ಬೆಂಗಳೂರು:ಪ್ರಸ್ತುತ ರಾಜ್ಯ ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಅವರ ನಂತರ ರಾಜಕೀಯವಾಗಿ ಅಷ್ಟೇ ಸ್ಥಾನಮಾನ ಪಡೆದ ನಾಯಕ ಎಂದರೆ ಅದು ಜಗದೀಶ್ ಶೆಟ್ಟರ್. ಸತತವಾಗಿ ಆರು ಬಾರಿ ಗೆದ್ದು ಮೂರು ದಶಕದ ಕಾಲ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಕಮಲ ಅರಳಿಸಿದ್ದ ಪಕ್ಷದ ಹಿರಿಯ ರಾಜಕಾರಣಿ ಇದೀಗ ಪಕ್ಷ ತೊರೆದಿದ್ದಾರೆ. ಪಕ್ಷ ನಿಷ್ಠೆಗೆ ಹೆಸರಾಗಿದ್ದ ಶೆಟ್ಟರ್, ಹೈಕಮಾಂಡ್ ರಾಜಕೀಯ ದಾಳದ ವಿರುದ್ಧ ಬಂಡೆದ್ದು ಪಕ್ಷದಿಂದ ಹೊರನಡೆದು ಕಾಂಗ್ರೆಸ್ ಸೇರಿದ್ದಾರೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಖಾಡಕ್ಕಿಳಿಯಲಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಶೆಟ್ಟರ್ ನಡೆದು ಬಂದ ಹಾದಿ ಕುರಿತ ವಿಶೇಷ ವರದಿ ಇಲ್ಲಿದೆ..
ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಅಲಂಕರಿಸಿದ ಬಹುತೇಕ ಎಲ್ಲ ಸ್ಥಾನಮಾನವನ್ನೂ ಪಡೆದ ಮತ್ತೊಬ್ಬ ರಾಜಕಾರಣಿ ಜಗದೀಶ್ ಶೆಟ್ಟರ್. ಉತ್ತರ ಕರ್ನಾಟಕದ ಪ್ರಬಲ ಲಿಂಗಾಯತ ನಾಯಕರಾಗಿರುವ ಶೆಟ್ಟರ್ ಅವರು ಶಾಸಕ, ಪ್ರತಿಪಕ್ಷ ನಾಯಕ, ಸಚಿವ, ಸ್ಪೀಕರ್, ಮುಖ್ಯಮಂತ್ರಿ, ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಹೀಗೆ ಪಕ್ಷ ಮತ್ತು ಸರ್ಕಾರದ ಎಲ್ಲ ಭಾಗದಲ್ಲಿಯೂ ಜವಾಬ್ದಾರಿ ನಿರ್ವಹಣೆ ಮಾಡಿದ್ದಾರೆ. ಯಡಿಯೂರಪ್ಪ ಸೋತಾಗಲೂ ಶೆಟ್ಟರ್ ಗೆದ್ದಿದ್ದರು, ಅಷ್ಟೇ ಅಲ್ಲದೆ ಯಡಿಯೂರಪ್ಪ ಕೆಜೆಪಿ ಕಟ್ಟಿದಾಗ ಆಡಳಿತಾರೂಢ ಬಿಜೆಪಿ ಸರ್ಕಾರದಲ್ಲಿನ ಡಿಸಿಎಂ ಈಶ್ವರಪ್ಪ ಸೇರಿದಂತೆ ಸಂಪುಟದ ಸಾಕಷ್ಟು ಸಚಿವರು ಸೋತರೂ ಶೆಟ್ಟರ್ ಮಾತ್ರ ಗೆದ್ದು ಬೀಗಿದ್ದರು. ಸತತವಾಗಿ ಮೂರು ದಶಕಗಳ ಕಾಲ ಕ್ಷೇತ್ರದಲ್ಲಿ ಅಧಿಪತ್ಯ ಸಾಧಿಸಿ ಆರು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಏಳನೇ ಬಾರಿ ಸ್ಪರ್ಧೆಗೂ ಸಿದ್ಧರಾಗಿದ್ದರು. ಆದರೆ ಬಿಜೆಪಿ ಟಿಕೆಟ್ ಅಂತಿಮಗೊಳ್ಳದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡು ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.
ಪಕ್ಷದಲ್ಲಿ ಸ್ಥಾನಮಾನ:ಎಬಿವಿಪಿಯಲ್ಲಿ ಗುರುತಿಸಿಕೊಳ್ಳುವ ಮೂಲಕ ವಿದ್ಯಾರ್ಥಿ ಜೀವನದಲ್ಲೇ ನಾಯಕತ್ವದ ಗುಣ ಬೆಳೆಸಿಕೊಂಡ ಜಗದೀಶ್ ಶೆಟ್ಟರ್ ನಂತರ ಆರ್.ಎಸ್.ಎಸ್ ಸೇರಿದರು. ಸಂಘ ಪರಿವಾರದ ಮೂಲಕ ಬಿಜೆಪಿಗೆ ಪ್ರವೇಶ ಮಾಡಿದರು. 1990 ರಲ್ಲಿ ಹುಬ್ಬಳ್ಳಿ ಗ್ರಾಮೀಣ ಭಾಗದ ಅಧ್ಯಕ್ಷರಾಗಿ ರಾಜ್ಯ ಘಟಕದ ಜೊತೆ ನಂಟು ಬೆಳೆಸಿಕೊಂಡು, 1996 ರಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾದ ಶೆಟ್ಟರ್ 2005 ರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡಿದರು. ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ, ರಾಜ್ಯ ಬಿಜೆಪಿ ಕೋರ್ ಕಮಿಟಿ ಸದಸ್ಯ, ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿಯೂ ಶೆಟ್ಟರ್ ಜವಾಬ್ದಾರಿ ನಿರ್ವಹಿಸಿದ್ದಾರೆ.
ಎಲ್.ಎಲ್. ಬಿ ಪದವಿಯನ್ನು ಹುಬ್ಬಳ್ಳಿಯ ಜೆಎಸ್ಎಸ್ ಕಾನೂನು ಕಾಲೇಜಿನಿಂದ ಪಡೆದ ಜಗದೀಶ್ ಶೆಟ್ಟರ್ 1984 ರಲ್ಲಿ ಶಿಲ್ಪಾ ಅವರೊಂದಿಗೆ ವಿವಾಹ ಆದರು. ನಂತರ ರಾಜಕೀಯ ಕ್ಷೇತ್ರ ಪ್ರವೇಶಿಸಿ 1990ರಲ್ಲಿ ಹುಬ್ಬಳ್ಳಿ ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷರಾಗಿ ನೇಮಕಗೊಂಡರು. 1994 ರಲ್ಲಿ ಮೊದಲ ಬಾರಿ ಹುಬ್ಬಳ್ಳಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಇಳಿದು, ಮೊದಲ ಪ್ರಯತ್ನದಲ್ಲೇ ಗೆದ್ದು ಬೀಗಿದರು. ಅಲ್ಲಿಂದ ಶೆಟ್ಟರ್ ಚುನಾವಣಾ ರಾಜಕೀಯದಲ್ಲಿ ಹಿನ್ನಡೆ ಕಾಣದೆ ಸೋಲಿಲ್ಲದ ಸರದಾರನಾಗಿ 1999, 2004, 2008, 2013 ಮತ್ತು 2018 ರಲ್ಲಿ ಗೆಲ್ಲುತ್ತಲೇ ಬಂದಿದ್ದಾರೆ. 1994 ರಿಂದ 2004 ರವರೆಗೂ ಮೂರು ಚುನಾವಣೆಯಲ್ಲಿ ಹುಬ್ಬಳ್ಳಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದ ಶೆಟ್ಟರ್, ಕ್ಷೇತ್ರ ಮರು ವಿಂಗಡಣೆ ನಂತರ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ 2008, 2013, 2018 ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.
ಸರ್ಕಾರದ ಭಾಗವಾಗಿ ಕೆಲಸ:1999 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯ ಬಿಜೆಪಿಯ ಘಟಾನುಘಟಿ ನಾಯಕರೇ ಸೋತರು, ಪ್ರತಿಪಕ್ಷ ನಾಯಕರಾಗಿದ್ದ ಯಡಿಯೂರಪ್ಪ ಕೂಡ ಶಿಕಾರಿಪುರ ಕ್ಷೇತ್ರದಲ್ಲಿ ಮೊದಲ ಸೋಲಿನ ರುಚಿ ನೋಡಿದರು. ಮತ್ತೊಬ್ಬ ನಾಯಕ ಈಶ್ವರಪ್ಪ ಕೂಡ ಸೋತಿದ್ದರು. ಆದರೆ ಜಗದೀಶ್ ಶೆಟ್ಟರ್ ಗೆದ್ದು ಛಾಪು ಮೂಡಿಸಿದರು. ಚುನಾವಣೆಯಲ್ಲಿ ಎರಡನೇ ಅತೀ ಹೆಚ್ಚು ಸ್ಥಾನ ಪಡೆದ ಬಿಜೆಪಿಗೆ ಮತ್ತೊಮ್ಮೆ ಪ್ರತಿಪಕ್ಷ ಸ್ಥಾನ ಲಭಿಸಿತ್ತು. ಆಗ ಜಗದೀಶ್ ಶೆಟ್ಟರ್ ಮೊದಲ ಬಾರಿ 1999 ರಿಂದ 2004 ರವರೆಗೆ ಪ್ರತಿಪಕ್ಷ ನಾಯಕರಾದರು. 2006 ರಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ಸರ್ಕಾರ ರಚನೆಯಾದ ವೇಳೆ ಮೊದಲ ಬಾರಿಗೆ ಸಂಪುಟ ಪ್ರವೇಶಿಸಿ ಕಂದಾಯ ಇಲಾಖೆಯ ಜವಾಬ್ದಾರಿ ನಿರ್ವಹಿಸಿದರು.