ನವದೆಹಲಿ/ಬೆಂಗಳೂರು:ಇಡೀ ದೇಶದಲ್ಲಿ ವಾತಾವರಣವು ಬಿಜೆಪಿ ಪರವಾಗಿದೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಎಲ್ಲ 28 ಕ್ಷೇತ್ರಗಳಲ್ಲೂ ಬಿಜೆಪಿ- ಎನ್‍ಡಿಎ ಭಾಗೀದಾರ ಜೆಡಿಎಸ್ ಪಕ್ಷವು ಒಟ್ಟಾಗಿ ಚುನಾವಣೆ ಎದುರಿಸಲಿವೆ. ರಾಜ್ಯದಲ್ಲಿ 28ಕ್ಕೆ 28 ಕ್ಷೇತ್ರಗಳಲ್ಲಿಯೂ ಗೆಲ್ಲುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಮೊದಲ ಬಾರಿ ದೆಹಲಿಗೆ ಭೇಟಿ ನೀಡಿರುವ ಅವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದರು. ರಾಜ್ಯ ರಾಜಕೀಯ ವಿಚಾರದ ಕುರಿತು ಮಾತುಕತೆ ನಡೆಸಿದರು. ನಂತರ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡಿ, ಕೆಲಕಾಲ ಸಮಾಲೋಚನೆ ನಡೆಸಿದರು.
ಕೇಂದ್ರ ನಾಯಕರ ಭೇಟಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ವಿಜಯೇಂದ್ರ, ದೇಶದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಆಗಬೇಕೆಂಬ ಆಸೆ ಜನತೆಯಲ್ಲಿದೆ ಎಂಬುದು ಇಂದಿನ ಫಲಿತಾಂಶದಿಂದ ಗೊತ್ತಾಗಿದೆ. ಪಂಚರಾಜ್ಯ ಚುನಾವಣೆ ಒಂದು ರೀತಿಯ ಸೆಮಿಫೈನಲ್ ಎಂದು ವಿಶ್ಲೇಷಿಸಲಾಗುತ್ತಿತ್ತು. ಸುನಾಮಿ ರೀತಿಯಲ್ಲಿ ಬಿಜೆಪಿ ಅಲೆ ಎದ್ದಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದರು.
ಜನತೆ ದೇಶ ರಕ್ಷಣೆಯ ಗ್ಯಾರಂಟಿ ಬಯಸಿದ್ದಾರೆ:ವಿಜಯ ಯಾತ್ರೆ ಇಲ್ಲಿಗೇ ನಿಲ್ಲುವುದಿಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಮೋದಿ ಅವರು ಪ್ರಧಾನಿ ಆಗುವ ಮೂಲಕ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಜನರು ದೇಶ ರಕ್ಷಣೆಯ ಗ್ಯಾರಂಟಿ ಬಯಸುತ್ತಿದ್ದಾರೆಯೇ ಹೊರತು, ಅಧಿಕಾರ ಕಬಳಿಸುವ ಆಮಿಷದ ಗ್ಯಾರಂಟಿಗಳನ್ನಲ್ಲ ಎಂಬುದು ಈ ಫಲಿತಾಂಶದ ಮೂಲಕ ಸ್ಪಷ್ಟವಾಗಿದೆ. ಇದು ಕಾಂಗ್ರೆಸ್ ಪಕ್ಷಕ್ಕೂ ಕೂಡ ಗೊತ್ತಾಗಿದೆ ಎಂದು ಹೇಳಿದ್ದಾರೆ.