ಬೆಂಗಳೂರು:ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವುದನ್ನು ಖಂಡಿಸಿ ಕನ್ನಡಪರ ಸಂಘಟನೆಗಳು ಸೇರಿ ವಿವಿಧ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ರಾಜಧಾನಿ ಬೆಂಗಳೂರಿನಲ್ಲಿ ಬಹುತೇಕ ಬೆಂಬಲ ವ್ಯಕ್ತವಾಗಿದೆ. ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಬಂದ್ ಆಗಲಿದ್ದು, ಇಂದು ಶಾಲಾ- ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ. ಆಸ್ಪತ್ರೆಗಳು, ಮಡಿಕಲ್ ಸ್ಟೋರ್ಗಳು ತೆರೆದಿವೆ.
ಕರ್ನಾಟಕ ಬಂದ್ ಕಾರಣದಿಂದಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿರುವುದಾಗಿ ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ್ ತಿಳಿಸಿದ್ದಾರೆ. ಬೆಂಗಳೂರು ನಗರದ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ ಕೆ.ಎ. ದಯಾನಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಡು, ನುಡಿ, ನೆಲಜಲದ ಪ್ರಶ್ನೆ ಬಂದಾಗ ಎಲ್ಲರೂ ಒಂದಾಗಬೇಕೆಂದ ಹೆಚ್ಡಿಕೆ:''ಕಾವೇರಿ ಹೋರಾಟಕ್ಕೆ ಇಡೀ ಕರುನಾಡು ಮಿಡಿದಿದೆ. ಇಂದಿನ ಬಂದ್‌ಗೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ'' ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಕಾವೇರಿ ನೀರಿಗಾಗಿ ಇಂದು ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿರುವ ಅವರು, ''ನಾಡು, ನುಡಿ, ನೆಲ ಜಲದ ಪ್ರಶ್ನೆ ಬಂದಾಗ ಎಲ್ಲರೂ ಒಂದಾಗಬೇಕು ಎಂದಿದ್ದಾರೆ. ಕನ್ನಡಿಗರ ಕುಟುಂಬದಲ್ಲಿ ಹಾಸುಹೊಕ್ಕಾಗಿರುವ ಈ ಸಾಮರಸ್ಯ, ಐಕ್ಯತೆ ನೆರೆ ರಾಜ್ಯಗಳಿಗೆ ಎಚ್ಚರಿಕೆ ಗಂಟೆ ಆಗಬೇಕು. ಕಾಂಗ್ರೆಸ್ ಸರ್ಕಾರವೂ ಕನ್ನಡಿಗರ ಭಾವನೆಗಳನ್ನು ದಮನ ಮಾಡಬಾರದು. ಈಗಾಗಲೇ ವಶಕ್ಕೆ ಪಡೆದಿರುವ ಹೋರಾಟಗಾರರನ್ನು ಬಿಡುಗಡೆ ಮಾಡಬೇಕು'' ಎಂದು ಹೆಚ್ಡಿಕೆ ಆಗ್ರಹಿಸಿದ್ದಾರೆ.
ವಿಮಾನ ನಿಲ್ದಾಣ ಮುತ್ತಿಗೆಗೆ ಯತ್ನ:ರಾಜ್ಯದಾದ್ಯಂತ ಕಾವೇರಿ ನೀರಿಗಾಗಿ ಹೋರಾಟ ತೀವ್ರಗೊಂಡಿದೆ. ತಮಿಳುನಾಡಿಗೆ ನೀರು ಹರಿಸುವುದು ಖಂಡಿಸಿ ಇಂದು (ಶುಕ್ರವಾರ) ರೈತ ಪರ ಹಾಗೂ ವಿವಿಧ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಮಂಡ್ಯ, ಮೈಸೂರು, ಚಾಮರಾಜನಗರ ಸೇರಿದಂತೆ ಹಲವು ಭಾಗಗಳಲ್ಲಿ ಪ್ರತಿಭಟನಾಕಾರರು ಪ್ರತಿಭಟನೆ ಕೈಗೊಂಡಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲೂ ಕಾವೇರಿ ಪ್ರತಿಭಟನಾ ಕಾವು ಜೋರಾಗಿದ್ದು, ಹಲವೆಡೆ ರೈತರು ಸೇರಿದಂತೆ ವಿವಿಧ ಸಂಘಟೆನಗಳು ರಸ್ತೆಗೆ ಇಳಿದು ಪ್ರತಿಭಟನೆ ನಡೆಸಿವೆ. ಕೆಲವು ಕಡೆಗಳಲ್ಲಿ ರಸ್ತೆಗಳ ತಡೆ ಮಾಡಿದ್ದಾರೆ.
ಕರ್ನಾಟಕ ನವ ನಿರ್ಮಾಣ ಸೆನೆ ಕಾರ್ಯಕರ್ತರು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ನುಗ್ಗಿ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ವಿಮಾನ ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ತಮಿಳುನಾಡಿಗೆ ಕಾವೇರಿ ನೀರು ಬಿಡದಂತೆ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:Cauvery Dispute: ಕೆಂಪೇಗೌಡ ವಿಮಾನ ನಿಲ್ದಾಣ ಮುತ್ತಿಗೆಗೆ ಯತ್ನ... ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು