ಬೆಂಗಳೂರು:ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶ ಬಹುತೇಕ ಹೊರಬಿದ್ದಿದೆ. ಅತಂತ್ರ ಸರ್ಕಾರ ರಚನೆಯಾಗಲಿದೆ ಎಂದೇ ಭಾವಿಸಲಾಗಿದ್ದ ಫಲಿತಾಂಶ ಸುಳ್ಳಾಗಿದೆ. ಕಾಂಗ್ರೆಸ್ ನಿಚ್ಚಳ ಬಹುಮತ ಸಾಧಿಸಿದೆ. ಕೈ ಪಕ್ಷ 122 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಸರ್ಕಾರ ರಚನೆಗೆ ಬೇಕಾಗಿರುವುದು 113 ಸ್ಥಾನಗಳಷ್ಟೇ. ಮತ್ತೊಮ್ಮೆ ಸ್ಪಷ್ಟ ಬಹುಮತದ ನಿರೀಕ್ಷೆಯಲ್ಲಿದ್ದ ಆಡಳಿತಾರೂಢ ಬಿಜೆಪಿ 68 ಕ್ಷೇತ್ರಗಳಲ್ಲಿ ಮಾತ್ರ ಮುಂದಿದೆ.
ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದ ಚುನಾವಣೆಯಲ್ಲಿ ಮತದಾರ ತನ್ನ ಹಳೆಯ ಸಂಪ್ರದಾಯವನ್ನೇ ಮುಂದುವರಿಸಿಕೊಂಡು ಹೋಗುವ ಹಾದಿಯಲ್ಲಿದ್ದಾನೆ. 1983 ರಿಂದ ಈವರೆಗೂ ಯಾವುದೇ ಸರ್ಕಾರ ಸತತ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಿಲ್ಲ. ಹೀಗಾಗಿ ಈಗಿರುವ ಬಿಜೆಪಿ ಸರ್ಕಾರಕ್ಕೆ ಮತದಾರ ಶಾಕ್ ನೀಡಿದ್ದಾನೆ.
ಅತಂತ್ರವಲ್ಲ ನಿಚ್ಚಳ:ಮತದಾನೋತ್ತರ ಸಮೀಕ್ಷೆಗಳಲ್ಲಿ ರಾಜ್ಯ ಮತ್ತೊಮ್ಮೆ ಅತಂತ್ರ ವಿಧಾನಸಭೆಗೆ ಸಾಕ್ಷಿಯಾಗಲಿದೆ ಎಂದೇ ಹೇಳಲಾಗಿತ್ತು. ಆದರೆ, ಮತದಾರ ಅಭಿವೃದ್ಧಿ ಮತ್ತು ರಾಜಕೀಯ ಸಂಘರ್ಷಕ್ಕೆ ತಿಲಾಂಜಲಿ ಇಡುವ ಸಾಧ್ಯತೆ ಇದೆ. ಬಿಜೆಪಿ ಆಡಳಿತ ವಿರೋಧಿ ಅಲೆಗೆ ಒಳಗಾಗಿದ್ದು, ಕಾಂಗ್ರೆಸ್ ಅದರ ಲಾಭವನ್ನು ಗಳಿಸಿಕೊಳ್ಳುವಲ್ಲಿ ಈವರೆಗೂ ಯಶಸ್ವಿಯಾಗಿದೆ.
ಅತಂತ್ರ ಸರ್ಕಾರದಿಂದ ರಾಜ್ಯ ಮತ್ತೊಮ್ಮೆ ಅಡಕತ್ತರಿಗೆ ಬೀಳುವ ಬದಲಾಗಿ ಸ್ಪಷ್ಟ ಸರ್ಕಾರ ರಚನೆಗೆ ಮತದಾರ ಮುನ್ನುಡಿ ಬರೆದಿದ್ದಾನೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಭದ್ರಕೋಟೆ ಕನಕಗಿರಿ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಮಂತ್ರಿ ಆರ್.ಅಶೋಕ್, ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಕಣಕ್ಕಿಳಿದಿರುವ ವಿ. ಸೋಮಣ್ಣ ಸೋಲು ಅನುಭವಿಸಿದ್ದಾರೆ. ಇದಲ್ಲದೇ, ಹಲವು ಹಾಲಿ ಮಂತ್ರಿಗಳು ಮತ್ತು ಪ್ರಬಲ ನಾಯಕರು ಕೂಡ ಹಿನ್ನಡೆ ಸಾಧಿಸಿದ್ದು, ಪಕ್ಷಕ್ಕೆ ದೊಡ್ಡ ಹೊಡೆತ ನೀಡಿದೆ.