ಬೆಂಗಳೂರು:ರಾಜ್ಯ ಸರ್ಕಾರ ಮರಾಠ ಅಭಿವೃದ್ಧಿ ನಿಗಮ ರಚಿಸಿರುವುದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ಇಂದು ಕರ್ನಾಟಕ ಬಂದ್ಗೆ ಕರೆ ನೀಡಿವೆ. ಮರಾಠಿಗರಿಗೆ ನಿಗಮ ರಚಿಸಿರುವುದರಿಂದ ಕನ್ನಡಿಗರಿಗೆ, ಕನ್ನಡ ನಾಡಿಗೆ ಅನ್ಯಾಯ ಆಗಿದೆ. ಈ ನಿಗಮ ರದ್ದು ಮಾಡಬೇಕು ಎಂದು ಕನ್ನಡಪರ ಸಂಘಟನೆಗಳು ಒತ್ತಾಯಿಸಿವೆ.
ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಬಂದ್ ನಡೆಸಲು ತೀರ್ಮಾನಿಸಲಾಗಿದೆ. ಆದರೆ, ಹೋಟೆಲ್, ಬ್ಯಾಂಕ್, ಸಂಚಾರ ವ್ಯವಸ್ಥೆ, ಸರ್ಕಾರಿ ಕಚೇರಿಗಳು, ಮಾರುಕಟ್ಟೆಗಳು ಎಂದಿನಂತೆ ತೆರೆಯಲಿದ್ದು, ಬಂದ್ಗೆ ಯಾವ ರೀತಿ ಪ್ರತಿಕ್ರಿಯೆ ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ.
ಒಂದೆಡೆ ಬಂದ್ ಯಶಸ್ವಿಗೊಳಿಸಲು ಕನ್ನಡಪರ ಸಂಘಟನೆಗಳು ಮುಂದಾಗಿದ್ದರೆ, ಇನ್ನೊಂದೆಡೆ ಈಗಾಗಲೇ ಕೋವಿಡ್ನಿಂದ ಸಾಕಷ್ಟು ನಷ್ಟ ಅನುಭವಿಸಿರುವ ಹೋಟೆಲ್ ಸಂಘ ಸೇರಿದಂತೆ ಅನೇಕ ಸಂಘಟನೆಗಳು ನೈತಿಕ ಬೆಂಬಲ ಮಾತ್ರ ಘೋಷಿಸಿವೆ.
ಎಲ್ಲೆಲ್ಲಿ ಪ್ರತಿಭಟನೆ?
ನಗರದ ಹಲವೆಡೆ ಪ್ರತಿಭಟನಾ ಮೆರವಣಿಗೆಗಳು ನಡೆಯಲಿವೆ. ಸರ್ಕಾರಿ ಕಚೇರಿ, ರೈಲ್ವೆ ನಿಲ್ದಾಣಗಳಿಗೆ ಮುತ್ತಿಗೆ ಹಾಕಲು ಸಿದ್ಧತೆ ನಡೆಸಲಾಗಿದೆ. ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳು, ತಹಶೀಲ್ದಾರ್, ಕಚೇರಿಗಳಿಗೆ ಮುತ್ತಿಗೆ ಹಾಕಲಿವೆ. ಸಿಎಂ ನಿವಾಸಕ್ಕೆ ಮುತ್ತಿಗೆ ಹಾಗೂ ಹೆದ್ದಾರಿ ತಡೆ ನಡೆಸಲು ಸಂಘಟನೆಗಳು ಸಜ್ಜಾಗಿವೆ.
ಪೊಲೀಸ್ ಬಂದೋಬಸ್ತ್
ಬಂದ್ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಸುಮಾರು 16,000 ಪೊಲೀಸರನ್ನು ಭದ್ರತೆಗೆ ನಿಯೋಜಿಸಲು ನಿರ್ಧರಿಸಿದೆ. ಪ್ರತಿಭಟನೆ ಅಥವಾ ಬಂದ್ ಆಚರಣೆಗೆ ಯಾರಿಗೂ ಅನುಮತಿ ನೀಡಿಲ್ಲ. ಶಾಂತಿ ಭಂಗಕ್ಕೆ ಯತ್ನಿಸಿದರೆ ಮುಲಾಜಿಲ್ಲದೆ ಕಾನೂನು ರೀತಿ ಕ್ರಮ ಜರುಗಿಸಲಾಗುತ್ತದೆ ಎಂದು ನಗರದ ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಕೆ ನೀಡಿದ್ದಾರೆ. ಇಬ್ಬರು ಹೆಚ್ಚುವರಿ ಆಯುಕ್ತರು, ಜಂಟಿ ಆಯುಕ್ತರು, ಡಿಸಿಪಿಗಳು, ಹಾಗೂ 16 ಸಾವಿರ ಪೊಲೀಸರು ಭದ್ರತಾ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ. 30 ಕೆಎಸ್ಆರ್ಪಿ ಹಾಗೂ 30 ನಗರ ಸಶಸ್ತ್ರ ಮೀಸಲು ಪಡೆಗಳನ್ನು ಬಂದೋಬಸ್ತ್ಗೆ ಬಳಸಿಕೊಳ್ಳಲಾಗುತ್ತಿದೆ.