ಕರ್ನಾಟಕ

karnataka

ETV Bharat / state

ಮಧ್ಯರಾತ್ರಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್​: ಶಿಡ್ಲಘಟ್ಟ ಹಾಲಿ ಶಾಸಕರಿಗೆ ಕೊಕ್

ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಮತ್ತೊಂದು ಪಟ್ಟಿ ಬಿಡುಗಡೆ ಮಾಡಿದೆ. ಶಿಢ್ಲಘಟ್ಟ ಕ್ಷೇತ್ರಕ್ಕೆ ಬಿ ವಿ ರಾಜೀವ್ ಗೌಡಗೆ ಟಿಕೆಟ್ ಘೋಷಿಸಿ, ಶಾಸಕ ವಿ ಮುನಿಯಪ್ಪ ಅವರ ಕೈ ಬಿಟ್ಟಿದೆ.

Congress announces final Candidates list
Congress announces final Candidates list

By

Published : Apr 20, 2023, 6:46 AM IST

Updated : Apr 20, 2023, 10:30 AM IST

ಬೆಂಗಳೂರು:ಕರ್ನಾಟಕ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದ್ದರಿಂದ ಮಧ್ಯರಾತ್ರಿಯೇ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಆರನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಐದು ಕ್ಷೇತ್ರಗಳಿಗೆ ಟಿಕೆಟ್ ಘೋಷಿಸುವ ಮೂಲಕ ಎಲ್ಲ 224 ಕ್ಷೇತ್ರಗಳಿಗೂ ಕಾಂಗ್ರೆಸ್ ಹುರಿಯಾಳುಗಳನ್ನು ಅಂತಿಮಗೊಳಿಸಿದಂತಾಗಿದೆ.

ಅಭ್ಯರ್ಥಿಗಳ ಕೊನೆಯ ಪಟ್ಟಿಯಲ್ಲಿ ಕಾಂಗ್ರೆಸ್ ಪಕ್ಷ ಇಬ್ಬರು ಪ್ರಬಲ ಆಕಾಂಕ್ಷಿಗಳು ಮತ್ತು ಓರ್ವ ಹಾಲಿ ಶಾಸಕರಿಗೆ ಟಿಕೆಟ್ ನೀಡಿಲ್ಲ. ಶಿಡ್ಲಘಟ್ಟ ಹಾಲಿ ಶಾಸಕ ವಿ ಮುನಿಯಪ್ಪ ಅವರಿಗೆ ಕೊಕ್ ನೀಡಿ, ಬಿ ವಿ ರಾಜೀವ್ ಗೌಡಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ತಮಗೆ ಇಲ್ಲವೇ ತಮ್ಮ ಪುತ್ರನಿಗೆ ಟಿಕೆಟ್ ನೀಡುವಂತೆ ವಿ ಮುನಿಯಪ್ಪ ಒತ್ತಾಯಿಸಿದ್ದರು. ಮಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಇನಾಯತ್ ಅಲಿಗೆ ನೀಡಿದ್ದು, ಆಕಾಂಕ್ಷಿಯಾಗಿದ್ದ ಮೊಯುದ್ದೀನ್ ಬಾವಾಗೆ ಕಾಂಗ್ರೆಸ್ ತೀವ್ರ ನಿರಾಸೆ ಮೂಡಿಸಿದೆ. ಇನ್ನು ಅರಕಲಗೂಡಿನಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಕೃಷ್ಣೇಗೌಡರ ಬದಲಿಗೆ ಹೆಚ್‌ಪಿ ಶ್ರೀಧರ್ ಗೌಡಗೆ ಮಣೆ ಹಾಕಿದೆ.

ಸಿ ವಿ ರಾಮನ್ ನಗರದಿಂದ ಕಳೆದ ಸಾರಿ ಮಾಜಿ ಮೇಯರ್ ಸಂಪತ್ ರಾಜ್ ಅಭ್ಯರ್ಥಿಯಾಗಿದ್ದರು. ಅವರೇ ಈ ಸಾರಿ ಟಿಕೆಟ್ ಆಕಾಂಕ್ಷಿ ಆಗಿದ್ದರು. ಆದರೆ ಅವರಿಗೆ ಟಿಕೆಟ್ ಕೈತಪ್ಪಿದೆ. ರಾಯಚೂರು ನಗರ ಕ್ಷೇತ್ರಕ್ಕೆ ಮಾಜಿ ಶಾಸಕ ಹಾಗೂ ಹಾಲಿ ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜ್, ಮಾಜಿ ಶಾಸಕ ಸೈಯದ್ ಯಾಸೀನ್ ಸೇರಿದಂತೆ 10ಕ್ಕೂ ಹೆಚ್ಚು ಮುಸ್ಲಿಂ ಸಮುದಾಯದ ಮುಖಂಡರು ಟಿಕೆಟ್ ಪಡೆಯುವುದಕ್ಕೆ ಹೈಕಮಾಂಡ್ ಮೇಲೆ ಭಾರಿ ಒತ್ತಡ ಹೇರುತ್ತಿದ್ದರು. ಆದ್ರೆ ಹೊಸ ಅಭ್ಯರ್ಥಿ ಮೊಹಮ್ಮದ್ ಶಾಲಂ ಅವರ 'ಕೈ' ಹಿಡಿದಿದೆ.

ಆರನೇ ಪಟ್ಟಿಯಲ್ಲಿ ಟಿಕೆಟ್ ಪಡೆದ ಅಭ್ಯರ್ಥಿಗಳು:

  1. ರಾಯಚೂರು ವಿಧಾನಸಭಾ ಕ್ಷೇತ್ರ - ಮೊಹಮ್ಮದ್ ಶಾಲಂ
  2. ಶಿಡ್ಲಘಟ್ಟ - ಬಿ ವಿ ರಾಜೀವ್​ ಗೌಡ
  3. ಸಿ ವಿ ರಾಮನ್ ನಗರ - ಎಸ್​ ಆನಂದ್​ ಕುಮಾರ್
  4. ಅರಕಲಗೂಡು - ಹೆಚ್ ಪಿ ಶ್ರಿಧರ್ ಗೌಡ
  5. ಮಂಗಳೂರು ನಗರ ಉತ್ತರ ಕ್ಷೇತ್ರ - ಇನಾಯತ್ ಅಲಿ

ನಿನ್ನೆ ಸಂಜೆ ಅಷ್ಟೇ ಕಾಂಗ್ರೆಸ್ ಐದನೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಆ ಬಳಿಕ ಮಧ್ಯರಾತ್ರಿಯೇ ಆರನೇ ಪಟ್ಟಿಯನ್ನು ಕೂಡ ಪ್ರಕಟಿಸಿದೆ. ಇಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದರಿಂದ ಎಲ್ಲ ಅಭ್ಯರ್ಥಿಗಳು ಇಂದು ಕಡ್ಡಾಯವಾಗಿ ನಾಮಪತ್ರ ಸಲ್ಲಿಸಬೇಕಿದೆ.

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ

ಬುಧವಾರ ಸಂಜೆ ಐದನೇ ಪಟ್ಟಿ ಬಿಡುಗಡೆ ಮಾಡಿದ್ದ ಕಾಂಗ್ರೆಸ್​, ಬೆಂಗಳೂರಿನ ಪುಲಿಕೇಶಿ ನಗರ ಕ್ಷೇತ್ರದ ಹಾಲಿ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಗೆ ಕೊಕ್ ನೀಡಲಾಗಿತ್ತು. ಜೊತೆಗೆ ಶಿಗ್ಗಾಂವಿ ಕ್ಷೇತ್ರದಲ್ಲಿ ಸಿಎಂ ಬೊಮ್ಮಾಯಿ ವಿರುದ್ಧ ಅಭ್ಯರ್ಥಿಯನ್ನು ಬದಲಿಸಲಾಗಿತ್ತು. ನಾಲ್ಕನೇ ಪಟ್ಟಿಯಲ್ಲಿ ಶಿಗ್ಗಾಂವಿ ಕ್ಷೇತ್ರದಿಂದ ಮೊಹ್ಮದ್ ಯೂಸೂಫ್ ಸವಣೂರು ಎಂಬುವವರಿಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಆದ್ರೆ ಐದನೇ ಪಟ್ಟಿಯಲ್ಲಿ ಅಭ್ಯರ್ಥಿಯನ್ನು ಬದಲಿಸಿ ಯಾಸೀರಖಾನ್ ಪಠಾಣ್ ಅವರಿಗೆ ಟಿಕೆಟ್ ಘೋಷಿಸಲಾಗಿದೆ. ಈ ಮೂಲಕ ಬೊಮ್ಮಾಯಿ ಅವರಿಗೆ ಟಕ್ಕರ್ ಕೊಡಲು ಕೈ ತಂತ್ರ ರೂಪಿಸಿದೆ.

ಇದನ್ನೂ ಓದಿ: ಕಾಂಗ್ರೆಸ್​ನಿಂದ ಸ್ಟಾರ್ ಕ್ಯಾಂಪೇನರ್‌ಗಳ ಪಟ್ಟಿ ಬಿಡುಗಡೆ: ನಟಿ ರಮ್ಯಾ, ಶೆಟ್ಟರ್​​ಗೂ ಸ್ಥಾನ

ಕಾಂಗ್ರೆಸ್​ನಲ್ಲಿ ಆಕಾಂಕ್ಷಿತರ ಪಟ್ಟಿ ದೊಡ್ಡದಾಗಿದ್ದರಿಂದ ಅಭ್ಯರ್ಥಿಗಳ ಪಟ್ಟಿಯನ್ನು ಎಚ್ಚರಿಕೆಯಿಂದ ಹಂತ ಹಂತವಾಗಿ ಬಿಡುಗಡೆ ಮಾಡಿದೆ. ಕೆಲವೆಡೆ ಆಕಾಂಕ್ಷಿಗಳು ಬಂಡಾಯ ಎದ್ದಿದ್ದು, ಪಕ್ಷಕ್ಕೆ ತಲೆನೋವಾಗಿದೆ. ಇನ್ನು ಕೆಲವು ಆಕಾಂಕ್ಷಿಗಳು ಪಕ್ಷ ತೊರೆದು ಜೆಡಿಎಸ್ ಮತ್ತು ಬಿಜೆಪಿ ಸೇರಿ ಕಣಕ್ಕೆ ಇಳಿದಿದ್ದಾರೆ.

ಚುನಾವಣಾ ಕಾವು ಈಗಾಗಲೇ ರಂಗೇರಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್​ ಸ್ಟಾರ್ ಪ್ರಚಾರಕರೊಂದಿಗೆ ಅಖಾಡಕ್ಕಿಳಿದಿವೆ. ಕಾಂಗ್ರೆಸ್ ಈಗಾಗಲೇ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ, ಮೊಹಮ್ಮದ್ ಅಜರುದ್ದಿನ್, ಶಶಿ ತರೂರ್, ಕನ್ಹಯ್ ಕುಮಾರ್, ಪಿ ಚಿದಂಬರಂ, ನಟಿ ರಮ್ಯಾ, ಹಾಸ್ಯ ನಟ ಸಾಧುಕೋಕಿಲ್ ಮತ್ತು ಇತ್ತೀಚೆಗಷ್ಟೇ ಬಿಜೆಪಿ ತೊರೆದು ಪಕ್ಷದ ಸೇರಿದ ಮಾಜಿ ಸಿಎಂ ಜಗದೀಶ ಶೆಟ್ಟರ್ ಸೇರಿ 40 ಜನ ಸ್ಟಾರ್ ಕ್ಯಾಂಪೇನರ್​ಗಳು ಭರ್ಜರಿ ಪ್ರಚಾರ ಕೈಗೊಳ್ಳಲಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆಗೆ ಮೇ 10 ರಂದು ಮತದಾನ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಹೊರಬೀಳಲಿದೆ.

ಇದನ್ನೂ ಓದಿ: ಕಾಂಗ್ರೆಸ್​​​ನ ಐದನೇ ಪಟ್ಟಿ ಪ್ರಕಟ: ಸಿಎಂ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಬದಲು!

ಇದನ್ನೂ ಓದಿ:ಅಫಜಲಪುರನಲ್ಲಿ ಅಣ್ಣ-ತಮ್ಮಂದಿರ ಪೈಪೋಟಿ: ಚಿತ್ತಾಪುರನಲ್ಲಿ ಖರ್ಗೆಗೆ ರಾಠೋಡ್​ ಟಕ್ಕರ್

Last Updated : Apr 20, 2023, 10:30 AM IST

ABOUT THE AUTHOR

...view details