ಬೆಂಗಳೂರು:ಕರ್ನಾಟಕ ವಿಧಾನಸಭಾ ಚುನಾವಣೆಯು ದೇಶದ ಗಮನ ಸೆಳೆದಿದೆ. ಬುಧವಾರ ಮತದಾನ ಪ್ರಕ್ರಿಯೆ ಮುಕ್ತಾಯವಾಗುತ್ತಿದ್ದಂತೆ ಫಲಿತಾಂಶದ ಬಗ್ಗೆ ವಿವಿಧ ಎಕ್ಸಿಟ್ ಪೋಲ್ಗಳು ಪ್ರಕಟವಾಗಿವೆ. ಈ ಬಗ್ಗೆ ಪರ ಮತ್ತು ವಿರೋಧ ಚರ್ಚೆ ಆಗುತ್ತಿದೆ. ಇದರ ಜೊತೆಗೆ ಕಳೆದ 2018ರ ಚುನಾವಣಾ ಸಂದರ್ಭದಲ್ಲಿ ಚುನಾವಣೋತ್ತರ ಸಮೀಕ್ಷೆಗಳ ಭವಿಷ್ಯ ಏನಾಗಿತ್ತು ಎಂಬ ಚರ್ಚೆಯೂ ಮುನ್ನಲೆಗೆ ಬಂದಿದೆ.
224 ಸದಸ್ಯ ಬಲದ ರಾಜ್ಯ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ ಕನಿಷ್ಠ 113 ಸ್ಥಾನಗಳ ಅಗತ್ಯವಿದೆ. ರಾಜ್ಯ ಮತ್ತು ರಾಷ್ಟ್ರೀಯ ಸುದ್ದಿ ವಾಹಿನಿಗಳು ಹಾಗೂ ಸಂಸ್ಥೆಗಳ ಸಮೀಕ್ಷೆಗಳು ಸೇರಿ ಒಟ್ಟು 11 ಎಕ್ಸಿಟ್ ಪೋಲ್ಗಳು ಹೊರಬಿದ್ದಿವೆ. ಇದರಲ್ಲಿ ಬಹುತೇಕ ಸಮೀಕ್ಷೆಗಳು ಅತಂತ್ರ ಫಲಿತಾಂಶದ ಸೂಚನೆ ಕೊಟ್ಟಿವೆ. ಆದರೆ, ಇದರ ಜೊತೆಗೆ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಲಿದೆ ಎಂದು ಹೇಳಿದ್ದು, ಆಡಳಿತಾರೂಢ ಬಿಜೆಪಿ ಎರಡನೇ ಸ್ಥಾನಕ್ಕೆ ಕುಸಿಯಲಿದೆ. ಜೆಡಿಎಸ್ ಮೂರನೇ ಸ್ಥಾನವನ್ನು ಕಾಯ್ದುಕೊಳ್ಳಲಿದೆ. ಈ ಮೂಲಕ ಜೆಡಿಎಸ್ ಕಿಂಗ್ ಮೇಕರ್ ಆಗುವ ಸಾಧ್ಯತೆಯೂ ಇದೆ ಎಂದು ಭವಿಷ್ಯ ಹೇಳಲಾಗಿದೆ.
11 ಚುನಾವಣೋತ್ತರ ಸಮೀಕ್ಷೆಗಳಲ್ಲಿ ಎರಡು ಎಕ್ಸಿಟ್ ಪೋಲ್ಗಳು ಕಾಂಗ್ರೆಸ್ಗೆ ಸ್ಪಷ್ಟ ಬಹುಮತವನ್ನು ನೀಡಿವೆ. ನ್ಯೂಸ್ 24 - ಟುಡೇಸ್ ಚಾಣಕ್ಯ ಮತ್ತು ಇಂಡಿಯಾ ಟುಡೇ ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆಗಳು ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಲಿದೆ ಎಂದು ಭವಿಷ್ಯ ನುಡಿದಿವೆ. ಇದೇ ವೇಳೆ ಮತ್ತೆರಡು ಸಮೀಕ್ಷೆಗಳಾದ ನ್ಯೂಸ್ ನೇಷನ್- ಸಿಜಿಎಸ್ ಮತ್ತು ಸುವರ್ಣ ನ್ಯೂಸ್ ಜನ್ ಕಿ ಬಾತ್ ಎಕ್ಸಿಟ್ ಪೋಲ್ಗಳು ಬಿಜೆಪಿ ಅಧಿಕಾರದಲ್ಲಿ ಮುಂದುವರೆಯುತ್ತದೆ ಎಂದು ಹೇಳಿವೆ.
2018ರ ಸಮೀಕ್ಷೆಗಳು ಏನಾಗಿದ್ದವು?: 2013ರಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು. ಐದು ವರ್ಷಗಳ ಕಾಲ ಸಂಪೂರ್ಣವಾಗಿ ಆಡಳಿತವನ್ನೂ ನಡೆಸಿತ್ತು. 2018ರಲ್ಲಿ ಚುನಾವಣೆ ನಡೆದಾಗ ಅತಂತ್ರ ಫಲಿಂತಾಶದ ಭವಿಷ್ಯವನ್ನು ಎಕ್ಸಿಟ್ ಪೋಲ್ಗಳು ನುಡಿದಿದ್ದವು.