ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸಬಾರದು ಎಂದು ಒತ್ತಾಯಿಸಿ ಕರ್ನಾಟಕ ಬಂದ್ ಮಾಡಲು ಸೋಮವಾರ ದಿನಾಂಕ ಘೋಷಣೆ ಮಾಡುತ್ತೇವೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದರು.
ನಗರದ ಪ್ರೆಸ್ಕ್ಲಬ್ನಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಸಂಘಟನೆಗಳು ಬರುವ ಮಂಗಳವಾರ ಬಂದ್‌ಗೆ ಕರೆ ನೀಡಿರುವುದಕ್ಕೆ ನನ್ನ ವಿರೋಧವಿಲ್ಲ. ಅವರ ಜೊತೆಗೂ ಮಾತಾಡುತ್ತೇನೆ. ಎಲ್ಲರೂ ಒಟ್ಟಿಗೆ ಸೇರಿ ಅಖಂಡ ಕರ್ನಾಟಕ ಬಂದ್ ಮಾಡಬೇಕು ಎಂದು ಮನವಿ ಮಾಡುತ್ತೇನೆ. ಎಲ್ಲರೂ ಒಟ್ಟಿಗೆ ಸೇರಿ ಬಂದ್ ಮಾಡಿದರೆ ಹೋರಾಟಕ್ಕೆ ಶಕ್ತಿ ಬರಲಿದೆ. ಸೆ. 28 ಅಥವಾ 29 ಅಥವಾ 30 ರಂದು ಅಖಂಡ ಕರ್ನಾಟಕ ಬಂದ್ ಮಾಡಿದರೆ ಒಳ್ಳೆಯದು. ಬಂದ್ ದಿನದಂದು ಎಲ್ಲರೂ ಮನೆಯಲ್ಲಿ ಇದ್ದು ಸ್ಪಂದಿಸಬೇಕು ಎಂದರು.
ಗಂಭೀರವಾದ ಕಾವೇರಿ ನೀರಿನ ಪರಿಸ್ಥಿತಿ ಎದುರಿಸುತ್ತಿದ್ದೇವೆ. ಗಡಿ ವಿಚಾರದಲ್ಲೂ ಯಾರಿಗೂ ಹೆದರದೆ ಹೋರಾಟ ಮಾಡಿದ್ದೇವೆ. ರಾಜ್ಯ ಸರ್ಕಾರ ಯಾರನ್ನು ಕೇಳಿಕೊಂಡು ನೀರು ಬಿಡುತ್ತಿದೆ. ಕರ್ನಾಟಕದಲ್ಲಿ ಕನ್ನಡಿಗರು, ಹೋರಾಟಗಾರರು ಇನ್ನೂ ಇದ್ದಾರೆ ಎಂದು ಗುಡುಗಿದರು.
ನಮ್ಮ ಎಲ್ಲಾ ಸಂಸದರು ಪ್ರಧಾನ ಮಂತ್ರಿ ಮನೆ ಮುಂದೆ ಹೋಗಿ, ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದರ ಬಗ್ಗೆ ನಮಗೆ ತುಂಬಾ ನೋವಾಗಿದೆ ಎಂದು ಹೇಳಬೇಕಿತ್ತು. ಹಿಂದಿನ ಪ್ರಧಾನ ಮಂತ್ರಿಗಳಾದ ಮನಮೋಹನ್ ಸಿಂಗ್, ಪಿವಿ ನರಸಿಂಹ ರಾವ್ ನಮ್ಮನ್ನು ಕರೆದು ಮಾತಾಡಿದ್ದರು. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಯಿ ಸೇರಿದಂತೆ ಬಿಜೆಪಿ ನಾಯಕರು ಮೈಸೂರು ಬ್ಯಾಂಕ್ ಸರ್ಕಲ್ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಆದರೆ ಪ್ರಧಾನ ಮಂತ್ರಿ ಬಳಿ ಹೋಗಲು ಭಯವಿದ್ದಂತೆ ಕಾಣುತ್ತದೆ. ಜೆಡಿಎಸ್‌ನವರು ನಿನ್ನೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದರೂ, ಕಾವೇರಿ ನೀರಿನ ಬಗ್ಗೆ ಮಾತನಾಡಿಲ್ಲ ಎಂದು ಆಕ್ರೋಶ ಹೊರಹಾಕಿದರು.
ತಮಿಳುನಾಡಿಗೆ ಕಾವೇರಿ ನೀರು ಹರಿಸುವುದರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿಲುವು ಸ್ಪಷ್ಟವಾಗಿರಲಿ. ತುರ್ತು ಶಾಸಕಾಂಗ ಪಕ್ಷದ ಸಭೆ ಕರೆದು ಸರ್ವಾನುಮತದಿಂದ ನೀರು ಬಿಡಲು ಸಾಧ್ಯವಿಲ್ಲ ಎಂದು ತೀರ್ಮಾನ ಮಾಡಬೇಕು. ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರನ್ನು ಸಿಎಂ ಸಿದ್ದರಾಮಯ್ಯ ಅವರು ಮಾತುಕತೆಗೆ ಕರೆಯಬೇಕು. ನೀರು ಬಿಡಲೇಬೇಕೆಂದಾದರೆ ರಾಜೀನಾಮೆ ಕೊಟ್ಟು ಹೊರ ಬರಬೇಕು. ಒಂದು ತೀರ್ಮಾನಕ್ಕೆ ಬರದಿದ್ದರೆ ಸೋಮವಾರ ಸಭೆ ಮಾಡಿ ಕರ್ನಾಟಕ ಬಂದ್ ಬಗ್ಗೆ ಚರ್ಚೆ ಮಾಡುತ್ತೇವೆ. ಅಖಂಡ ಕರ್ನಾಟಕದ ಹೋರಾಟ ಈಗ ಅನಿವಾರ್ಯವಾಗಿದ್ದು, ಎಲ್ಲ ಸಂಘಟನೆಗಳು ಭಾಗವಹಿಸಬೇಕು ಎಂದು ವಾಟಾಳ್ ನಾಗರಾಜ್ ಮನವಿ ಮಾಡಿದರು.
ಸೋಮವಾರ ವುಡ್ ಲ್ಯಾಂಡ್ಸ್ ಹೋಟೆಲ್‌ನಲ್ಲಿ ಎಲ್ಲ ಕನ್ನಡಪರ ಹೋರಾಟಗಾರರ ಸಭೆ ನಡೆಯಲಿದೆ. ಈ ಸಭೆಯಲ್ಲಿ ಅಖಂಡ ಕರ್ನಾಟಕ ಬಂದ್ ದಿನಾಂಕ ಘೋಷಣೆ ಮಾಡಲಿದ್ದಾರೆ ಎಂದು ಅವರು ಇದೇ ವೇಳೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಚಿತ್ರ ನಿರ್ಮಾಪಕ ಸಾ ರಾ ಗೋವಿಂದು ಸೇರಿದಂತೆ ಕನ್ನಡಪರ ಸಂಘಟನೆಗಳ ಮುಖಂಡರು ಹಾಜರಿದ್ದರು.
ಇದನ್ನೂ ಓದಿ :ರಾಜ್ಯ ಸರ್ಕಾರ ನೀರು ಬಿಡಲ್ಲ ಎನ್ನುವ ನಿಲುವು ತಾಳಿದರೆ ನಾವು ಅವರೊಂದಿಗಿದ್ದೇವೆ: ಮಾಜಿ ಸಚಿವ ಸಿ ಟಿ ರವಿ