ಬೆಂಗಳೂರು: ಕಾವೇರಿ ನೀರಿಗಾಗಿ ಕನ್ನಡಪರ ಸಂಘಟನೆಗಳು ನಾಳೆ ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಕನ್ನಡಪರ ಸಂಘಟನೆ ಹೋರಾಟಗಾರರಾದ ವಾಟಾಳ್ ನಾಗರಾಜ್, ಸಾ.ರಾ. ಗೋವಿಂದು, ಪ್ರವೀಣ್ ಶೆಟ್ಟಿ ನೇತೃತ್ವದಲ್ಲಿ ನೂರಾರು ಸಂಘಟನೆಗಳು ನಾಳೆ ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಕೆಲವು ಸಂಘಟನೆಗಳು ಸಂಪೂರ್ಣ ಬೆಂಬಲ ನೀಡಿದರೆ, ಕೆಲವು ಸಂಘಟನೆಗಳು ನೈತಿಕ ಬೆಂಬಲ ವ್ಯಕ್ತಪಡಿಸಿವೆ.
ಈಗಾಗಲೇ ಜಲ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ರೈತರು, ಕನ್ನಡ ಪರ ಸಂಘಟನೆ, ದಲಿತ ಸಂಘಟನೆ ಸೇರಿ ಇನ್ನೂರಕ್ಕೂ ಅಧಿಕ ಸಂಘಟನೆಗಳು ಕಳೆದ ಮಂಗಳವಾರ ಬೆಂಗಳೂರು ಬಂದ್ ನಡೆಸಿದವು. ಬಂದ್ ಭಾಗವಾಗಿ ಬುಧವಾರ ತೆರೆದ ವಾಹನದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ರ‍್ಯಾಲಿ ನಡೆಸಿದ ವಾಟಾಳ್ ನಾಗರಾಜ್ ಮತ್ತು ಮತ್ತಿತರ ಹೋರಾಟಗಾರರು, ಹೋಟೆಲ್, ಶಾಪಿಂಗ್ ಮಾಲ್ ಮತ್ತು ಅಂಗಡಿ ಮಾಲೀಕರ ಬಳಿ ಬಂದ್‌ಗೆ ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ. ನಾಳೆ ಟೌನ್‌ಹಾಲ್‌ನಿಂದ ಫ್ರೀಡಂ ಪಾರ್ಕ್‌ವರೆಗೆ ಪ್ರತಿಭಟನಾ ರ‍್ಯಾಲಿ ನಡೆಯಲಿದ್ದು, ಇದನ್ನು ತಡೆಯದಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದು ಮುಖಂಡರು ಹೇಳಿದ್ದಾರೆ.
ಕನ್ನಡ ಚಿತ್ರರಂಗದ ಎಲ್ಲ ಚಟುವಟಿಕೆಗಳನ್ನು ಸ್ಥಗಿತಗೊಳಿಸುವುದಾಗಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಭರವಸೆ ನೀಡಿದೆ. ಪ್ರತಿಭಟನಾ ರ‍್ಯಾಲಿಯಲ್ಲಿ ಕಲಾವಿದರು ಭಾಗವಹಿಸಬೇಕೆಂದು ಸಹ ಮನವಿ ಮಾಡಲಾಗಿದೆ. ರೈಲು, ಹೆದ್ದಾರಿ, ವಿಮಾನ ಹಾರಾಟ ಬಂದ್ ಆಗಲಿವೆ ಎಂದು ವಾಟಾಳ್ ನಾಗರಾಜ್ ತಿಳಿಸಿದ್ದಾರೆ. ಕರ್ನಾಟಕ ಬಂದ್‌ಗೆ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬೆಂಬಲ ಸೂಚಿಸಿದೆ. ಸದ್ಯ ರಾಜ್ಯದಲ್ಲಿನ ಸಂಕಷ್ಟದ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡುವ ಮತ್ತು ಸೂಕ್ತ ನ್ಯಾಯಕ್ಕಾಗಿ ಒತ್ತಾಯಿಸಲು ನಾಡಿನ ಕನ್ನಡಪರ-ರೈತಪರ-ಜನಪರ ಸಂಘ ಸಂಸ್ಥೆಗಳು ಕರೆ ನೀಡಿರುವ ಕನಾರ್ಟಕ ಬಂದ್‌ಗೆ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಂಪೂರ್ಣ ಬೆಂಬಲ ನೀಡಲಿದೆ. ಶಾಲೆ- ಕಾಲೇಜುಗಳಿಗೆ ರಜೆ ನೀಡುವ ಸಂಬಂಧ ಆಯಾ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಿರ್ಧಾರ ಕೈಗೊಳ್ಳುವುದು ಸೂಕ್ತವೆಂದು ಖಾಸಗಿ ಶಾಲೆಗಳು ಒತ್ತಾಯಿಸಿವೆ.
ಬಿಎಂಟಿಸಿ ನೌಕರರ ಸಂಘ ನೈತಿಕ ಬೆಂಬಲ ನೀಡಲಿದೆ. ಆದರೆ ಬಿಎಂಟಿಸಿ ಬಸ್ ಸಂಚಾರ ಎಂದಿನಂತೆ ನಡೆಯಲಿದೆ. ಸರ್ಕಾರಿ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ. ಓಲಾ, ಊಬರ್ ಬೆಂಬಲ ಸೂಚಿಸಿದ್ದು, 48 ಸಾವಿರ ಟ್ಯಾಕ್ಸಿಗಳು ಹಾಗೂ ಸುಮಾರು 1.25 ಲಕ್ಷ ಆಟೋಗಳು ಸ್ಥಗಿತವಾಗಲಿವೆ. ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಓಲಾ ಊಬರ್ ಅಸೋಸಿಯೋಷನ್ ಅಧ್ಯಕ್ಷ ತನ್ವೀರ್ ಪಾಷ ತಿಳಿಸಿದ್ದಾರೆ. ಬೀದಿ ಬದಿ ವ್ಯಾಪಾರಿಗಳು ಕೂಡ ಬಂದ್‌ಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ನಾಳೆ ಬೆಳಗ್ಗೆ 6 ರಿಂದ ಸಂಜೆ 6 ವರೆಗೂ ರಾಜ್ಯಾದ್ಯಂತ ಬೀದಿ ಬದಿ ವ್ಯಾಪಾರಿಗಳು ಹಾಗೂ ಸ್ಥಳೀಯ ಮಾರ್ಕೆಟ್ ಬೀದಿ ಬದಿ ವ್ಯಾಪಾರಗಳು ಸಂಪೂರ್ಣ ಸ್ಥಗಿತವಾಗಲಿದೆ ಎಂದು ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ರಾಜ್ಯಾಧ್ಯಕ್ಷ ರಂಗಸ್ವಾಮಿ ಹೇಳಿದ್ದಾರೆ.
ಇದನ್ನೂ ಓದಿ:ಮತ್ತೆ ತಮಿಳುನಾಡಿಗೆ ಕಾವೇರಿ ನೀರು : ಮಂಡ್ಯದಲ್ಲಿ ಸಗಣಿ ಸ್ನಾನ.. ಕಾವೇರಿ ಹೋರಾಟಕ್ಕೆ ಸ್ವಾಮೀಜಿಗಳ ಸಾಥ್