭಿವೃದ್ಧಿಯ ಹರಿಕಾರ ಎಂದಿದೆ.