ಬೆಂಗಳೂರು: ಹೈಕಮಾಂಡ್ ವೀಕ್ಷಕರೆದುರು ಕರ್ನಾಟಕ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ನಡೆಯಲಿದ್ದು, ಕೇಂದ್ರದ ಇಬ್ಬರು ನಾಯಕರು ವೀಕ್ಷಕರಾಗಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಸಂಜೆ 6 ಗಂಟೆಗೆ ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ ನೂತನ ನಾಯಕರ ಹೆಸರು ಪ್ರಕಟಿಸಲಾಗುತ್ತದೆ.
ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿ ಜಗನ್ನಾಥ ಭವನ ಅಥವಾ ರಾಜಭವನ ರಸ್ತೆಯಲ್ಲಿರುವ ಕ್ಯಾಪಿಟಲ್ ಹೋಟೆಲ್ನಲ್ಲಿ ಶಾಸಕಂಗ ಪಕ್ಷದ ಸಭೆ ನಡೆಯಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದ ಸಭೆಯಲ್ಲಿ ನೂತನ ಬಿಜೆಪಿ ಶಾಸಕರು ಭಾಗಿಯಾಗಲಿದ್ದು, ವಿಪಕ್ಷ ನಾಯಕನ ಆಯ್ಕೆ ಸಂಬಂಧ ಶಾಸಕರಿಂದ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತದೆ.
ದೆಹಲಿಯಿಂದ ವಿನೋಧ ತಾವಡೆ ಮತ್ತು ಮನ್ಸೂಕ್ ಮಾಂಡವೀಯ ವೀಕ್ಷಕರಾಗಿ ಬರುತ್ತಿದ್ದು, ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಕೂಡ ಸಭೆಯಲ್ಲಿ ಭಾಗಿಯಾಗುವರು. ಇಬ್ಬರು ವೀಕ್ಷಕರ ಸಮ್ಮುಖದಲ್ಲಿ ಶಾಸಕಾಂಗ ನಾಯಕನ ಆಯ್ಕೆ ನಡೆಯಲಿದ್ದು, ಶಾಸಕರ ಅಭಿಪ್ರಾಯ ಸಂಗ್ರಹ ಸಾಧ್ಯತೆ ಅಥವಾ ಈಗಾಗಲೇ ನಿರ್ಣಯ ಮಾಡಿರುವ ಹೆಸರನ್ನು ಸಭೆಯಲ್ಲಿ ಘೋಷಣೆ ಮಾಡುವ ಸಾಧ್ಯತೆ ಇದೆ.
ಈ ಕುರಿತು ಮಾಹಿತಿ ನೀಡಿದ ಮಾಜಿ ಸಚಿವ ಆರ್. ಅಶೋಕ್, "ಕೇಂದ್ರದ ವೀಕ್ಷಕರ ಬರಲಿದ್ದು, ಶಾಸಕರಿಂದ ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ. ನಂತರ ಹೈಕಮಾಂಡ್ ನಾಯಕರು ವಿಪಕ್ಷ ನಾಯಕರ ಆಯ್ಕೆ ಮಾಡುತ್ತಾರೆ. ನಮ್ಮಲ್ಲಿ ಯಾವುದೇ ಗೊಂದಲ, ಗುಂಪು ಇಲ್ಲ" ಎಂದು ಸ್ಪಷ್ಟಪಡಿಸಿದರು.