ಬೆಂಗಳೂರು:ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ದಯನೀಯ ಸೋಲಿಗೆ ಪಕ್ಷ ಎಡವಿದ್ದೆಲ್ಲಿ ಎಂದು ಕಂಡುಕೊಳ್ಳುವಲ್ಲಿ ಕಡೆಗೂ ಬಿಜೆಪಿ ಸಫಲವಾಗಿದೆ. ಅಭ್ಯರ್ಥಿಗಳ ಆಯ್ಕೆಯಲ್ಲಿ ಹೊಸ ಪ್ರಯೋಗ ನಡೆಸಿದ್ದು ಮತ್ತು ಪ್ರತಿಪಕ್ಷ ಕಾಂಗ್ರೆಸ್ನ ಚುನಾವಣಾ ಸಿದ್ದತೆಯನ್ನು ಕಡೆಗಣಿಸಿದ್ದರಿಂದ ಪಕ್ಷಕ್ಕೆ ದೊಡ್ಡಮಟ್ಟದಲ್ಲಿ ಸೋಲಾಯಿತು ಎಂದು ಪಕ್ಷದ ನಾಯಕರು ಸೋಲಿನ ಆತ್ಮಾವಲೋಕನದ ವೇಳೆ ಒಪ್ಪಿಕೊಂಡಿದ್ದಾರೆ. ಇದನ್ನು ಹೈಕಮಾಂಡ್ ಗಮನಕ್ಕೂ ತರುವ ಪ್ರಯತ್ನಕ್ಕೆ ಮುಂದಾಗಿದ್ದು ಲೋಕಸಭಾ ಚುನಾವಣೆ ವೇಳೆ ತಪ್ಪುಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಲು ನಿರ್ಧರಿಸಿದ್ದಾರೆ.
2019ರಲ್ಲಿ ಆಪರೇಷನ್ ಕಮಲದ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಬಿಜೆಪಿ 2023ರ ಚುನಾವಣೆಯಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಆತ್ಮವಿಶ್ವಾಸದಲ್ಲಿ ತಳಮಟ್ಟದಿಂದಲೇ ಎಡವಿ ಸೋಲಿನ ರುಚಿ ನೋಡಬೇಕಾಯಿತು. 120ರ ಸಂಖ್ಯೆಯನ್ನು ದಾಟಿದ್ದ ಬಿಜೆಪಿ ಕೇವಲ 66 ಸ್ಥಾನಕ್ಕೆ ಬಂದಿದ್ದು ಇದಕ್ಕೆ ಕಾರಣವೇನು ಎನ್ನುವ ಕುರಿತು ಪಕ್ಷದ ಕಚೇರಿಯಲ್ಲಿ ಸೋಲಿನ ಆತ್ಮಾವಲೋಕನ ಸಭೆ ನಡೆಸಿ ಸೋಲಿನ ಪರಾಮರ್ಶೆ ನಡೆಸಲಾಯಿತು. ಪಕ್ಷದ ಶಾಸಕರು, ಪರಾಜಿತ ಅಭ್ಯರ್ಥಿಗಳ ಜೊತೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸೇರಿದಂತೆ ಹಿರಿಯ ನಾಯಕರು ಸೋಲಿನ ಕುರಿತು ಪರಾಮರ್ಶೆ ನಡೆಸಿದರು. ಎಲ್ಲರ ಅಭಿಪ್ರಾಯ ಸಂಗ್ರಹ ಮಾಡಿದರು.
ವಿಶೇಷವಾಗಿ ಈ ಸಭೆಯಲ್ಲಿ ಬಿಜೆಪಿ ಮಾಡಿಕೊಂಡ ಆರಂಭಿಕ ತಪ್ಪನ್ನು ತಡವಾಗಿಯಾದರೂ ಒಪ್ಪಿಕೊಂಡು ಹೈಕಮಾಂಡ್ ಗಮನಕ್ಕೆ ತರಲು ನಿರ್ಧರಿಸಿದ್ದಾರೆ. ದೊಡ್ಡ ಸಂಖ್ಯೆಯಲ್ಲಿ ಹಾಲಿ ಶಾಸಕರಿಗೆ ಕೊಕ್ ನೀಡಿ 70ಕ್ಕೂ ಹೆಚ್ಚು ಹೊಸಬರಿಗೆ ಅವಕಾಶ ನೀಡಲಾಯಿತು. ಆದರೆ ಹೊಸಬರ ಗೆಲುವಿನ ಜವಾಬ್ದಾರಿ ವಹಿಸಿಕೊಂಡಿದ್ದು ಯಾರು?, ಹೊಸಬರಿಗೆ ಸಾಥ್ ನೀಡಬೇಕಾದವರೇ ಇರದಿರುವಾಗ ಅಷ್ಟೊಂದು ದೊಡ್ಡ ಮಟ್ಟದಲ್ಲಿ ಹೊಸಬರಿಗೆ ಅವಕಾಶ ನೀಡಿ ಮೈಮರೆತಿದ್ದರಿಂದಲೇ ಹೆಚ್ಚಿನ ನಷ್ಟವಾಯಿತು, ಇಲ್ಲದಿದ್ದಲ್ಲಿ ಇನ್ನು 30 ಸ್ಥಾನ ಹೆಚ್ಚು ಬರುತ್ತಿತ್ತು ಎಂದು ಕೆಲ ಹಿರಿಯ ಶಾಸಕರು, ಪರಾಜಿತ ನಾಯಕರು ಅಭಿಪ್ರಾಯಪಟ್ಟರು. ಅಭ್ಯರ್ಥಿಗಳ ಆಯ್ಕೆಯಲ್ಲಿ ಮಾಡಿಕೊಂಡ ಎಡವಟ್ಟನ್ನು ಪಕ್ಷದ ರಾಜ್ಯ ನಾಯಕರು ಒಪ್ಪಿಕೊಂಡರು ಎನ್ನಲಾಗಿದೆ.
ಇದರ ಜೊತೆ ಪ್ರತಿಪಕ್ಷವಾಗಿದ್ದ ಕಾಂಗ್ರೆಸ್ನ ಚುನಾವಣಾ ಸಿದ್ದತೆಯನ್ನು ಬಿಜೆಪಿ ಕಡೆಗಣಿಸಿದ್ದು ಮತ್ತು ಕಾಂಗ್ರೆಸ್ ಸಿದ್ದತೆಗೆ ಪೂರಕವಾಗಿಯೂ ಸಿದ್ದತೆ ನಡೆಸಿಕೊಳ್ಳದೆ, ಕೇವಲ ಮೋದಿ, ಅಮಿತ್ ಶಾ ರ್‍ಯಾಲಿಗಳತ್ತ ಗಮನ ಕೇಂದ್ರೀಕರಿಸಿದ್ದರಿಂದಾಗಿ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಹಿನ್ನಡೆಯಾಯಿತು ಎನ್ನುವುದನ್ನೂ ಕೆಲ ಹಿರಿಯ ನಾಯಕರು ಪ್ರಸ್ತಾಪಿಸಿದರು. ಇದನ್ನೂ ಮಾಜಿ ಮುಖ್ಯಮಂತ್ರಿಯಾದಿಯಾಗಿ ಇತರ ನಾಯಕರು ಒಪ್ಪಿಕೊಂಡರು. ಅಲ್ಲದೆ ಕಾಂಗ್ರೆಸ್ನ ಚುನಾವಣಾ ಸಿದ್ದತೆಯನ್ನು ಅಂದಾಜಿಸುವಲ್ಲಿ ವಿಫಲವಾದೆವು ನಮ್ಮ ಸಿದ್ದತೆಗಿಂದ ಕಾಂಗ್ರೆಸ್ ಸಿದ್ದತೆ ಅತ್ಯುತ್ತಮವಾಗಿತ್ತು ಅದಕ್ಕೆ ತಕ್ಕ ಬೆಲೆ ನಾವು ತೆರಬೇಕಾಯಿತು ಎಂದು ರಾಜ್ಯ ಘಟಕದಲ್ಲಿಯೂ ಸಿದ್ದತೆ ಕೊರತೆಯನ್ನು ಒಪ್ಪಿಕೊಂಡರು ಎಂದು ತಿಳಿದುಬಂದಿದೆ.
ಬಿಜೆಪಿ ಸೋಲಿನ ಪರಾಮರ್ಶೆ ಏನು ಏನು ಚರ್ಚೆ ಆಯಿತು? ಯಾರ‍್ಯಾರು ಏನು ಸಲಹೆ ನೀಡಿದರು? ಯಾರು ಸೋಲಿಗೆ ಯಾವ ಕಾರಣ ನೀಡಿದರು? ಎನ್ನುವ ಕುರಿತು ಹೇಳುವುದಾದರೆ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಪಾರ್ಟಿ ಬಿಟ್ಟಿದ್ದು ಅನೇಕ ಕ್ಷೇತ್ರದ ಮೇಲೆ ಪರಿಣಾಮ ಬೀರಿತು. ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದ ಮೇಲೆ ಇಬ್ಬರ ಪ್ರಭಾವ ಪಾರ್ಟಿಗೆ ಏಟು ನೀಡಿತು. ಇಬ್ಬರನ್ನು ಮರಳಿ ಪಾರ್ಟಿಗೆ ಕರೆದು ತನ್ನಿ, ಲೋಕಸಭಾ ಚುನಾವಣೆಗೆ ಅನುಕೂಲ ಆಗಲಿದೆ ಎಂದು ಹಿರಿಯ ನಾಯಕ ಕಳಕಪ್ಪ ಬಂಡಿ ಸಭೆಯಲ್ಲಿ ಒತ್ತಾಯ ಮಾಡಿದ್ದಾರೆ.