ಬೆಂಗಳೂರು:ಸರ್ಕಾರದ ನೀತಿ ಹಾಗೂ ಪರಿವರ್ತನೆಯ ಬದಲಾವಣೆಗೆ ತಕ್ಕಂತೆ ಉದ್ಯಮಗಳು ಬದಲಾಗುತ್ತಿದ್ದು, ಈ ನಿಟ್ಟಿನಲ್ಲಿ ಕೃಷಿ ಉದ್ಯಮವನ್ನು ವೃದ್ಧಿಸಬೇಕಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.
ಎಫ್ಐಸಿಸಿ ಶೃಂಗಸಭೆಯಲ್ಲಿ ಪಾಲ್ಗೊಂಡು ಕೃಷಿ ನವೋದ್ಯಮಿಗಳಿಗೆ ಆನ್ಲೈನ್ ಮೂಲಕ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದ ಸಚಿವರು, ರಾಜಧಾನಿ ಬೆಂಗಳೂರಲ್ಲಿ 6 ಸಾವಿರ ಸ್ಟಾರ್ಟಪ್ಗಳಿದ್ದರೂ ಸಹ ಬಹಳ ಕಡಿಮೆ ಸಂಖ್ಯೆಯಲ್ಲಿ ಅಗ್ರಿ ಸ್ಟಾರ್ಟಪ್ಗಳಿವೆ. ಕೃಷಿಗೆ ಮತ್ತು ಅನ್ನದಾತರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯ ಅಗ್ರಿ ಸ್ಟಾರ್ಟಪ್ ಹಬ್ಗಳನ್ನು ಸ್ಥಾಪಿಸಿ ಬೆಂಗಳೂರನ್ನು ಅಗ್ರಿ ಸ್ಟಾರ್ಟಪ್ ಹಬ್ ಆಗಿಸುವ ಗುರಿ ಹೊಂದಿರುವುದಾಗಿ ಹೇಳಿದರು.
ಅಗ್ರಿ ಸ್ಟಾರ್ಟಪ್ಗಳು ಕೃಷಿಯಲ್ಲಿ ಸರಪಳಿಯಂತೆ ಕೆಲಸ ಮಾಡುತ್ತಿದ್ದು, ಇದರಿಂದ ರೈತರಿಗೂ ಹಾಗೂ ಗ್ರಾಹಕರಿಗೂ ದಕ್ಷ ಮತ್ತು ನವೀನ ಉತ್ಪನ್ನಗಳು ತಂತ್ರಜ್ಞಾನ ಸೇವೆಗಳು ಲಭ್ಯವಾಗಲಿದೆ. ಬೆಂಗಳೂರನ್ನು ಸ್ಟಾರ್ಟಪ್ಗಳ ಕೇಂದ್ರವಾಗಿ ಪರಿಗಣಿಸಿ ಮತ್ತು ಕರ್ನಾಟಕದಲ್ಲಿ ಅಗ್ರಿ ಸ್ಟಾರ್ಟಪ್ಗಳಿಗೆ ಅನುಕೂಲಕರ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಕೃಷಿ ಇಲಾಖೆಯಿಂದ ಬೆಂಗಳೂರಿನಲ್ಲಿ ಅಗ್ರಿ ಸ್ಟಾರ್ಟಪ್ಗಳ ಕುರಿತು ಕಾರ್ಯಾಗಾರ ನಡೆಸಲಾಗಿತ್ತು. ಸರ್ಕಾರದ ನೀತಿ ಹಾಗೂ ಪರಿವರ್ತನೆಯ ಬದಲಾವಣೆಗೆ ತಕ್ಕಂತೆ ಉದ್ಯಮಗಳು ಬದಲಾಗುತ್ತಿದ್ದು, ಈ ನಿಟ್ಟಿನಲ್ಲಿ ಕೃಷಿಯನ್ನು ಕೃಷಿ ಉದ್ಯಮವನ್ನು ವೃದ್ಧಿಸಬೇಕಿದೆ. ಕೃಷಿಯನ್ನು ಉದ್ಯಮವನ್ನಾಗಿಸಲು ಕೃಷಿಕರನ್ನು ಕೃಷಿ ಉದ್ಯಮಿಗಳನ್ನಾಗಿಸುವ ಉದ್ದೇಶದಿಂದ ರಾಜ್ಯದಲ್ಲಿ ಕೃಷಿ ನವೋದ್ಯಮ (ಅಗ್ರಿ ಸ್ಟಾರ್ಟಪ್)ಆರಂಭಿಸುವುದಕ್ಕಾಗಿ ಕೃಷಿ ನವೋದ್ಯಮ ನೀತಿಗಳನ್ನು ರೂಪಿಸಿ ಅದಕ್ಕಾಗಿ ಸಮಿತಿಯೊಂದನ್ನು ರಚಿಸಲಾಗಿದ್ದು, ಸಮಿತಿ ವರದಿ ನೀಡಿದೆ. ಅಗ್ರಿ ಸ್ಟಾರ್ಟಪ್ ಸಮಿತಿಯು ನೀಡಿರುವ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ ಎಂದರು.