ಬೆಂಗಳೂರು:ಉತ್ತರ ಕರ್ನಾಟಕ ಭಾಗದಲ್ಲಿ ಬರ ಪರಿಸ್ಥಿತಿ ತೀವ್ರವಾಗಿದೆ. ಕುಡಿಯಲೂ ನೀರಿಲ್ಲದೆ ಜನ ತೀವ್ರ ಸಂಕಷ್ಟದಲ್ಲಿದ್ದಾರೆ. ಹೀಗಿದ್ರೂ ರಾಜ್ಯದ ಮುಖ್ಯಮಂತ್ರಿಗಳು ಉಡುಪಿ, ಮಡಿಕೇರಿ ರೆಸಾರ್ಟ್ಗಳಲ್ಲಿ ಮೋಜು-ಮಸ್ತಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಾಗೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಸಿಎಂ ರೆಸಾರ್ಟ್ ವಾಸ್ತವ್ಯ ಖಂಡಿಸಿ ಪ್ರತಿಭಟನೆ: ವಿಧಾನಸೌಧದ ಗೇಟ್ಗೆ ಬೀಗ ಹಾಕಲು ಯತ್ನ - undefined
ಸಿಎಂ ಕುಮಾರಸ್ವಾಮಿ ರಾಜ್ಯಕ್ಕೆ ಎದುರಾಗಿರುವ ಕಷ್ಟಗಳಿಗೆ ಸ್ಪಂದಿಸದೆ ರೆಸಾರ್ಟ್ಗಳಿಗೆ ತೆರಳಿ ಮೋಜು ಮಾಡುತ್ತಿದ್ದಾರೆ. ಇಂತವರಿಗೆ ವಿಧಾನಸೌಧವಾದ್ರೂ ಯಾಕೆ ಬೇಕು, ಅದಕ್ಕೆ ಬೀಗ ಹಾಕುತ್ತೇವೆ ಎಂದು ಕರ್ನಾಟಕ ಸಂಘಟನೆಗಳ ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಚಾಲುಕ್ಯ ಸರ್ಕಲ್ನಿಂದ ಪ್ರತಿಭಟನಾ ಮೆರವಣಿಗೆ ಹೊರಟು, ಬೀಗ ಹಾಗೂ ಸರಪಳಿ ತಂದು ವಿಧಾನಸೌಧದ ಗೇಟ್ಗೆ ಬೀಗ ಹಾಕಲು ಯತ್ನಿಸಿದರು. ಆದರೆ ದಾರಿ ಮಧ್ಯದಲ್ಲೇ ಪೊಲೀಸರು ಬ್ಯಾರಿಕೇಡ್ ಹಾಕಿ ಪ್ರತಿಭಟನಾಕಾರರನ್ನು ತಡೆದು ನಾಗೇಶ್ ಸೇರಿದಂತೆ ಕಾರ್ಯಕರ್ತರನ್ನು ಬಂಧನ ಮಾಡಿದರು.
ಇನ್ನು ಇದಕ್ಕೂ ಮೊದಲು ಮಾತನಾಡಿದ ನಾಗೇಶ್, ಚುನಾವಣೆ ಮುಗಿದ ಮೇಲೆ ಸಿಎಂ ರಾಜ್ಯದಲ್ಲಿ ಆಗಬೇಕಾದ ಕೆಲಸ ಮಾಡ್ತಿಲ್ಲ. ಅದು ಬಿಟ್ಟು ರೆಸಾರ್ಟ್ನಲ್ಲಿ ಮೋಜು-ಮಸ್ತಿ ಮಾಡ್ತಿದ್ದಾರೆ. ಉಡುಪಿಯಲ್ಲಿ ರೆಸಾರ್ಟ್ ವಾಸ್ತವ್ಯ ಆಯ್ತು, ಈಗ ಮಡಿಕೇರಿಯಲ್ಲಿ ವಾಸ್ತವ್ಯ ಮಾಡುತ್ತಿದ್ದಾರೆ. ಒಂದೋ ರೆಸಾರ್ಟ್ಗೆ ಹೋಗ್ತಾರೆ, ಇಲ್ಲ ದೇವಸ್ಥಾನಕ್ಕೆ ಹೋಗುತ್ತಾರೆ. ಉತ್ತರ ಕರ್ನಾಟಕದಲ್ಲಿ ಜನರು ನೀರಿಲ್ಲದೇ ಒದ್ದಾಡ್ತಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಮಳೆ ಬಂದ್ರೆ ಜನರ ಜೀವನ ಅಸ್ತವ್ಯಸ್ತ ಆಗುತ್ತೆ. ಜನರ ಕಷ್ಟ ಕೇಳಬೇಕಾದವರು ರೆಸಾರ್ಟ್ಗೆ ಹೋಗಿದ್ದಾರೆ. ಹೀಗಿದ್ದಾಗ ವಿಧಾನಸೌಧ ಯಾಕೆ ಬೇಕು, ವಿಧಾನಸೌಧಕ್ಕೆ ಬೀಗ ಹಾಕೋಕೆ ಬಂದಿದ್ದೀವಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಿಎಂ ಕುಮಾರಸ್ವಾಮಿಗೆ ನೈತಿಕತೆ ಇದ್ದರೆ ರೆಸಾರ್ಟ್ ಬಿಟ್ಟು ವಿಧಾನಸೌಧಕ್ಕೆ ಬರಲಿ ಎಂದು ಆಗ್ರಹಿಸಿದರು.