ಕರ್ನಾಟಕ

karnataka

ETV Bharat / state

ನೂರು ದಿನದಲ್ಲಿ 1.20 ಲಕ್ಷ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ ಇಂಧನ ಇಲಾಖೆ

ವಿದ್ಯುತ್ ಸಂಪರ್ಕ ರಹಿತ ಜನವಸತಿಗಳಿಗೆ ಸಂಪರ್ಕ ಕಲ್ಪಿಸುವ ಡಿಡಿಯುಜಿಜಿವೈ (ದೀನ್ ದಯಾಳ್ ಉಪಾಧ್ಯಾಯ) ಹಾಗೂ ಸೌಭಾಗ್ಯ ಯೋಜನೆಗಳು 2020ಕ್ಕೆ ಮುಕ್ತಾಯಗೊಂಡಿತ್ತು. ಹೀಗಾಗಿ 'ಬೆಳಕು' ವಿಶೇಷ ಯೋಜನೆಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವ ಮಹತ್ವದ ನಿರ್ಧಾರ ತೆಗೆದುಕೊಂಡು ಅದಕ್ಕೆ ನೂರು ದಿನಗಳ ಕಾಲಮಿತಿ ವಿಧಿಸಲಾಗಿತ್ತು. ಕೊನೆಗೂ ಈ ಗುರಿ ಮುಟ್ಟುವಲ್ಲಿ ಇಂಧನ ಇಲಾಖೆ ಯಶಸ್ವಿಯಾಗಿದೆ.

karnataka-belaku-yojana-reached-milestone
ಬೆಳಕು ಯೋಜನೆ

By

Published : Dec 11, 2021, 11:02 PM IST

ಬೆಂಗಳೂರು:ವಿದ್ಯುತ್ ಸಂಪರ್ಕವಿಲ್ಲದ ರಾಜ್ಯದ 1.20 ಲಕ್ಷ ಮನೆಗಳಿಗೆ ನೂರು ದಿನದಲ್ಲಿ ಬೆಳಕು ನೀಡುವ ಮಹತ್ವದ ಗುರಿ ಸಾಧಿಸಲಾಗಿದೆ. ಇಂಧನ ಇಲಾಖೆಯ ಇತಿಹಾಸದಲ್ಲಿ ಇದೊಂದು ಮಹತ್ವದ ಮೈಲುಗಲ್ಲಾಗಿದ್ದು, 1.20 ಲಕ್ಷ ಮನೆಗಳಿಗೆ ನೂರು ದಿನದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.

ವಿದ್ಯುತ್ ಸಂಪರ್ಕ ರಹಿತ ಜನವಸತಿಗಳಿಗೆ ಸಂಪರ್ಕ ಕಲ್ಪಿಸುವ ಡಿಡಿಯುಜಿಜಿವೈ (ದೀನ್ ದಯಾಳ್ ಉಪಾಧ್ಯಾಯ) ಹಾಗೂ ಸೌಭಾಗ್ಯ ಯೋಜನೆಗಳು 2020ಕ್ಕೆ ಮುಕ್ತಾಯಗೊಂಡಿತ್ತು. ಹೀಗಾಗಿ 'ಬೆಳಕು' ವಿಶೇಷ ಯೋಜನೆಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವ ಮಹತ್ವದ ನಿರ್ಧಾರ ತೆಗೆದುಕೊಂಡು ಅದಕ್ಕೆ ನೂರು ದಿನಗಳ ಕಾಲಮಿತಿ ವಿಧಿಸಲಾಗಿತ್ತು. ಕೊನೆಗೂ ಈ ಗುರಿ ಮುಟ್ಟುವಲ್ಲಿ ಇಂಧನ ಇಲಾಖೆ ಯಶಸ್ವಿಯಾಗಿದೆ.

ಕೋವಿಡ್ ಕಾಲಘಟ್ಟದಲ್ಲಿ ಗ್ರಾಮೀಣ ಪ್ರದೇಶದಲ್ಲೂ ವರ್ಕ್ ಫ್ರಾಂ ಹೋಮ್ ಹಾಗೂ ವಿದ್ಯಾರ್ಥಿಗಳಿಗೆ ಆನ್​​ಲೈನ್ ತರಗತಿಗಳು ನಡೆಯಲಾರಂಭಿಸಿದವು. ಈ ಹಿನ್ನೆಲೆಯಲ್ಲಿ ಬಡ ಕುಟುಂಬಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಯಾವುದೇ ಅನಾನುಕೂಲತೆಯಾಗದಂತೆ ನೋಡಿಕೊಳ್ಳಲು ಆದ್ಯತೆ ಮೇರೆಗೆ ಯೋಜನೆಯನ್ನು ಕಾರ್ಯಗತಗೊಳಿಸಲಾಗಿದೆ.

ನಿರ್ಬಂಧ ಸಡಿಲಿಕೆ:

ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವುದಕ್ಕೆ ಈ ಹಿಂದೆ ಸ್ಥಳೀಯ ಆಡಳಿತದಿಂದ ನಿರಾಕ್ಷೇಪಣಾ ಪತ್ರ (ಎನ್​​ಓಸಿ) ಪಡೆಯುವುದು ಕಡ್ಡಾಯವಾಗಿತ್ತು. ಎಷ್ಟೋ ಕಡೆ ಸ್ಥಳೀಯ ಆಡಳಿತದಿಂದಲೇ ಸಮಸ್ಯೆ ಉಂಟಾಗಿತ್ತು. ಈ ಹಿನ್ನೆಯಲ್ಲಿ ಯಾರಿಗೆ ಮನೆ ಇದೆಯೋ ಅವರೆಲ್ಲರಿಗೂ ಸಂಪರ್ಕ ನೀಡಬೇಕು. ರೇಷನ್ ಕಾರ್ಡ್, ಆಧಾರ್ ಕಾರ್ಡ್, ಮತದಾರರ ಪ್ರಮಾಣ ಪತ್ರ, ಗ್ರಾಮ ಪಂಚಾಯಿತಿ ಒದಗಿಸುವ ಇನ್ನಿತರ ದಾಖಲೆ ಸಲ್ಲಿಸಿ ವಿದ್ಯುತ್ ಸಂಪರ್ಕ ಪಡೆಯುವುದಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಹೀಗಾಗಿ ಪ್ರಕ್ರಿಯೆಯಲ್ಲಿ ಅನಗತ್ಯ ಕಿರಿಕಿರಿಗೆ ಅವಕಾಶವಿರಲಿಲ್ಲ. ಇದರ ಫಲವಾಗಿ 1.20 ಲಕ್ಷ ವಿದ್ಯುತ್ ಸಂಪರ್ಕ ಕಲ್ಪಿಸುವ ಗುರಿ ಕಾಲಮಿತಿಯಲ್ಲೇ ಮುಕ್ತಾಯಗೊಂಡಿದೆ.

ಸಂಪರ್ಕವಿಲ್ಲದ ಮನೆಗಳು ಎಷ್ಟು ಇದ್ದವು?:

ಬೆಳಕು ಯೋಜನೆಯನ್ವಯ ವಿದ್ಯುತ್ ಸಂಪರ್ಕ ರಹಿತ ಮನೆಗಳ ಸರ್ವೆ ನಡೆಸಿದಾಗ 1,26,787 ಮನೆಗಳಿಗೆ ಬೆಳಕಿನ ಭಾಗ್ಯ ಇಲ್ಲದೇ ಇರುವುದು ಗಮನಕ್ಕೆ ಬಂದಿದೆ.

ಬೆಳಕು ಯೋಜನೆ

ಬೆಸ್ಕಾಂ 14,904, ಚಾಸ್ಕಾಂ 20,741, ಮೆಸ್ಕಾಂ 13,135, ಹುಸ್ಕಾಂ 37,419, ಗುಸ್ಕಾಂ 35253 ಮತ್ತು ಹುಗ್ರಾವಿಸಸಂ 5335 ಮನೆಗಳಿಗೆ ಸಂಪರ್ಕವಿರಲಿಲ್ಲ. ಈ ಪೈಕಿ 80,228 ಸರ್ವಿಸ್ ಮೆನ್​ಗಳಿದ್ದರೆ, 46,559 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದಕ್ಕೆ ಸಂಪೂರ್ಣ ಮೂಲ ಸೌಕರ್ಯ ರಚನೆ ಮಾಡುವ ಅನಿವಾರ್ಯತೆ ಇತ್ತು. ಒಟ್ಟು 142.44 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಅನುಷ್ಠಾನ ಕಂಡಿದೆ.

ಇದು ಹೃದಯಕ್ಕೆ ಹತ್ತಿರವಾದ ಯೋಜನೆ:

ಈ ಸಾಧನೆ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಇಂಧನ ಸಚಿವ ಸುನಿಲ್ ಕುಮಾರ್, ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಕಳೆದರೂ ಲಕ್ಷಾಂತರ ಮನೆಗಳಿಗೆ ಇನ್ನೂ ವಿದ್ಯುತ್ ಸಂಪರ್ಕ ಸಿಕ್ಕಿಲ್ಲ ಎಂಬ ಮಾಹಿತಿ ನನ್ನನ್ನು ಬಹುವಾಗಿ ಕಾಡಿತು. ಆಹಾರ, ಆಶ್ರಯ, ಅಕ್ಷರದಂತೆ ಬೆಳಕು ಮನುಷ್ಯನ ಅನಿವಾರ್ಯತೆ. ಈ ಹಿನ್ನೆಲೆಯಲ್ಲಿ ಎಲ್ಲ ಮನೆಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸಬೇಕೆಂಬ ಸಿಎಂ ಬಸವರಾಜ್ ಬೊಮ್ಮಾಯಿಯವರ ಆಶಯಕ್ಕೆ ಪೂರಕವಾಗಿ ಬೆಳಕು ಯೋಜನೆಯನ್ನು ರೂಪಿಸಿ ಅನುಷ್ಠಾನಗೊಳಿಸಲಾಗಿದೆ ಎಂದಿದ್ದಾರೆ.

ಆರಂಭದಲ್ಲಿ ವಿದ್ಯುತ್ ಸಂಪರ್ಕವಿಲ್ಲದ ಮನೆಗಳೇ ಇಲ್ಲ ಎಂದು ಅಧಿಕಾರಿಗಳು ಹೇಳಿದ್ದರು. ಆದರೆ ಪಟ್ಟು ಹಿಡಿದು ಮಾಹಿತಿ ಕಲೆ ಹಾಕುತ್ತಾ ಹೋದಾಗ ಇಷ್ಟೊಂದು ವಿಚಾರ ಲಭಿಸಿತು. ಇನ್ನೂ ವಿದ್ಯುತ್ ಸಂಪರ್ಕವಿಲ್ಲದ ಮನೆಗಳ ಮಾಹಿತಿ ಬರುತ್ತಲೇ ಇದೆ. ಅವುಗಳಿಗೂ ಸಂಪರ್ಕ ನೀಡುತ್ತೇವೆ. ಇದು ಜನಸಾಮಾನ್ಯರಿಗಾಗಿ ರೂಪಿಸಿದ ಯೋಜನೆ. ಇದು ನನ್ನ ಹೃದಯಕ್ಕೆ ಹತ್ತಿರವಾದ ಯೋಜನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಅನೈತಿಕ ಸಂಬಂಧ: ಗ್ರಾಮ ಪಂಚಾಯ್ತಿ ಸದಸ್ಯ ಸೇರಿದಂತೆ ಪತ್ನಿ ಕೊಲೆ ಮಾಡಿದ ಗಂಡ

ABOUT THE AUTHOR

...view details