ಬೆಂಗಳೂರು:ಕರ್ನಾಟಕದಲ್ಲಿನ ಅಭಿವೃದ್ಧಿ ಕಾರ್ಯ ಸಹಿಸಿಕೊಳ್ಳಲಾಗದ ನಕಲಿ ಗಾಂಧಿ ಕುಡಿ ರಾಹುಲ್ ಗಾಂಧಿ ಅವರೇ, ಮುಖ್ಯಮಂತ್ರಿ ಸ್ಥಾನಕ್ಕಾಗಿ ನಿಮ್ಮೆದುರು ಕೈಕಟ್ಟಿ 'ಜೀ ಹುಜೂರ್' ಎನ್ನುವ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ಮಾತು ಕೇಳಿ ಆರೋಪ ಮಾಡುವ ಬದಲು, ರಾಜ್ಯದ ಜನರ ಬಾಯಿಂದ ಸತ್ಯ ತಿಳಿಯಿರಿ ಎಂದು 40 ಪರ್ಸೆಂಟ್ ಕಮಿಷನ್ ಆರೋಪ ಪ್ರಸ್ತಾಪಿಸುತ್ತಿರುವ ರಾಹುಲ್ ಗಾಂಧಿಗೆ ಬಿಜೆಪಿ ಟಾಂಗ್ ನೀಡಿದೆ.
ರಾಹುಕಾಲ ಹೆಸರಿನ ಹ್ಯಾಷ್ ಟ್ಯಾಗ್ ಬಳಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ರಾಜ್ಯ ಬಿಜೆಪಿ ಸರ್ಕಾರ ರೈತರ ಮಕ್ಕಳು, ಕಾರ್ಮಿಕರು, ನೇಕಾರರು, ಮೀನುಗಾರರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಜಾರಿಗೆ ತಂದಿದ್ದು, 14 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಗುಲಾಮಗಿರಿಯನ್ನೇ ನಂಬಿರುವ ರಾಜ್ಯ ಕಾಂಗ್ರೆಸ್ ಪಕ್ಷಕ್ಕೆ ರೈತರು, ಕಾರ್ಮಿಕರ ಮಕ್ಕಳು ಸುಶಿಕ್ಷಿತರಾಗುವುದು ಬೇಕಿಲ್ಲವೇ? ಎಂದು ಪ್ರಶ್ನಿಸಿದೆ.
ಗರೀಬಿ ಹಠಾವೊ ಎಂದು ನಿಮ್ಮ ಅಜ್ಜಿ ಘೋಷಿಸಿ ಐದು ದಶಕ ಕಳೆದಿದೆ. ಇನ್ನು ಬಡವರ ಹೆಸರಿನಲ್ಲಿ ವೋಟ್ ಬ್ಯಾಂಕ್ ರಾಜಕಾರಣ ಮಾಡಲು ನಿಮಗೆ ನಾಚಿಕೆ ಆಗುವುದಿಲ್ಲವೇ? ಮೋದಿ ಸರ್ಕಾರ ಜಾರಿಗೊಳಿಸಿದ ಕಿಸಾನ್ ಸಮ್ಮಾನ್ ಯೋಜನೆಯಿಂದ ರಾಜ್ಯದಲ್ಲಿ ಪ್ರತಿ ವರ್ಷ 50 ಲಕ್ಷಕ್ಕೂ ಹೆಚ್ಚು ರೈತರು ಪ್ರಯೋಜನ ಪಡೆದು ನೆಮ್ಮದಿಯಿಂದ ಕೃಷಿ ಮಾಡುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ರೈತನಿಗೆ ಏನೂ ಮಾಡದೇ ಈಗ ರೈತರ ಹೆಸರಲ್ಲಿ ಬೀದಿ ನಾಟಕ ಮಾಡಲು ನಾಚಿಕೆಯಾಗುವುದಿಲ್ಲವೇ? ಎಂದು ರಾಹುಲ್ ಗಾಂಧಿಗೆ ಮಾತಿನಲ್ಲೇ ಬಿಜೆಪಿ ತಿವಿದಿದೆ.