ಕರ್ನಾಟಕ

karnataka

ETV Bharat / state

ಸಿದ್ದು, ಡಿಕೆಶಿ ಕಟ್ಟಿ ಹಾಕುವ ಕೇಸರಿ ಪಡೆ ತಂತ್ರ ವಿಫಲ: ಪದ್ಮನಾಭನಗರ ಗೆದ್ದು ಅಶೋಕ್ ನಿಟ್ಟುಸಿರು! - ಸೋಮಣ್ಣಗೆ ಹಿನ್ನಡೆ

ಕಾಂಗ್ರೆಸ್​ನ ಘಟಾನುಘಟಿ ನಾಯಕರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಬಿಜೆಪಿಯ ವಿ.ಸೋಮಣ್ಣ, ಆರ್​.ಅಶೋಕ್ ಸ್ಪರ್ಧೆಯ ವರುಣ ಮತ್ತು ಕನಕಪುರ ಕ್ಷೇತ್ರಗಳ ಅಂತಿಮ ಫಲಿತಾಂಶ ಹೀಗಿದೆ..

Etv Bharat
Etv Bharat

By

Published : May 13, 2023, 9:16 AM IST

Updated : May 13, 2023, 6:36 PM IST

ಬೆಂಗಳೂರು:ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ದೇಶದ ಗಮನ ಸೆಳೆದಿದ್ದ ಮೈಸೂರು ಜಿಲ್ಲೆಯ ವರುಣ ಮತ್ತು ರಾಮನಗರ ಜಿಲ್ಲೆಯ ಕನಕಪುರ ಕ್ಷೇತ್ರಗಳ ಫಲಿತಾಂಶ ಹೊರಬಿದ್ದಿದೆ. ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್​ನ ಪ್ರಬಲ ನಾಯಕರಾದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆಲುವು ದಾಖಲಿಸಿದ್ದಾರೆ.

ರಾಜ್ಯ ಕಾಂಗ್ರೆಸ್ ಪಾಲಿಗೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಪ್ರಮುಖ ಆಧಾರ ಸ್ತಂಭಗಳಾಗಿದ್ದು, ಇವರನ್ನು ಕಟ್ಟಿ ಹಾಕುವ ನಿಟ್ಟಿನಲ್ಲಿ ಬಿಜೆಪಿ ಪ್ರಬಲ ನಾಯಕರಾದ ಆರ್​.ಅಶೋಕ್ ಮತ್ತು ವಿ.ಸೋಮಣ್ಣ ಅವರನ್ನು ಕಣಕ್ಕಿಳಿಸಿತ್ತು. ಗೋವಿಂದರಾಜ ನಗರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಸೋಮಣ್ಣ ಸಿದ್ದರಾಮಯ್ಯ ವಿರುದ್ಧ ವರುಣ ಕ್ಷೇತ್ರದ ಜೊತೆಗೆ ಚಾಮರಾಜನಗರದಲ್ಲೂ ಸ್ಪರ್ಧೆ ಮಾಡಿದ್ದಾರೆ. ಆದರೆ, ಎರಡೂ ಕ್ಷೇತ್ರಗಳಲ್ಲಿ ಸೋಮಣ್ಣ ಸೋಲುಂಡರು.

ಚಾಮರಾಜನಗರ ಕ್ಷೇತ್ರದಲ್ಲಿ ಗೆದ್ದಿರುವ ಕಾಂಗ್ರೆಸ್​ನ ಪುಟ್ಟರಂಗಶೆಟ್ಟಿ 83,858 ಮತಗಳನ್ನು ಪಡೆದಿದ್ದಾರೆ. ಬಿಜೆಪಿಯ ಸೋಮಣ್ಣ 76,325 ಮತ ಪಡೆದು ಎರಡನೇ ಸ್ಥಾನ ಗಳಿಸಿದ್ದಾರೆ. ಅದೇ ರೀತಿಯಾಗಿ ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ 1,19,816 ಮತಗಳನ್ನು ಪಡೆದಿದ್ದಾರೆ. ಸೋಮಣ್ಣ 73,653 ಮತಗಳ ಪಡೆದು, 46 ಸಾವಿರ ಮತಗಳ ಅಂತರದಿಂದ ಸೋತರು.

ಅಶೋಕ್​ಗೆ ಒಂದೆಡೆ ಸೋಲು, ಮತ್ತೊಂದೆಡೆ ಜಯ:ಕನಕಪುರ ಮತ್ತು ಪದ್ಮನಾಭನಗರ ಕ್ಷೇತ್ರದಲ್ಲಿ ಎರಡೂ ಕಡೆ ಸ್ಪರ್ಧಿಸಿದ್ದ ಬಿಜೆಪಿಯ ಆರ್​.ಅಶೋಕ್ ಒಂದೆಡೆ ಸೋಲು ಕಂಡಿದ್ದರೆ, ಮತ್ತೊಂದೆಡೆ ಜಯ ದಾಖಲಿಸಿ ನಿಟ್ಟುಸಿರು ಬಿಟ್ಟಿದ್ದಾರೆ. ಕನಕಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಅಶೋಕ್ ಹೀನಾಯವಾಗಿ ಸೋತಿದ್ದಾರೆ. ಡಿಕೆಶಿ 1.20 ಲಕ್ಷ ಮತಗಳ ಅಂತರದ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಇವರು ಒಟ್ಟಾರೆ 1,43,023 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್​ನ ಬಿ.ನಾಗರಾಜು 20,631 ಪಡೆದು ಎರಡನೇ ಪಡೆದರೆ, ಅಶೋಕ್ 19,753 ಮತಗಳ ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

ಬೆಂಗಳೂರಿನ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಅಶೋಕ್ ಸುಮಾರು 45 ಸಾವಿರ ಮತಗಳ ಅಂತರದಿಂದ​ ಗೆಲುವು ಕಂಡಿದ್ದಾರೆ. ಇಲ್ಲಿ ಅಶೋಕ್ ಒಟ್ಟು 98,750 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್​ನ ರಾಘುನಾಥ್ ನಾಯ್ದು 43,575ಮತಗಳಿಂದ ಎರಡನೇ ಸ್ಥಾನದಲ್ಲಿದ್ದಾರೆ. ಈ ಗೆಲುವಿನ ಮೂಲಕ ಅಶೋಕ್ ಪದ್ಮನಾಭನಗರದಲ್ಲಿ ಸತತ ನಾಲ್ಕನೇ ಜಯ ದಾಖಲಿಸಿದ್ದಾರೆ.

ಇದನ್ನೂ ಓದಿ:ರಾಜ್ಯ ವಿಧಾನಸಭೆಗೆ ಅತಿ ಹೆಚ್ಚು ಬಾರಿ ಆಯ್ಕೆಯಾದ ನಾಯಕರು: ಏನಾಗಲಿದೆ ಇವರ ಭವಿಷ್ಯ?

Last Updated : May 13, 2023, 6:36 PM IST

ABOUT THE AUTHOR

...view details