ಬೆಂಗಳೂರು:ಬೆಂಗಳೂರಿನ ವಿವಿಧ ಪ್ರದೇಶಗಳ ಮಳೆ ಹಾನಿ ವೀಕ್ಷಣೆಗೆ ತೆರಳಿದ್ದ ಸಂದರ್ಭದಲ್ಲಿ ಶಾಸಕ ಅರವಿಂದ್ ಲಿಂಬಾವಳಿ ಮಹಿಳೆಗೆ ಅವಾಜ್ ಹಾಕಿದ್ದಾರೆಂಬ ಆರೋಪ ಕೇಳಿ ಬಂದಿದೆ. ಅದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ವರ್ತೂರಿನಲ್ಲಿ ಈ ಘಟನೆ ನಡೆದಿದೆ ಎನ್ನಲಾಗ್ತಿದೆ. ಸುರಿದ ಭಾರೀ ಮಳೆಯಿಂದಾಗಿ ಮಹದೇವಪುರ ಕ್ಷೇತ್ರದ ಹಲವೆಡೆ ಪ್ರವಾಹ ಉಂಟಾಗಿತ್ತು. ಪ್ರವಾಹ ಪೀಡಿತ ಪ್ರದೇಶ ಪರಿವೀಕ್ಷಣೆಗೆ ಸ್ಥಳೀಯ ಶಾಸಕ ಅರವಿಂದ ಲಿಂಬಾವಳಿ ಭೇಟಿ ನೀಡಿದ್ದರು. ಮಳೆ ಅನಾಹುತ ಪ್ರದೇಶವಾದ ವರ್ತೂರು ಕೆರೆ ಕೋಡಿ ವೀಕ್ಷಣೆ ಮಾಡುತ್ತಿದ್ದ ವೇಳೆ ಮಹಿಳೆಯೋರ್ವರು ಮನವಿ ಸಲ್ಲಿಸಲು ಆಗಮಿಸಿದ್ದರು. ಈ ವೇಳೆ ಮಹಿಳೆಯೊಂದಿಗೆ ಶಾಸಕ ಲಿಂಬಾವಳಿ ವಾಗ್ವಾದ ನಡೆಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಮಳೆ ಹಾನಿ ಪ್ರದೇಶದ ವೀಕ್ಷಣೆ ವೇಳೆ ಮಹಿಳೆಗೆ ಗದರಿದ ಶಾಸಕ ಲಿಂಬಾವಳಿ... ಮಹಿಳೆಯ ಕೈಯಲ್ಲಿದ್ದ ಪತ್ರವವನ್ನು ಕಸಿದುಕೊಳ್ಳಲು ಹೋಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಒತ್ತುವರಿ ಮಾಡಿಕೊಂಡು ಈಗ ನ್ಯಾಯ ಕೇಳಲು ಬರ್ತೀಯಾ. ಮಾನ ಮರ್ಯಾದೆ, ನಾಚಿಕೆ ಏನೂ ಇಲ್ವಾ. ಇನ್ನು ಬೇರೆ ಭಾಷೆ ಬರುತ್ತೆ. ಮರ್ಯಾದೆ ಬೇರೆ ಕೊಡಬೇಕಾ? ಎಂದು ಹೇಳಿರುವುದು ವಿಡಿಯೋದಲ್ಲಿದೆ. ಬಳಿಕ ಪೊಲೀಸರನ್ನು ಕರೆಯಿಸಿ ಮಹಿಳೆಯನ್ನು ಠಾಣೆಗೆ ಕರೆದೊಯ್ಯಲು ಸೂಚಿಸಿದ್ದಾರೆ.
ಈ ವಿಡಿಯೋ ತುಣುಕು ಆಮ್ ಆದ್ಮಿ ಪಕ್ಷ ಟ್ವೀಟ್ ಮಾಡಿದ್ದು, ಇದೇನಿದು ಅರವಿಂದ ಲಿಂಬಾವಳಿ ಅವರೇ, ಒಂದು ಹೆಣ್ಣಿನೊಂದಿಗೆ ನಡೆದುಕೊಳ್ಳುವ ರೀತಿಯೇ ಇದು? ತಪ್ಪಿದ್ದರೆ ಕಾನೂನಿದೆ. ಇದೇನು ನಿಮ್ಮ ಮಾತುಗಳು? ನಿಮ್ಮ ಸ್ಥಾನಕ್ಕೆ ಶೋಭೆ ತರುವುದೆ? ಅಧಿಕಾರ ಶಾಶ್ವತ ಅಲ್ಲ. ಅದೇತಕೆ ಇಷ್ಟು ದರ್ಪ" ಎಂದು ಪ್ರಶ್ನೆ ಮಾಡಿದೆ.
ಇದೇ ವಿಚಾರವನ್ನಿಟ್ಟುಕೊಂಡು ಕರ್ನಾಟಕ ಕಾಂಗ್ರೆಸ್ ಕೂಟ ಟ್ವೀಟ್ ಮಾಡಿದೆ. ಅಹವಾಲು ಹೇಳಿಕೊಳ್ಳಲು ಬಂದ ಮಹಿಳೆಯ ಮೇಲೆ ದರ್ಪ ತೋರಿದ ಶಾಸಕ ಅರವಿಂದ್ ಲಿಂಬಾವಳಿಯ ವರ್ತನೆಯು ಬಿಜೆಪಿಯ ಜನವಿರೋಧಿ ಧೋರಣೆ, ದುರಹಂಕಾರ ಪರಮಾವಧಿಗೆ ತಲುಪಿರುವುದಕ್ಕೆ ಸಾಕ್ಷಿ. ಜನತೆಯ ಮೇಲೆ ದರ್ಪ ತೋರಿದ ಮಾತ್ರಕ್ಕೆ ನಿಮ್ಮ ಅಯೋಗ್ಯತನ ಮರೆಯಾಗುವುದಿಲ್ಲ. ಬೊಮ್ಮಾಯಿ ಅವರೆ, ನಿಮ್ಮ ಶಾಸಕರ ಈ ವರ್ತನೆ ನಿಮಗೆ ಸಹ್ಯವೇ? ಎಂದು ಟ್ವೀಟ್ ಮಾಡಿದೆ.
ಮಹಿಳೆ ವಿರುದ್ಧ ದೂರು: ನಂತರ ಸುದ್ದಿ ಪ್ರಸಾರವಾಗುತ್ತಿದ್ದಂತೆ ಕೆಲಸಕ್ಕೆ ಅಡ್ಡಿ ಮಾಡಿದ್ದಾರೆಂದು ಮಹಿಳೆ ವಿರುದ್ಧ ಇಂಜಿನಿಯರೊಬ್ಬರು ದೂರು ದಾಖಲು ಮಾಡಿದ್ದಾರೆ. ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಮಹಿಳೆ ವಿರುದ್ಧ ಎಫ್ಐಆರ್ ದಾಖಲಾಗಿದೆ. ರುತ್ ಮೇರಿ ಸಗಾಯಿ ವಿರುದ್ಧ ಪೊಲೀಸರು ಭೂಕಬಳಿಕೆ, ನೈಸರ್ಗಿಕ ವಿಕೋಪ ಕಾಯ್ದೆ ಹಾಗೂ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಯಡಿ ಪ್ರಕರಣ ದಾಖಲಾಗಿದೆ.
ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಮಹಿಳೆ ರುತ್ ಸಗಾಯಿ ಮೇರಿ, ನಾವು ರಾಜಕಾಲುವೆ ಒತ್ತುವರಿ ಮಾಡದೆ ವಾಣಿಜ್ಯ ಕಟ್ಟಡ ನಿರ್ಮಿಸಿದ್ದೇವೆ. ಕಾನೂನು ಪ್ರಕಾರ ಯೋಜನಾ ನಕ್ಷೆಗೆ ಬಿಬಿಎಂಪಿಯಿಂದ ಅನುಮೋದನೆ ಪಡೆದಿದ್ದೇವೆ. ನಕ್ಷೆ ಸೇರಿ ಇತರ ದಾಖಲೆ ತೋರಿಸಿ ಅಹವಾಲು ಹೇಳಿಕೊಳ್ಳಲು ಮುಂದಾದಾಗ ಶಾಸಕರು ಅವಾಚ್ಯ ಶಬ್ದಗಳಿಂದ ನಿಂದಿಸಿದರು.
ನಮ್ಮ ಕಟ್ಟಡದ ಭಾಗದಲ್ಲಿ ಶೌಚಾಲಯ, ವಿದ್ಯುತ್ ಪರಿವರ್ತಕ ಇರುವುದರಿಂದ ಕಟ್ಟಡ ಒಡೆಯಬೇಡಿ, ಸಮಯ ಕೊಡಿ ಎಂದು ಮನವಿ ಮಾಡಿಕೊಂಡೆ. ಆದರೂ ಶಾಸಕರು ಏಕ ವಚನದಲ್ಲೇ ನಿಂದಿಸಿ ಹಲ್ಲೆ ಮಾಡಲು ಮುಂದಾದರು. ನನ್ನ ಕೈಯಿಂದ ದಾಖಲೆ ಕಸಿದುಕೊಂಡು ನೆಲಕ್ಕೆ ಎಸೆದರು. ಪೊಲೀಸರು ದೂರು ದಾಖಲಿಸಿಕೊಳ್ಳದೆ ಮನೆಗೆ ಕಳುಹಿಸಿದ್ದಾರೆ. ಶಾಸಕರ ದಬ್ಬಾಳಿಕೆ ಮಿತಿ ಮೀರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು