ಬೆಂಗಳೂರು: ಕರ್ನಾಟಕ ಬಿಜಪಿ ಮುಳುಗುತ್ತಿರುವ ಹಡಗಲ್ಲ, ಮುಳುಗಿ ಹೋದ ಹಡಗು ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ವ್ಯಂಗ್ಯವಾಡಿದರು. ನಗರದಲ್ಲಿಂದು ಬಿ.ಎಲ್.ಸಂತೋಷ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನಿನ್ನೆ ಅವರ ಸಭೆಯಲ್ಲಿ ಯಾರ್ಯಾರು ಗೈರಾಗಿದ್ರು ಮತ್ತು ಅವರ ಪಕ್ಷದ ಆಂತರಿಕ ವಿಚಾರದ ಬಗ್ಗೆ ಬಿ.ಎಲ್.ಸಂತೋಷ್ ಅವರು ಗಮನಹರಿಸಲಿ. ಅವರ ಶಾಸಕರೇ ನಮ್ಮ ಜೊತೆಗೆ ಬರ್ತಿದ್ದಾರೆ. ಸೀ ಡೈವರ್ಸ್ ತರಹ ಮುಳುಗಿದ ಪಕ್ಷವನ್ನು ಸಂತೋಷ್ ಮೇಲೆತ್ತಲಿ ಎಂದು ತಿರುಗೇಟು ಕೊಟ್ಟರು.
ಬಿಜೆಪಿಯಲ್ಲಿ ಈವರೆಗೂ ವಿರೋಧ ಪಕ್ಷದ ನಾಯಕನ ಆಯ್ಕೆಯಾಗಿಲ್ಲ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿಪಕ್ಷ ನಾಯಕ ಇಲ್ಲದೇ ಅಧಿವೇಶನ ನಡೆದಿದೆ. ನನಗೆ ಬಂದ ಮಾಹಿತಿ ಪ್ರಕಾರ ನಿನ್ನೆಯ ಸಭೆಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಕೂಡ ಗೈರಾಗಿದ್ದರು. ಹಾಗಾಗಿ ನಮ್ಮ ಪಕ್ಷದ ಚಿಂತೆ ಬಿಟ್ಟು ತಮ್ಮ ಪಕ್ಷದಲ್ಲೇನಾಗಿದೆ ಎಂಬುದನ್ನು ಸಂತೋಷ್ ನೋಡಿಕೊಳ್ಳಬೇಕು. ನಮ್ಮಲ್ಲಿ ಯಾವೊಬ್ಬ ಶಾಸಕರೂ ಪಕ್ಷ ತೊರೆದು ಬಿಜೆಪಿ ಸೇರ್ಪಡೆಗೊಳ್ಳಲ್ಲ. ಬದಲಿಗೆ ಬಿಜೆಪಿ ಶಾಸಕರೇ ನಮ್ಮ ಪಕ್ಷ ಸೇರ್ತಿದ್ದಾರೆ. ಪಕ್ಷ ಬಿಡುತ್ತಿರುವ ಶಾಸಕರ ಮೇಲೆ ಒತ್ತಡ ಹಾಕಲು ಸಂತೋಷ್ ಹೇಳ್ತಿದ್ದಾರೆ. ಅವರ ಡ್ಯಾಮೇಜ್ ಕಂಟ್ರೋಲ್ ಮಾಡಿಕೊಳ್ಳಲು ಹೇಳಿಕೆ ಕೊಡ್ತಿದ್ದಾರೆ. ಹೀಗೇ ಆದರೆ ಮುಂದೆ ಬಿ.ಎಲ್.ಸಂತೋಷ್ ಸಭೆ ಮಾಡುವುದಕ್ಕೆ ಯಾರೂ ಉಳಿಯುವುದಿಲ್ಲ ಎಂದು ಲೇವಡಿ ಮಾಡಿದರು.