ಬೆಂಗಳೂರು:ವಿಧಾನಸಭೆ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಅಭ್ಯರ್ಥಿಗಳ ಘೋಷಣೆ ಮಾಡಿದ ಬಳಿಕ ಟಿಕೆಟ್ ವಂಚಿತ ಪ್ರಬಲ ಆಕಾಂಕ್ಷಿಗಳು ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದಾರೆ. ಅವರು ಚುನಾವಣೆಯಲ್ಲಿ ತಮ್ಮದೇ ಪಕ್ಷಗಳಿಗೆ ಮಗ್ಗುಲಮುಳ್ಳಾಗಿ ಕಾಡುವ ಆತಂಕವಿದೆ.
ಕಾಂಗ್ರೆಸ್ನಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳು ಅಂದರೆ 24 ಮಂದಿ ಬಂಡಾಯ ಎದ್ದಿದ್ದಾರೆ. ಇವರೆಲ್ಲರನ್ನೂ ಪ್ರಾಥಮಿಕ ಸದಸ್ಯತ್ವದಿಂದಲೇ 6 ವರ್ಷಗಳ ಕಾಲ ವಜಾ ಮಾಡಲಾಗಿದೆ. ಬಿಜೆಪಿಯಲ್ಲಿ 13ಕ್ಕೂ ಅಧಿಕ ಮಂದಿ ಬಂಡಾಯ ಎದ್ದಿದ್ದಾರೆ.
ಶಿಡ್ಲಘಟ್ಟ: ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಕ್ಷೇತ್ರದಲ್ಲಿ ವಿ.ಮುನಿಯಪ್ಪ ಹಿನ್ನಡೆ ಸಾಧಿಸಿದ್ದಾರೆ. ಮುನಿಯಪ್ಪ ಅವರಿಗೆ ಕಾಂಗ್ರೆಸ್ ಟಿಕೆಟ್ ನಿರಾಕರಿಸಿತ್ತು. ಕೊನೆಯಲ್ಲಿ ರಾಜೀವ್ ಗೌಡ ಅವರಿಗೆ ಪಕ್ಷ ಮಣೆ ಹಾಕಿತ್ತು. ಈ ಮೂಲಕ ಕಾಂಗ್ರೆಸ್ನಿಂದ ಹೊಸ ಮುಖವಾದ ರಾಜೀವ್ ಗೌಡ ಕಣದಲ್ಲಿದ್ದರು. ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದ ಆಂಜನಪ್ಪ ಬಂಡಾಯ ಎದ್ದು ಚುನಾವಣೆಗೆ ಸ್ಪರ್ಧೆ ಮಾಡಿದ್ದರು.
ಮಾಯಕೊಂಡ:ದಾವಣಗೆರೆಯ ಮಾಯಕೊಂಡ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿ ಶಿವಪ್ರಕಾಶ್ ಹಿನ್ನಡೆ ಅನುಭವಿಸುತ್ತಿದ್ದಾರೆ. ಮಾಯಕೊಂಡ ಕ್ಷೇತ್ರದಲ್ಲಿ ಶಾಸಕ ಪ್ರೊ.ಲಿಂಗಣ್ಣ ಬದಲಿಗೆ ಬಸವರಾಜ್ ನಾಯ್ಕ್ ಅವರನ್ನು ಬಿಜೆಪಿ ಕಣಕ್ಕೆ ಇಳಿಸಿತ್ತು. ಆದರೆ, ಮಾಜಿ ಶಾಸಕರಾಗಿದ್ದ ನಾಯ್ಕ್ ಅವರಿಗೆ ಟಿಕೆಟ್ ನೀಡಿದ್ರೂ ಕೂಡ ಪಕ್ಷದಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು. 10ಕ್ಕೂ ಹಚ್ಚು ಜನ ಟಿಕೆಟ್ ಆಕಾಂಕ್ಷಿಗಳು ಇದ್ದಿದ್ದರಿಂದ ಹೊಸ ಮುಖಕ್ಕೆ ಟಿಕೆಟ್ ನೀಡಬೇಕಾಗಿತ್ತು ಎಂದು ಪಟ್ಟು ಹಿಡಿದಿದ್ದರು. ಹೀಗಾಗಿ ಬಂಡಾಯ ಅಭ್ಯರ್ಥಿಯಾಗಿ ಶಿವಪ್ರಕಾಶ ನಾಮಪತ್ರ ಸಲ್ಲಿಸಿದ್ದರು.
ಹೊಸದುರ್ಗ:ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಕ್ಷೇತ್ರದಲ್ಲಿ ಗೂಳಿಹಟ್ಟಿ ಶೇಖರ್ ಹಿನ್ನಡೆಯಲ್ಲಿದ್ದಾರೆ. ಹೊಸದುರ್ಗ ಕ್ಷೇತ್ರದಲ್ಲಿ ಗೂಳಿಹಟ್ಟಿ ಶೇಖರ್ ಬದಲು ಎಸ್.ಲಿಂಗಮೂರ್ತಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಸರ್ಕಾರ ಮತ್ತು ಪಕ್ಷದ ಮುಖಂಡರ ಪರ ಬಹಿರಂಗವಾಗಿ ಟೀಕಿಸಿದ ಆರೋಪ ಹೊತ್ತಿದ್ದ ಗೂಳಿಹಟ್ಟಿ ಶೇಖರ್ಗೆ ಪಕ್ಷ ಟಿಕೆಟ್ ನಿರಾಕರಿಸಿತ್ತು. ರಾಜ್ಯದಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ ರಚನೆಗೆ ಕಾರಣರಾದ ಶಾಸಕರಲ್ಲಿ ಗೂಳಿಹಟ್ಟಿ ಶೇಖರ್ ಕೂಡಾ ಒಬ್ಬರಾಗಿದ್ದರು. ಆದರೆ, ಟಿಕೆಟ್ ಸಿಗದ ಕಾರಣ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಪಕ್ಷೇತರರಾಗಿ ಕಣಕ್ಕೆ ಇಳಿದಿದ್ದರು.
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಕ್ಷೇತ್ರದಲ್ಲಿ ಅರುಣ್ ಪುತ್ತಿಲ ಅವರು ಹಿನ್ನಡೆ ಅನುಭವಿಸುತ್ತಿದ್ದು, ಇಲ್ಲಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ. ಸಂಜೀವ್ ಮಠಂದೂರು ಬದಲಿಗೆ ಬಿಜೆಪಿ ಆಶಾ ತಿಮ್ಮಪ್ಪ ಅವರಿಗೆ ಟಿಕೆಟ್ ನೀಡಿತ್ತು. ಹಾಲಿ ಶಾಸಕ ಸಂಜೀವ್ ಮಠಂದೂರು ಮತ್ತೊಮ್ಮೆ ಸ್ಪರ್ಧೆಗೆ ಇಚ್ಛಿಸಿದ್ದರೂ ಪಕ್ಷದ ಟಿಕೆಟ್ ನೀಡಲು ಮನಸ್ಸು ಮಾಡಿರಲಿಲ್ಲ. ಇದೇ ವೇಳೆ, ಹಿಂದೂ ಪರ ಸಂಘಟನೆಯ ಮುಖಂಡ ಅರುಣ್ ಪುತ್ತಿಲ ಅವರಿಗೆ ಬಿಜೆಪಿ ಟಿಕೆಟ್ ನೀಡಬೇಕು ಎಂಬ ಒತ್ತಡ ಎದುರಾಗಿತ್ತು. ಆದರೂ, ಟಿಕೆಟ್ ಸಿಗದ ಕಾರಣ ಅರುಣ್ ಪುತ್ತಿಲ ಪಕ್ಷೇತರರಾಗಿ ಸ್ಪರ್ಧಿಸಿ ಬಿಜೆಪಿಗೆ ಸವಾಲೊಡ್ಡಿದ್ದರು. ಈಗ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.