ಬೆಂಗಳೂರು : ಸಭಾಪತಿ ಪದಚ್ಯುತಿ ವಿಚಾರವಾಗಿ ಚರ್ಚೆಗೆ ನಿಯಮಾವಳಿ ಪ್ರಕಾರ ಕ್ರಮಕೈಗೊಳ್ಳುತ್ತೇನೆ ಎಂದು ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ತಿಳಿಸಿದ್ದಾರೆ.
ನಾನು ನೋಡಿಕೊಂಡೇ ಬಂದಿದ್ದೇನೆ, ಅಜೆಂಡಾದಲ್ಲಿದೆ. ನಿಯಮಾವಳಿಯಲ್ಲಿ ಅವಕಾಶ ಇದೆ, ಹಿಂದೆ ಯಾವ ರೀತಿ ಇತ್ತು, ಆ ಪ್ರಕಾರ ಆಗಲಿದೆ. ನಿಯಮಾವಳಿಯಲ್ಲಿ ಐದನೇ ದಿನ ಬರಲಿದೆ, ಅಜೆಂಡಾದಲ್ಲಿ ಇರಲಿದೆ, ಅದರಂತೆ ನಡೆಯಲಿದೆ, ನಾನು ಎಲ್ಲಾ ಅರಿತಿದ್ದೇನೆ. ಒತ್ತಡ ಹೇರುವುದರಿಂದ ಪ್ರಯೋಜನ ಇಲ್ಲ ಎಂದರು.
ಐದು ದಿನ ಕಾಲಾವಕಾಶ ಇಲ್ಲ, ಇನ್ನು ಮೂರು ದಿನಕ್ಕೆ ಕಲಾಪ ಮುಂದೂಡಿಕೆ ಆಗಲಿದೆ. ಆದಷ್ಟು ಬೇಗ ಚರ್ಚೆಗೆ ಅವಕಾಶ ಕೊಡಿ ಎಂದು ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಮನವಿ ಮಾಡಿದರು. ನಿಮ್ಮ ಅಧಿಕಾರ ಪ್ರಶ್ನಿಸುತ್ತಿಲ್ಲ, ನೀವು ದಿನಾಂಕ ನಿಗದಿಪಡಿಸಿ ಎಂದು ಮನವಿ ಮಾಡಿದರು.
ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಸಭಾಪತಿ ಪರವಾಗಿ ಮಾತನಾಡಿ ಐದು ದಿನ ಮೀರುವ ಮುನ್ನ ದಿನಾಂಕ ನಿಗದಿಪಡಿಸುತ್ತಾರೆ, ತಾಳ್ಮೆ ಇರಲಿ ಎಂದರು. ಈ ವೇಳೆ ನನಗೆ ಕಾನೂನು ಕಲಿಸಲು ಬರಬೇಡಿ ಎಂದು ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಹೇಳಿದರು.
ಓದಿ: ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ ಸೇರಿದಂತೆ ವಿಧಾನಸಭೆಯಲ್ಲಿ ಮೂರು ವಿಧೇಯಕಗಳಿಗೆ ಅಂಗೀಕಾರ
ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ನೀವು ವಿಷಯ ಮಂಡನೆಗೆ ಅವಕಾಶ ನೀಡಿ ಪ್ರಾಮಾಣಿಕತೆ ಮೆರೆದಿದ್ದೀರಿ. ಈಗ ಅದರ ವಿಚಾರವಾಗಿ ಗದ್ದಲ ಬೇಡ. ಮಂಜುನಾಥ್ ಅವರು ದಿನಾಂಕ ನಿಗದಿ ಪಡಿಸಲು ಕೋರಿದ್ದಾರೆ.
ಕಾನೂನಿನಲ್ಲಿ ಇರುವ ಪ್ರಕಾರ ಮಂಡನೆ ಆದ ದಿನವೇ ದಿನಾಂಕ ಮಾಡಬೇಕಿದೆ. ಎಲ್ಲವೂ ಕಾನೂನು ರೀತಿಯಲ್ಲೇ ಹೋಗಲಾಗದು. ಇಂದು ನೀವು ಪ್ರಕಟಿಸಿದ್ದರಿಂದ ಐದನೇ ದಿನ ಫೆ.6ಕ್ಕೆ ಬರಲಿದೆ. ಆದರೆ, ಅಂದು ಕಲಾಪ ಮುಗಿದು ಹೋಗಲಿದೆ. ಈ ವಿಚಾರ ಗೊಂದಲ ಮೂಡಿಸದೆ ಕಲಾಪ ಸುಗಮಗೊಳಿಸಿ ಎಂದು ಮನವಿ ಮಾಡಿದರು.
ನಾನು ಮೊದಲೇ ಹೇಳಿದಂತೆ ನನಗೆ ಸಮಯ ನಿಗದಿಪಡಿಸುವಂತಿಲ್ಲ. ನಾನು ಐದು ದಿನದ ನಂತರವೂ ಚರ್ಚೆಗೆ ತೆಗೆದುಕೊಳ್ಳದಿದ್ದರೆ, ಆಗ ಪ್ರಶ್ನೆ ಮಾಡಿ ಎಂದರು. ಕನಿಷ್ಠ ಎರಡು ಮೂರು ದಿನ ಸಹಿಸಿಕೊಳ್ಳಲು ಸಾಧ್ಯವಾಗದಿದ್ದರೆ ಹೇಗೆ?.
ಐದು ದಿನದೊಳಗೆ ನಿರ್ಧಾರ ಕೈಗೊಳ್ಳಬೇಕಾಗಿರುವುದು ನಾನು. ನೀವು ಕೇಳುವಂತಿಲ್ಲ ಎಂದರು. ಈ ವಿಚಾರವಾಗಿ ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರ ನಡುವೆ ಕೆಲಕಾಲ ಗದ್ದಲ ನಡೆಯಿತು. ಸಭಾಪತಿಗಳು ಗಮನ ಸೆಳೆಯುವ ಸೂಚನೆ ಅಡಿ ಚರ್ಚೆ ಮುಂದುವರಿಸಲು ಸೂಚಿಸಿದರು.
ಸ್ವಾರಸ್ಯಕರ ಉತ್ತರ ಕೊಟ್ಟ ಹೆಚ್.ವಿಶ್ವನಾಥ್ :ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು ಪೀಠದಲ್ಲಿ ಇಲ್ಲದ ಸಂದರ್ಭ ಹೆಚ್.ವಿಶ್ವನಾಥ್ ಪೀಠದಲ್ಲಿದ್ದಾಗ ವಿಚಾರ ಪ್ರಸ್ತಾಪಕ್ಕೆ ಬಂತು.
ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ವಿಚಾರ ಮಂಡಿಸಿದರು. ಯಾವಾಗ ಚರ್ಚೆಗೆ ಬರಲಿದೆ ಎಂಬ ದಿನಾಂಕ ಕೇಳಿದಾಗ ಸ್ವಾರಸ್ಯಕರ ಉತ್ತರ ಕೊಟ್ಟ ವಿಶ್ವನಾಥ್, ಈ ಪೀಟ ಏಳುವ ಮುನ್ನ ಆಗಲಿದೆ ಎಂದರು.