ಬೆಂಗಳೂರು:ನಾಳೆ ರಾಜ್ಯಾದ್ಯಂತ ಕಾಂಗ್ರೆಸ್ ಕರೆ ನೀಡಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಿ ಎಂದು ಬಿಜೆಪಿ ಮನವಿ ಮಾಡಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷ ಕರೆ ನೀಡಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಿ ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿ ಕೇಂದ್ರದ ವಿರುದ್ಧದ ಕಾಂಗ್ರೆಸ್ ಪ್ರತಿಭಟನೆಯನ್ನು ಟೀಕಿಸಿದೆ.
ಟ್ವೀಟ್ ಮೂಲಕ ಕಾಂಗ್ರೆಸ್ ಸರ್ಕಾರ ವಿರುದ್ಧ ಬಿಜೆಪಿ ವಾಗ್ದಾಳಿ ಅನ್ನಭಾಗ್ಯಕ್ಕೆ ಅಕ್ಕಿ ಕೊಂಡುಕೊಳ್ಳಲೂ ಆಗದ, ಅಕ್ಕಿ ಕೊಡಲೂ ಆಗದ “ರಾಜ್ಯ ಕಾಂಗ್ರೆಸ್ ಸರ್ಕಾರದ” ವಿರುದ್ಧ ರಾಜ್ಯ ಕಾಂಗ್ರೆಸ್‌ನಿಂದ ನಾಳೆ ಜೂನ್ 20ರಂದು ರಾಜ್ಯಾದ್ಯಂತ ಎಲ್ಲಾ ಜಿಲ್ಲಾಕೇಂದ್ರಗಳಲ್ಲಿ ಪ್ರತಿಭಟನೆ. ದಯವಿಟ್ಟು ಪಾಲ್ಗೊಳ್ಳಿ ಎಂದು ಬಿಜೆಪಿ ಟ್ವೀಟ್ ಮಾಡಿದೆ. ಕೇಂದ್ರ ಸರ್ಕಾರ ಅಕ್ಕಿ ಮಾರಾಟಕ್ಕೆ ತಡೆ ನೀಡಿರುವ ವಿರುದ್ಧ ಕಾಂಗ್ರೆಸ್ ಕರೆ ನೀಡಿರುವ ಪ್ರತಿಭಟನೆಯನ್ನು ಬಿಜೆಪಿ ಈ ರೀತಿಯಾಗಿ ಅಣಕಿಸಿದೆ.
ಸರಕಾರದ ವಿದ್ಯುತ್ ನೀತಿಯನ್ನು ಸಿಎಂ ಸರಿಪಡಿಸಲಿ. ಅವರದೇ ಪಕ್ಷದ ಶಾಸಕರು, ಸರಕಾರದ ಉಚಿತ ಪ್ರಯಾಣದ ಮಾನದಂಡಗಳು ಸರಿಯಿಲ್ಲ ಎಂದು ಹೇಳಿದ್ದು, ಅವರದೇ ಪಕ್ಷದ ಶಾಸಕರು. ಮುಖ್ಯಮಂತ್ರಿಗಳ ಬದಲಾವಣೆಯಿಲ್ಲ(ನಮ್ಮನ್ನು ನಂಬಿ ಪ್ಲೀಸ್) ಎಂದು ಹೇಳುತ್ತಿದೆ. ಅವರದೇ ಪಕ್ಷದ ಸಚಿವರುಗಳು, ಕೆಲ ಸಚಿವರಿಗೆ ಕೆಲಸ ಬಿಟ್ಟು ಬೇರೆಯದ್ದರಲ್ಲೇ ಆಸಕ್ತಿ ಎಂದು ಹೇಳಿದ್ದು ಅವರದೇ ಪಕ್ಷದ ಸಂಸದರು ಮತ್ತು ಇದೀಗ ಕಾಂಗ್ರೆಸ್ ಸರಕಾರದ ವರ್ಗಾವಣೆ ನೀತಿಗೆ ಕಾಂಗ್ರೆಸ್ಸಿಗರೇ ಗರಂ ಅಂತೆ ಎಂದು ಬಿಜೆಪಿ ಟ್ವೀಟ್ ಮೂಲಕ ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷದ ದ್ವಂದ್ವವನ್ನು ಟೀಕಿಸಿದೆ.
ವಿದ್ಯುತ್ ದರ ಏರಿಕೆಯಿಂದ ರೋಸಿ ಹೋಗಿರುವ ಜನತೆಯ ಕೂಗು ರಾಜ್ಯದಲ್ಲಿರುವ ಎಟಿಎಂ ಸರ್ಕಾರಕ್ಕೆ ಕೇಳುತ್ತಿಲ್ಲ. ಕೈಗಾರಿಕೆಗಳು ಬೀಗ ಹಾಕಲು ನಿರ್ಧರಿಸಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊಂಡುತನ ಪ್ರದರ್ಶಿಸುತ್ತಿದ್ದಾರೆ. ಇಂಧನ ಸಚಿವ ಕೆ.ಜೆ. ಜಾರ್ಜ್ ಕೂಡ ವಿದ್ಯುತ್ ದರ ಏರಿಕೆ ವಾಪಸ್ ಇಲ್ಲ ಎಂದು ನಿರ್ಲಜ್ಜತೆ ಪ್ರದರ್ಶಿಸಿದ್ದಾರೆ. ಕಲೆಕ್ಷನ್ ಏಜೆಂಟ್ ಸುರ್ಜೇವಾಲಾರವರ ಕೈಗೊಂಬೆಗಳಾಗಿರುವ ತಾವುಗಳು ಜನರ ರಕ್ತ ಹೀರಿ ಹೈಕಮಾಂಡ್ ಹೊಟ್ಟೆ ತುಂಬಿಸಬೇಕೇ? ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಗ್ಯಾರಂಟಿ ವಂಚನೆಗಳನ್ನು ಮುಂದಿಟ್ಟು ಅಧಿಕಾರಕ್ಕೆ ಬಂದ ಕರ್ನಾಟಕ ಕಾಂಗ್ರೆಸ್ನಲ್ಲಿ ಇರುವುದು ಸ್ವಾರ್ಥ ಚಿಂತನೆ ಮಾತ್ರ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಇರುವುದು ಎರಡೇ - ಅಧಿಕಾರದ ದಾಹ, ಮತ್ತೊಂದು ಅಭದ್ರತಾ ಭಾವ. ಹೈಕಮಾಂಡ್ ಕಲೆಕ್ಷನ್ ಏಜೆಂಟ್ ರಣದೀಪ್ ಸುರ್ಜೇವಾಲ್ ಅವರಿಗೆ ರಾಜ್ಯದ ಸಬ್-ಏಜೆಂಟ್ ತಾನಾಗಬೇಕೆಂಬುದೇ ಇಬ್ಬರ ಹೆಬ್ಬಯಕೆ. ಪರಿಣಾಮವಾಗಿ ಒಳಗುದ್ದಾಟ ಮತ್ತು ಕಾಲೆಳೆಯುವಿಕೆಯಲ್ಲೇ ಎಟಿಎಂ ಸರ್ಕಾರ ನಿರತವಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ಸಿದ್ದರಾಮಯ್ಯ, ಮಹದೇವಪ್ಪ, ಸತೀಶ್ ಜಾರಕಿಹೊಳಿ, ಎಂ.ಬಿ. ಪಾಟೀಲ್ ಒಂದು ಕಡೆ ಡಿಕೆ ಶಿವಕುಮಾರ್, ಡಿ.ಕೆ. ಸುರೇಶ್, ಲಕ್ಷ್ಮಿ ಹೆಬ್ಬಾಳ್ಕರ್ ಮತ್ತೊಂದು ಕಡೆ ಇರುವಂತೆ ಫೋಟೋಗಳ ಪ್ರಕಟಿಸಿ ಮಧ್ಯದಲ್ಲಿ ಬಿರುಕು ಮೂಡಿರುವ ಗೆರೆ ಹಾಕಿ ಕೈ ಕಚ್ಚಾಟ ಎಂದು ಟ್ವೀಟ್ ಮಾಡಿರುವ ಬಿಜೆಪಿ ಕಾಂಗ್ರೆಸ್ ನಲ್ಲಿನ ಬಣ ರಾಜಕೀಯವನ್ನು ಪರೋಕ್ಷವಾಗಿ ಫೋಟೋ ಮೂಲಕ ಪ್ರಕಟಿಸಿದೆ.
ಇದನ್ನೂ ಓದಿ:ಬಿಜೆಪಿ ಅಂದ್ರೆ ಬಿಜಿನೆಸ್ ಜನತಾ ಪಾರ್ಟಿ, ಬ್ರಿಟಿಷ್ ಜನತಾ ಪಾರ್ಟಿ: ಮಧು ಬಂಗಾರಪ್ಪ