ಕರ್ನಾಟಕ

karnataka

ETV Bharat / state

ಹೆಗಡೆಗೆ ಕೈಕೊಟ್ಟು, ಗೌಡರಿಗೆ ಘೋರ ಅನ್ಯಾಯವೆಸಗಿದ್ದ ಜಲದರ್ಶಿನಿ ವಾಸಿ ಸಿದ್ದರಾಮಯ್ಯ: ಬಿಜೆಪಿ ಟೀಕೆ - ಕರ್ನಾಟಕ ಬಿಜೆಪಿ ಟ್ವೀಟ್​

ಉಂಡಮನೆಗೆ ಕನ್ನ ಹಾಕುವುದು ಹೇಗೆ ಎಂಬ ವಿಚಾರದ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ದೇಶಕ್ಕೇ ಟ್ಯೂಶನ್ ಹೇಳಿಕೊಡುವಷ್ಟು ಸಮರ್ಥರು. ಈ ವಿಚಾರದಲ್ಲಿ ಸಿದ್ದರಾಮಯ್ಯ ರೋಚಕ ಇತಿಹಾಸ ಹೊಂದಿದ್ದಾರೆ ರಾಜ್ಯ ಬಿಜೆಪಿ ಟೀಕೆ ಮಾಡಿದೆ.

bjp-tweet-against-siddaramaiah
ಹೆಗಡೆಗೆ ಕೈಕೊಟ್ಟು, ಗೌಡರಿಗೆ ಘೋರ ಅನ್ಯಾಯವೆಸಗಿದ್ದ ಜಲದರ್ಶಿನಿ ವಾಸಿ ಸಿದ್ದರಾಮಯ್ಯ: ಬಿಜೆಪಿ ಟೀಕೆ

By

Published : Jun 4, 2022, 9:11 PM IST

ಬೆಂಗಳೂರು:ಬೆನ್ನಿಗೆ ಚೂರಿ ಹಾಕುವಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿಸ್ಸೀಮರಾಗಿದ್ದು, ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆಗೆ ಕೈಕೊಟ್ಟು, ಜೆಡಿಎಸ್​ ವರಿಷ್ಠ, ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡರಿಗೂ ಘೋರ ಅನ್ಯಾಯವೆಸಗಿದ ಜಲದರ್ಶಿನಿ ವಾಸಿ ಎಂದು ಬಿಜೆಪಿ ಟ್ವೀಟ್ ಮೂಲಕ ಟೀಕಿಸಿದೆ.

ಉಂಡಮನೆಗೆ ಕನ್ನ ಹಾಕುವುದು ಹೇಗೆ ಎಂಬ ವಿಚಾರದ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ದೇಶಕ್ಕೇ ಟ್ಯೂಶನ್ ಹೇಳಿಕೊಡುವಷ್ಟು ಸಮರ್ಥರು. ಈ ವಿಚಾರದಲ್ಲಿ ಸಿದ್ದರಾಮಯ್ಯ ರೋಚಕ ಇತಿಹಾಸ ಹೊಂದಿದ್ದಾರೆ. ನಂಬಿದವರ ಬೆನ್ನಿಗೆ ಚೂರಿ ಹಾಕುವುದರಲ್ಲಿ ಈ "ಜಲದರ್ಶಿನಿ ವಾಸಿ" ನಿಸ್ಸೀಮ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.

ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಗೊಂಡ ಸಿದ್ದರಾಮಯ್ಯ ಅವರಿಗೆ ಸಚಿವ ಸ್ಥಾನ ನೀಡಿ ರಾಜಕೀಯವಾಗಿ ಗುರುತಿಸಿದ್ದು ರಾಮಕೃಷ್ಣ ಹೆಗಡೆ. ಆದರೆ ಸ್ವಾರ್ಥಕ್ಕಾಗಿ ಬಣ ಬದಲಾಯಿಸಿದ ಸಿದ್ದರಾಮಯ್ಯ ಮೊದಲ ಬಾರಿಗೆ ನಂಬಿಕೆ ದ್ರೋಹದ ಅಸ್ತ್ರ ಪ್ರಯೋಗಿಸಿದರು. ಉಂಡಮನೆಗೆ ಎರಡು ಬಗೆಯುವ ಬಗ್ಗೆಯೇ ಸದಾ ಯೋಚಿಸುತ್ತಿದ್ದ ಸಿದ್ದರಾಮಯ್ಯ, ಅಹಿಂದ ಹೋರಾಟದ ಮೂಲಕ ದೇವೇಗೌಡ ಅವರಿಗೆ ಘೋರ ಅನ್ಯಾಯ ಎಸಗಿದರು. ರಾಜಕೀಯವಾಗಿ ಬೆಳೆಸಿದವರ ಬಗ್ಗೆಯೇ ಬಾಯಿಗೆ ಬಂದಂತೆ ನಿಂದಿಸಿದ ಸಿದ್ದರಾಮಯ್ಯ ಅವರನ್ನು ಇಂದಿಗೂ ಮೂಲ ಕಾಂಗ್ರೆಸ್ಸಿಗರು ಪೂರ್ಣವಾಗಿ ನಂಬುತ್ತಿಲ್ಲ ಎಂದು ಬಿಜೆಪಿ ಟೀಕಿಸಿದೆ.

ವಿಶ್ವಾಸ ದ್ರೋಹಿ!:ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತರುವಲ್ಲಿ ಎಸ್.ಎಂ. ಕೃಷ್ಣ ಅವರ ಪ್ರಯತ್ನ ದೊಡ್ಡದು. ಆದರೆ ಕಾಲ ಕಳೆದಂತೆ ಸಿದ್ದರಾಮಯ್ಯ ಅವರು ತಾನು ಹತ್ತಿದ ಏಣಿಯನ್ನೇ ತುಳಿದರು. ಹಿರಿಯರಾದ ಎಸ್‌ಎಂಕೆ ಅವರ ಬಗ್ಗೆ ನಿಂದನೆಯ ಮಾತನಾಡುವಾಗ ಆತ್ಮಸಾಕ್ಷಿಯ ಪ್ರಶ್ನೆ ಎದುರಾಗಲಿಲ್ಲವೇ? ಅವಕಾಶವಾದಿ ಸಿದ್ದರಾಮಯ್ಯ ಸ್ವಾರ್ಥಿಗಳ ಕುಲಗುರು. ವಿಶ್ವಾಸ ದ್ರೋಹಿ! ಮಾಜಿ ಪ್ರಧಾನಿ ದೇವೇಗೌಡ ಅವರ ಬಣ ಸೇರಿದ ಸಿದ್ದರಾಮಯ್ಯ ಅಲ್ಲೂ ನಿಯತ್ತಿನಿಂದ ನಡೆದುಕೊಳ್ಳಲೇ ಇಲ್ಲ. ಸಿದ್ದರಾಮಯ್ಯ ಅವರ ಕನಸು-ಮನಸಿನಲ್ಲಿ ಇದ್ದಿದ್ದು ಬರೇ ಅಧಿಕಾರ, ಅಧಿಕಾರ, ಅಧಿಕಾರ ಅಷ್ಟೇ! ಅಬಕಾರಿ ಖಾತೆಯೇ ಬೇಕು ಎಂದು ಮುಸುಕು ಹಾಕಿ ಮಲಗಿದ್ದವರು ಈಗ ಪ್ರಾಮಾಣಿಕತೆಯ ಸೋಗಿನಲ್ಲಿ ಮೆರೆಯುವುದು ಸೋಜಿಗವಲ್ಲವೇ? ಎಂದು ಬಿಜೆಪಿ ವ್ಯಂಗ್ಯವಾಡಿದೆ.

ದಲಿತ ವಿರೋಧಿ ಕಾಂಗ್ರೆಸ್: 'ಮುಂದೆ ನೀವು ಸಿಎಂ ಆಗಲು ನಾವು ಸಹಕರಿಸುತ್ತೇವೆ' ಎಂದು ಖರ್ಗೆ ಅವರಿಗೆ ಜೆಡಿಎಸ್‌ ಹೇಳಿದ್ದು, ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರಿಗೆ ಬರಸಿಡಿಲು ಬಡಿದಂತಾಗಿದೆ. 2013ರಲ್ಲಿ ದಲಿತ ನಾಯಕ ಸಿಎಂ ಆಗುವುದನ್ನು ತಪ್ಪಿಸಿದ ಕಾಂಗ್ರೆಸ್‌ 2023ಕ್ಕೂ ಅದೇ ತಂತ್ರ ಅನುಸರಿಸುತ್ತಿದೆ. ದಲಿತ ನಾಯಕರೆಂದರೆ ಏಕೆ ಇಷ್ಟು ಅಸಹನೆ? ದಲಿತ ನಾಯಕ ಖರ್ಗೆ ಅವರ ಮೇಲುಗೈ ಆಗುತ್ತದೆ ಎಂಬ ಭಯದಿಂದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರು ಹೊಂದಾಣಿಕೆಯ ನಾಟಕ ಮಾಡುತ್ತಿದ್ದಾರೆ. ದಲಿತ ನಾಯಕನೋರ್ವ ಸಿಎಂ ಆಗುತ್ತಾರೆ ಎನ್ನುವ ಭಯ ನಿಮ್ಮಲ್ಲಿ ಒಗ್ಗಟ್ಟಿನ ಮಂತ್ರ ಜಪಿಸುವಂತೆ ಮಾಡಿತೆ? ಎಂದು ಬಿಜೆಪಿ ಪ್ರಶ್ನಿಸಿದೆ.

ನಮ್ಮದು ದಲಿತಪರ ಪಕ್ಷ ಎನ್ನುವ ಕಾಂಗ್ರೆಸ್‌, ವಾಸ್ತವದಲ್ಲಿ ದಲಿತ ಸಮುದಾಯವನ್ನು ಮೇಲೇರಲು ಬಿಡುವುದೇ ಇಲ್ಲ. ಸಿಎಂ ಆಗಲಿದ್ದ ಪರಮೇಶ್ವರ್‌ ಅವರನ್ನು ಸೋಲಿಸಿದರು, ನಂತರ ಡಿಸಿಎಂ ಸ್ಥಾನದಿಂದಲೂ ಕಿತ್ತೆಸೆದರು, ಈಗ ಇವರ ದೃಷ್ಟಿ ಖರ್ಗೆ ಮೇಲೆ! ದಲಿತರನ್ನು ಸಿಎಂ ಮಾಡುವುದಿಲ್ಲ ಎಂದು ದಲಿತ ವಿರೋಧಿ ಕಾಂಗ್ರೆಸ್ ಪಣ ತೊಟ್ಟಿದೆಯೇ? ಅಖಂಡ ಶ್ರೀನಿವಾಸ್ ಮೂರ್ತಿ ಮನೆಯ ಮೇಲೆ ಮತಾಂಧರು ದಾಳಿ ನಡೆಸಿದಾಗ ಕೈ ನಾಯಕರು ಕೈಕಟ್ಟಿ ಕುಳಿತಿದ್ದರು. ಮತಾಂಧರನ್ನು ಓಲೈಸಲು ದಲಿತರ ಮೇಲಿನ ದಾಳಿಯನ್ನೂ ಕಾಂಗ್ರೆಸ್‌ ಸಮರ್ಥಿಸಿಕೊಳ್ಳುತ್ತದೆ! ಎಂದು ಬಿಜೆಪಿ ಸರಣಿ ಟ್ವೀಟ್ ಮಾಡಿ ಕಿಡಿಕಾರಿದೆ.

ಸಿದ್ದರಾಮಯ್ಯ : 2013 - ಪರಮೇಶ್ವರ್ ಸೋಲಿಗೆ ಪಣ, ಸಿದ್ದರಾಮಯ್ಯ & ಡಿಕೆಶಿ : 2023 - ಖರ್ಗೆ ಕಟ್ಟಿಹಾಕಲು ಪಣ, ಒಬ್ಬ ದಲಿತ ನಾಯಕನನ್ನು ಹಿಮ್ಮೆಟ್ಟಿಸಲು ಎಷ್ಟೊಂದು ಉತ್ಸಾಹ!!! ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಇದನ್ನೂ ಓದಿ:ಮಲ್ಲಿಕಾರ್ಜುನ ಖರ್ಗೆ ಬೇರೆ ಪಕ್ಷದ ಯಾರ ಬೆಂಬಲಕ್ಕೂ ನಿಂತಿಲ್ಲ: ಡಿ ಕೆ ಶಿವಕುಮಾರ್

ABOUT THE AUTHOR

...view details