ಬೆಂಗಳೂರು:ಕೋವಿಡ್ ಸೋಂಕಿಗೊಳಗಾಗಿರುವ ರಾಜ್ಯದ 733 ವಕೀಲರಿಗೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು (ಕೆಎಸ್‌ಬಿಸಿ) 1.06 ಕೋಟಿ ರೂ ನೆರವು ನೀಡಲು ಮುಂದಾಗಿದೆ.
ಸೋಂಕು ತಗುಲಿ ಹೋಮ್ ಕ್ವಾರಂಟೈನ್ನಲ್ಲಿರುವ ವಕೀಲರಿಗೆ ತಲಾ 10,000 ರೂಪಾಯಿ ಹಾಗೂ ಆಸ್ಪತ್ರೆಗೆ ದಾಖಲಾಗಿರುವ ವಕೀಲರಿಗೆ ತಲಾ 25 ಸಾವಿರ ರೂಪಾಯಿ ನೆರವು ನೀಡಲು ತೀರ್ಮಾನಿಸಲಾಗಿದೆ ಎಂದು ಪರಿಷತ್ತಿನ ಅಧ್ಯಕ್ಷರಾದ ಎಲ್ ಶ್ರೀನಿವಾಸ ಬಾಬು ತಿಳಿಸಿದ್ದಾರೆ. ಅದರಂತೆ ಹೋಮ್ ಐಸೋಲೇಷನ್ ಆಗಿರುವ 513 ವಕೀಲರಿಗೆ ತಲಾ 10,000 ರೂಪಾಯಿ ಹಾಗೂ ಆಸ್ಪತ್ರೆಗೆ ಸೇರಿರುವ 220 ವಕೀಲರಿಗೆ ತಲಾ 25 ಸಾವಿರ ರೂಪಾಯಿ ನೀಡಲಾಗುತ್ತದೆ. ಈ ನೆರವನ್ನು ಎರಡು ಹಂತಗಳಲ್ಲಿ ನೀಡಲಾಗುವುದು ಎಂದು ಪರಿಷತ್ತಿನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಅತ್ಯಾಚಾರ ಆರೋಪ: ಕಂಗನಾ ರಣಾವತ್ ಬಾಡಿಗಾರ್ಡ್ ಮಂಡ್ಯದಲ್ಲಿ ಬಂಧನ
25 ಕೋಟಿ ರೂ. ಅನುದಾನ ಕೋರಿ ಸರ್ಕಾರಕ್ಕೆ ಮನವಿ:ಲಾಕ್ಡೌನ್ನಿಂದಾಗಿ ನ್ಯಾಯಾಲಯಗಳು ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ವಕೀಲರಿಗೆ ನೆರವು ನೀಡಲು 25 ಕೋಟಿ ರೂ ವಿಶೇಷ ಅನುದಾನ ಮಂಜೂರು ಮಾಡುವಂತೆ ಪರಿಷತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದೆ.
ರಾಜ್ಯದಲ್ಲಿ 1.10 ಲಕ್ಷಕ್ಕೂ ಹೆಚ್ಚು ವಕೀಲರಿದ್ದು, ಹೆಚ್ಚಿನವರು ಗ್ರಾಮೀಣ ಭಾಗದ ಕೃಷಿ ಸಮುದಾಯ ಮತ್ತು ಹಿಂದುಳಿದ ವರ್ಗದವರಾಗಿದ್ದಾರೆ. ಕಳೆದೊಂದು ವರ್ಷದಿಂದ ತೀವ್ರ ಆರ್ಥಿಕ ಬಿಕ್ಕಟ್ಟಿಗೊಳಗಾಗಿದ್ದಾರೆ. 200ಕ್ಕೂ ಹೆಚ್ಚು ವಕೀಲರು ಕೋವಿಡ್ಗೆ ಬಲಿಯಾಗಿದ್ದಾರೆ. ಹೀಗಾಗಿ ವಕೀಲರಿಗೆ ಆರ್ಥಿಕ ನೆರವು ನೀಡಲು ಅನುದಾನ ನೀಡುವಂತೆ ಪರಿಷತ್ತು ಸಿಎಂಗೆ ಬರೆದ ಪತ್ರದಲ್ಲಿ ಮನವಿ ಮಾಡಿದೆ.