ಬೆಂಗಳೂರು: ಮಹತ್ವದ ಕಾರ್ಯಾಚರಣೆವೊಂದರಲ್ಲಿ ಬೆಂಗಳೂರಿನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ತಾಲೀಬ್ ಹುಸೇನ್ ಬಂಧನವಾಗಿದ್ದು, ಆತನ ಕುರಿತಾದ ಸ್ಫೋಟಕ ವಿಷಯ ಇದೀಗ ಬಹಿರಂಗಗೊಳ್ಳಲು ಶುರುವಾಗಿವೆ. ಯುವಕರ ಬ್ರೈನ್ ವಾಶ್ ಮಾಡುವ ಮೂಲಕ ಜಮ್ಮು-ಕಾಶ್ಮೀರದಲ್ಲಿ ಹಿಂದೂಗಳ ಹತ್ಯೆಗೆ ಕುಮ್ಮಕ್ಕು ನೀಡುತ್ತಿದ್ದ ಮಾಹಿತಿ ಕೂಡ ಇದೀಗ ಬೆಳಕಿಗೆ ಬಂದಿದೆ.
ಕಳೆದ ಎರಡು ವರ್ಷಗಳಿಂದ ಬೆಂಗಳೂರಿನಲ್ಲೇ ವೇಷ ಬದಲಿಸಿ ಜೀವನ ನಡೆಸುತ್ತಿದ್ದ ಉಗ್ರನ ಬಂಧನದ ಬೆನ್ನಲ್ಲೇ ಪೊಲೀಸ್ ಅಧಿಕಾರಿಗಳು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ. ಮಸೀದಿಗಳಲ್ಲಿ ಪಾಠ ಪ್ರವಚನ ಮಾಡ್ತಿದ್ದ ಈತ ಆಟೋ ಓಡಿಸುತ್ತ ಜೀವನ ನಡೆಸುತ್ತಿದ್ದ. ಆದರೆ, ಬೆಂಗಳೂರು ಪೊಲೀಸರ ಸಹಾಯದಿಂದ ರಾಷ್ಟ್ರೀಯ ರೈಫಲ್ಸ್ (ಆರ್‌ಆರ್) ಮತ್ತು ಕೇಂದ್ರ ಸಶಸ್ತ್ರ ಮೀಸಲು ಪೊಲೀಸ್ ಪಡೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ಈತನ ಹೆಡೆಮುರಿ ಕಟ್ಟಿದ್ದಾರೆ.
ಯಾರು ಈ ತಾಲೀಬ್ ಹುಸೇನ್?: ಬಂಧಿತ ಭಯೋತ್ಪಾದಕನನ್ನ ತಾಲೀಬ್ ಹುಸೇನ್ ಎಂದು ಗುರುತಿಸಲಾಗಿದೆ. ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಪ್ರಮುಖ ಕಮಾಂಡರ್ಗಳ ಪೈಕಿ ಒಬ್ಬ ಎಂದು ಜಮ್ಮು-ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ತಿಳಿಸಿದ್ದಾರೆ. ಈತ ಮೂಲತಃ ಜಮ್ಮು-ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಗೆ ಸೇರಿದಾತ. 2016ರಲ್ಲಿ ಭಯೋತ್ಪಾದಕ ಸಂಘಟನೆಗೆ ಸೇರಿದ್ದು, ಇಬ್ಬರು ಹೆಂಡತಿ ಮತ್ತು ಐವರು ಮಕ್ಕಳನ್ನ ಹೊಂದಿದ್ದಾನೆ.