ಬೆಂಗಳೂರು:ನಾಲ್ಕನೇ ದಿನದ ಕಲಾಪದಲ್ಲೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಬಿಸಿಬಿಸಿ ಚರ್ಚೆ ಮುಂದುವರಿಯಿತು. ಮಾಜಿ ಸಿಎಂ ಕುಮಾರಸ್ವಾಮಿ ಬಹಳ ದಿನಗಳ ಬಳಿಕ ಕಲಾಪದಲ್ಲಿ ಹಾಜರಾಗಿದ್ದರು.
ಇಂದಿನ ಬಹುತೇಕ ಕಲಾಪ ಸಿಎಂ ಬೊಮ್ಮಾಯಿ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರ ಅನುಪಸ್ಥಿತಿಯಲ್ಲೇ ನಡೆಯಿತು. ಆಸ್ಕರ್ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಸದಸ್ಯರು ಸಂಜೆ ವೇಳೆಗೆ ವಿಧೇಯಕ ಚರ್ಚೆ ಹಿನ್ನೆಲೆಯಲ್ಲಿ ಕಲಾಪದಲ್ಲಿ ಪಾಲ್ಗೊಂಡರು. ಈ ವೇಳೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕವನ್ನು ಗದ್ದಲದ ಮಧ್ಯೆಯೇ ಚರ್ಚೆಗೆ ತೆಗೆದುಕೊಳ್ಳಲಾಯಿತು.
ಸಿದ್ದರಾಮಯ್ಯಗೆ ಗುರಿಯಿಟ್ಟ ಹೆಚ್ಡಿಕೆ:
ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಸಂಬಂಧ ಮಾತನಾಡಿದ ಹೆಚ್ಡಿಕೆ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುವುದಕ್ಕಿಂತ ಹೆಚ್ಚಾಗಿ ಸಿದ್ದರಾಮಯ್ಯನವರನ್ನು ಟಾರ್ಗೆಟ್ ಮಾಡಿದ್ದರು. ಕೆಲವು ಸಂದರ್ಭಗಳಲ್ಲಿ ಬೆಲೆ ಏರಿಕೆ ಅನಿವಾರ್ಯವಾಗುತ್ತದೆ. ಇದನ್ನು ಆದರೆ ಜನಸಾಮಾನ್ಯರು ಗಮನದಲ್ಲಿಟ್ಟುಕೊಳ್ಳಬೇಕು. ಕೆಲವು ಯೋಜನೆಗಳನ್ನು ಮುಂದೂಡಿ ಜನರಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಹಿಂದೆ ಮೈತ್ರಿ ಸರ್ಕಾರದಲ್ಲೂ ಐದು ಕೆಜಿ ಅಕ್ಕಿಗೆ ಹಣ ಇಟ್ಟು ಏಳು ಕೆಜಿ ಮಾಡಿ ಅಂತ ಸಿದ್ದರಾಮಯ್ಯ ಒತ್ತಾಯ ಮಾಡಿದ್ರು. ಸಾಲಮನ್ನಾ ಮಾಡಿ ಅಂತ ಹಿಂದೆ ಬಿದ್ದಿದ್ರು. ಆಗ ನಾನು ಸಮಸ್ಯೆಗೆ ಸಿಲುಕಿದ್ದೆ ಎಂದರು.
ಯಡಿಯೂರಪ್ಪನವರ ಜೊತೆಗೂ ನಾನು ಸರ್ಕಾರ ಮಾಡಿದ್ದೇನೆ. ಅವರಿಗೂ ಬಡವರ ಪರ ಕಾಳಜಿಯಿದೆ. ನೀವು ಬೊಮ್ಮಾಯಿಯವರಿಗೆ ಹೇಳಿ 55 ಲಕ್ಷ ಬಡ ಕುಟುಂಬಗಳಿಗೆ ವಿಶೇಷ ಪ್ಯಾಕೇಜ್ ಕೊಡಿಸಿ ಎಂದು ಮೂಲೆಯಲ್ಲಿ ಕುಳಿತಿದ್ದ ಬಿಎಸ್ವೈಗೆ ಎಚ್ಚರಿಸಿದರು.
ಡಿಸಿ ರೋಹಿಣಿ ವಿರುದ್ಧ ಸಾ.ರಾ.ಮಹೇಶ್ ಆಕ್ರೋಶ:
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಸಾ.ರಾ.ಮಹೇಶ್ ನಡುವಿನ ಗುದ್ದಾಟ ಇಂದು ಕಲಾಪದಲ್ಲಿ ಅನಾವರಣವಾಯ್ತು. ತೈಲ ಬೆಲೆ ಏರಿಕೆ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಜಿಲ್ಲಾಧಿಕಾರಿಗಳು ಪಿಡಿ ಖಾತೆಯಲ್ಲಿನ ಹಣವನ್ನು ಸರಿಯಾಗಿ ಬಳಕೆ ಮಾಡ್ತಿಲ್ಲವೆಂದು ಆರೋಪಿಸ್ತಿದ್ರು. ಈ ವೇಳೆ ಮಧ್ಯಪ್ರವೇಶಿಸಿದ ಕೆ.ಆರ್.ನಗರ ಶಾಸಕ ಸಾ.ರಾ.ಮಹೇಶ್ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಪರೋಕ್ಷವಾಗಿ ಆಕ್ರೋಶ ಹೊರ ಹಾಕಿದ್ರು. ಬ್ಯಾಗ್ ಖರೀದಿಯಲ್ಲಿ 6.5 ಕೋಟಿ ಹಣ ಲೂಟಿ ಮಾಡಿದ್ದಾರೆ ಎಂದು ಹೆಸರು ಹೇಳದೆ ವಾಗ್ದಾಳಿ ನಡೆಸಿದ್ರು.
ಇದಕ್ಕೆ ಪೂರಕವಾಗಿ ಕುಮಾರಸ್ವಾಮಿ ಕೂಡ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ್ರು. ಅಧಿಕಾರಿಗಳು ಪದೇ ಪದೇ ಮಾಧ್ಯಮಗಳ ಮುಂದೆ ಹೇಳಿಕೆ ಕೊಡ್ತಾರೆ. ಕಾನೂನಿನಲ್ಲಿಇದಕ್ಕೆ ಅವಕಾಶ ಇಡೆಯಾ? ಅವರಿಗೆ ಅಧಿಕಾರ ಕೊಟ್ಟಿದ್ದು ಯಾರು ಅಂತ ಪ್ರಶ್ನಿಸಿದ್ರು. ಇದರ ಬಗ್ಗೆ ಉತ್ತರಿಸಿದ ಕಂದಾಯ ಸಚಿವ ಆರ್.ಅಶೋಕ್ ಕೆಲವು ಅಧಿಕಾರಿಗಳು ಓವರ್ ಆ್ಯಕ್ಟಿಂಗ್ ಮಾಡ್ತಾರೆ. ಇದು ನಮ್ಮ ಗಮನಕ್ಕೂ ಬಂದಿದೆ. ಸಿಎಸ್ ಜೊತೆ ಮಾತನಾಡಿ ಕ್ರಮ ತೆಗೆದುಕೊಳ್ತೇವೆಂದು ತಿಳಿಸಿದ್ರು.
ಎರಡು ವಿಧೇಯಕಗಳು ಪಾಸ್:
ಬೆಂಗಳೂರು ನೀರು ಸರಬರಾಜು ಮತ್ತು ಗ್ರಾಮಾಂತರ ಚರಂಡಿ ವ್ಯವಸ್ಥೆ (ತಿದ್ದುಪಡಿ) ವಿಧೇಯಕ ಹಾಗೂ 2021ನೇ ಸಾಲಿನ ಕರ್ನಾಟಕ ಕೃಷಿ ಸಂಬಂಧಿ ಕೀಟಗಳು ಮತ್ತು ರೋಗಗಳ ತಿದ್ದುಪಡಿ ವಿಧೇಯಕಗಳು ಅಂಗೀಕೃತಗೊಂಡವು. ಈ ವಿಧೇಯದಂತೆ ಬೆಂಗಳೂರಿನಲ್ಲಿ 30x40 ಸೈಟಿನಲ್ಲಿ ಮನೆ ಕಟ್ಟೋರಿಗೆ ಇನ್ಮುಂದೆ ಹೊಸ ಷರತ್ತು ಹಾಗೂ ಮಳೆ ನೀರು ಕೊಯ್ಲು ಕಡ್ಡಾಯಗೊಳಿಸಲಾಗಿದೆ. ಇದಕ್ಕಿಂತ ಚದರಡಿ ಮೇಲ್ಪಟ್ಟ ನಿವೇಶನದಲ್ಲಿರುವ ಕಟ್ಟಡಗಳಿಗೂ ಮಳೆ ನೀರು ಕೊಯ್ಲು ಕಡ್ಡಾಯ ಮಾಡಲಾಗಿದೆ.