ಕರ್ನಾಟಕ

karnataka

ETV Bharat / state

ರಾಜರಾಜೇಶ್ವರಿ ನಗರ ಮರು ವಶಕ್ಕೆ ಕೈ ಯತ್ನ: ಮತ್ತೆ ಗೆದ್ದು ಕ್ಷೇತ್ರ ಉಳಿಸಿಕೊಳ್ತಾರಾ ಮುನಿರತ್ನ? - ರಾಜರಾಜೇಶ್ವರಿ ನಗರ ಬಿಜೆಪಿ ಟಿಕೆಟ್​

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅತಿ ದೊಡ್ಡ ವಿಧಾನಸಭಾ ಕ್ಷೇತ್ರವಾದ ರಾಜರಾಜೇಶ್ವರಿ ನಗರದಲ್ಲಿ ಈ ಬಾರಿ ಚುನಾವಣಾ ಕದನ ಕುತೂಹಲ ಕೆರಳಿಸಿದೆ. ಬಿಜೆಪಿಯ ಮುನಿರತ್ನ ಮತ್ತೊಮ್ಮೆ ಗೆದ್ದು ಕ್ಷೇತ್ರ ಉಳಿಸಿಕೊಳ್ಳುತ್ತಾರಾ ಅಥವಾ ಕಾಂಗ್ರೆಸ್​ ಮರಳಿ ತನ್ನ ವಶಕ್ಕೆ ಪಡೆಯುತ್ತಾ ಎಂಬ ಚರ್ಚೆ ಶುರುವಾಗಿದೆ. ಇದರ ನಡುವೆ ಜೆಡಿಎಸ್​ ಕೂಡ ತನ್ನ ಕ್ಷೇತ್ರ ದಕ್ಕಿಸಿಕೊಳ್ಳಲು ಪ್ರಯತ್ನಿಸುತ್ತಿದೆ.

karnataka-assembly-election-2023: Will Muniratna retain the Rajarajeshwari Nagar constituency?
ರಾಜರಾಜೇಶ್ವರಿ ನಗರ ಮರು ವಶಕ್ಕೆ ಕೈ ಯತ್ನ: ಮತ್ತೆ ಗೆದ್ದು ಕ್ಷೇತ್ರ ಉಳಿಸಿಕೊಳ್ತಾರಾ ಮುನಿರತ್ನ?

By

Published : Mar 19, 2023, 10:13 PM IST

ಬೆಂಗಳೂರು: ಇತಿಹಾಸ ಪ್ರಸಿದ್ಧ ರಾಜರಾಜೇಶ್ವರಿ ದೇವಾಲಯವನ್ನು ಹೊಂದಿರುವ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಈವರೆಗೂ ಒಂದು ಉಪ ಚುನಾವಣೆ ಸೇರಿ ನಾಲ್ಕು ಚುನಾವಣೆಗಳು ನಡೆದಿವೆ. ಇದರಲ್ಲಿ ಬಿಜೆಪಿ ಎರಡು ಬಾರಿ, ಕಾಂಗ್ರೆಸ್ ಎರಡು ಬಾರಿ ಗೆದ್ದು ಸಮಬಲದ ಹೋರಾಟ ನಡೆಸಿವೆ. ಮತದಾರರ ಗುರುತಿನ ಚೀಟಿ ಹಗರಣ, ಟೆಂಡರ್ ಹಗರಣದಂತಹ ಕಪ್ಪು ಚುಕ್ಕಿ ಹೊಂದಿರುವ ಕ್ಷೇತ್ರದಲ್ಲಿ ಅಭಿವೃದ್ಧಿಯ ಜೊತೆಗೆ ಸಮಸ್ಯೆಗಳೂ ಇವೆ.

ಬೆಂಗಳೂರಿನಲ್ಲಿಯೇ ಅತಿ ದೊಡ್ಡ ವಿಧಾನಸಭಾ ಕ್ಷೇತ್ರ ಎಂದರೆ ಅದು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ. ಭೌಗೋಳಿಕವಾಗಿ ಯಶವಂತಪುರದಿಂದ ರಾಜರಾಜೇಶ್ವರಿನಗರದವರೆಗೆ ವ್ಯಾಪ್ತಿ ಹೊಂದಿದೆ. ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಗೆ ಕ್ಷೇತ್ರ ಚಾಚಿಕೊಂಡಿದೆ. ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದ್ದ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ 2008ರಲ್ಲಿ ಕ್ಷೇತ್ರ ಮರುವಿಂಗಡಣೆಯಾದ ನಂತರ ಹೊಸದಾಗಿ ಅಸ್ತಿತ್ವಕ್ಕೆ ಬಂದಿದೆ. ಈ ಕ್ಷೇತ್ರ ವ್ಯಾಪ್ತಿಯಲ್ಲಿ 9 ವಾರ್ಡ್​ಗಳು ಬರಲಿವೆ. ರಾಜರಾಜೇಶ್ವರಿನಗರ, ಲಕ್ಷ್ಮಿದೇವಿ ನಗರ, ಜಾಲಹಳ್ಳಿ, ಜೆಪಿ ಪಾರ್ಕ್, ಯಶವಂತಪುರ, ಹೆಚ್.ಎಂ.ಟಿ, ಲಗ್ಗೆರೆ, ಜ್ಞಾನಭಾರತಿ, ಕೊಟ್ಟಿಗೆಪಾಳ್ಯ ವಾರ್ಡ್​ಗಳನ್ನು ಕ್ಷೇತ್ರ ಒಳಗೊಂಡಿದೆ.

ಮೂರು ಚುನಾವಣೆಗಳ ಹಿನ್ನೋಟ:2008ರಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಶ್ರೀನಿವಾಸ್ 60,187 ಮತಗಳನ್ನು ಪಡೆದು ಗೆದ್ದಿದ್ದರು. ಕಾಂಗ್ರೆಸ್​ನ ಪಿ.ಎನ್.ಕೃಷ್ಣಮೂರ್ತಿ 40,595 ಮತಗಳನ್ನು ಪಡೆದು ಎರಡನೇ ಸ್ಥಾನ ಮತ್ತು ಜೆಡಿಎಸ್​ನ ಹನುಮಂತರಾಯಪ್ಪ 36,785 ಮತ ಪಡೆದು ಮೂರನೇ ಸ್ಥಾನ ಪಡೆದಿದ್ದರು. 2013ರಲ್ಲಿ ಕಾಂಗ್ರೆಸ್​ನ ಮುನಿರತ್ನ 71,064 ಮತಗಳನ್ನು ಪಡೆದು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಜೆಡಿಎಸ್ ನ ತಿಮ್ಮನಂಜಯ್ಯ 52,251 ಮತ ಪಡೆದು ಎರಡನೇ ಸ್ಥಾನ ಪಡೆದುಕೊಂಡಿದ್ದರು. ಆಗ ಹಾಲಿ ಶಾಸಕರಾಗಿದ್ದ ಬಿಜೆಪಿಯ ಎಂ.ಶ್ರೀನಿವಾಸ್ 50,726 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು.

ರಾಜರಾಜೇಶ್ವರಿ ನಗರ ಕ್ಷೇತ್ರದ ಮಾಹಿತಿ

ನಂತರ 2018ರ ಚುನಾವಣೆಯಲ್ಲಿ ಕಾಂಗ್ರೆಸ್ ನ ಮುನಿರತ್ನ 1,08,065 ಮತಗಳನ್ನು ಪಡೆದು ಎರಡನೇ ಬಾರಿಗೆ ಶಾಸಕರಾಗಿ ಚುನಾಯಿತರಾಗಿದ್ದರು. ಬಿಜೆಪಿಯ ಮುನಿರಾಜುಗೌಡ 82,573 ಮತ ಪಡೆದು ಎರಡನೇ ಸ್ಥಾನ ಪಡೆದಿದ್ದರು. ಜೆಡಿಎಸ್​ನ ರಾಮಚಂದ್ರ 60,360 ಮತ ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು.

ಆದರೆ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್​ನಿಂದ ಗೆದ್ದಿದ್ದ ಮುನಿರತ್ನ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಇದರಿಂದ 2020ರಲ್ಲಿ ಉಪ ಚುನಾವಣೆ ಎದುರಾಗಿತ್ತು. ಆಗ ಬಿಜೆಪಿಯಿಂದ ಸ್ಪರ್ಧಿಸಿದ್ದ ಮುನಿರತ್ನ 1,25,990 ಮತಗಳನ್ನು ಪಡೆದು ಆಯ್ಕೆಯಾಗಿದ್ದರು. ಕಾಂಗ್ರೆಸ್​ನ ಕುಸುಮಾ ಹನುಮಂತರಾಯಪ್ಪ 67,877 ಮತ ಪಡೆದು ಎರಡನೇ ಸ್ಥಾನ ಪಡೆದಿದ್ದರು. ಜೆಡಿಎಸ್​ನ ಕೃಷ್ಣಮೂರ್ತಿ ಕೇವಲ 10,269 ಮತಗಳನ್ನಷ್ಟೇ ಪಡೆಯಲು ಶಕ್ತರಾಗಿದ್ದರು.

ಆಕಾಂಕ್ಷಿಗಳು: 2013 ಮತ್ತು 2018ರಲ್ಲಿ ಕಾಂಗ್ರೆಸ್​ನಿಂದಲೇ ಗೆದ್ದು ಎರಡನೇ ಬಾರಿಗೆ ಶಾಸಕರಾಗಿ ಮುನಿರತ್ನ ಆಯ್ಕೆಯಾಗಿದ್ದರು. ಬಿಜೆಪಿಯಿಂದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು, ಸದ್ಯ ತೋಟಗಾರಿಕಾ ಸಚಿವರಾಗಿದ್ದಾರೆ. ಹೀಗಾಗಿ ಬಿಜೆಪಿಯಿಂದ ಸಚಿವ ಮುನಿರತ್ನ ಕಣಕ್ಕಿಳಿಯುವುದು ಬಹುತೇಕ ನಿಶ್ಚತವಾಗಿದೆ. ಆದರೆ, ಈ ಹಿಂದೆ ಬಿಜೆಪಿ ಅಭ್ಯರ್ಥಿಯಾಗಿದ್ದ ಹಾಗೂ ಈಗ ಪರಿಷತ್ ಸದಸ್ಯರಾಗಿರುವ ತುಳಸಿ ಮುನಿರಾಜುಗೌಡ ಕೂಡ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದರೆ, ಅವರು ಎಂಎಲ್​ಸಿ ಆಗಿರುವ ಕಾರಣ ಇದೊಂದು ಬಾರಿ ಮುನಿರತ್ನಗೆ ಅವಕಾಶ ಕಲ್ಪಿಸುವಂತೆ ವರಿಷ್ಠರು ಮನವೊಲಿಕೆ ಮಾಡುವ ಸಾಧ್ಯತೆ ಇದೆ. ಉಪ ಚುನಾವಣೆಯಲ್ಲಿಯೂ ಮನವೊಲಿಕೆ ಮೂಲಕ ಮುನಿರಾಜುಗೌಡ ಬಂಡಾಯ ತಪ್ಪಿಸಿದ್ದರು.

ಕಾಂಗ್ರೆಸ್​ನಿಂದ ಉಪ ಚುನಾವಣೆಯಲ್ಲಿ ಐಎಎಸ್ ಅಧಿಕಾರಿಯಾಗಿದ್ದ ದಿವಂಗತ ಡಿಕೆ ರವಿ ಪತ್ನಿ ಕುಸುಮಾ ಹನುಮಂತರಾಯಪ್ಪ ಸ್ಪರ್ಧಿಸಿ ಪರಾಜಿತಗೊಂಡಿದ್ದರು. ಈ ಬಾರಿಯೂ ಅವರೇ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಡಿಕೆ ಸಹೋದರರ ಬೆಂಬಲವೂ ಇರುವ ಕಾರಣ ಕುಸುಮಾ ಅವರಿಗೆ ಟಿಕೆಟ್ ಬಹುತೇಕ ಫಿಕ್ಸ್ ಎನ್ನಲಾಗಿದೆ. ಮತ್ತೊಂದೆಡೆ, 2013ರಲ್ಲಿ ಎರಡನೇ ಸ್ಥಾನ ಪಡೆದಿದ್ದ ಜೆಡಿಎಸ್ ಇದೀಗ ಮತ್ತೆ ಪೈಪೋಟಿ ನೀಡುವ ಚಿಂತನೆಯಲ್ಲಿದೆ. ಈ ಹಿಂದಿನ ಪರಾಜಿತ ಅಭ್ಯರ್ಥಿಗಳಾದ ತಿಮ್ಮನಂಜಯ್ಯ ಮತ್ತು ವಿ ಕೃಷ್ಣಮೂರ್ತಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

ಕ್ಷೇತ್ರದ ಸಮಸ್ಯೆಗಳು:ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 4,78,300 ಮತದಾರರಿದ್ದಾರೆ. ಇದರಲ್ಲಿ 2.46 ಲಕ್ಷ ಪುರುಷ ಮತದಾರರು ಮತ್ತು 2.25 ಲಕ್ಷ ಮಹಿಳಾ ಮತದಾರರು ಇದ್ದು, ಒಕ್ಕಲಿಗ ಸಮುದಾಯದ್ದೇ ಪ್ರಾಬಲ್ಯವಿದೆ. ಕ್ಷೇತ್ರದಲ್ಲಿ ಕೊಳಗೇರಿ ಪ್ರದೇಶಗಳ ಅಭಿವೃದ್ಧಿಯಾಗಬೇಕಾಗಿದೆ. ಕುಡಿಯುವ ನೀರು ಪೂರೈಕೆ, ಒಳಚರಂಡಿ ವ್ಯವಸ್ಥೆ ಕ್ಷೇತ್ರದಲ್ಲಿ ಸುಧಾರಿಸಬೇಕಿದೆ. ನೈಸ್ ರಸ್ತೆ, ಉತ್ತಮ ಆಸ್ಪತ್ರೆಗಳು, ಮಾಲ್​ಗಳು ಕ್ಷೇತ್ರದಲ್ಲಿದ್ದು, ರಿಯಲ್ ಎಸ್ಟೇಟ್ ಉದ್ಯಮ ಜೋರಾಗಿರುವ ಕ್ಷೇತ್ರವಾಗಿದೆ. ಆದರೂ ಕ್ಷೇತ್ರದಲ್ಲಿ ಟೆಂಡರ್​ ಗೋಲ್​ಮಾಲ್, ನಕಲಿ ಬಿಲ್, ನಕಲಿ ಮತದಾರರ ಗುರುತಿನ ಚೀಟಿ ಪ್ರಕರಣಗಳು ಹೆಚ್ಚು ಸದ್ದು ಮಾಡಿದ್ದವು.

ಒಟ್ಟಿನಲ್ಲಿ ಹೊಸದಾಗಿ ರಚನೆಯಾಗದ ರಾಜರಾಜೇಶ್ವರಿನಗರ ಕ್ಷೇತ್ರವು ಕಮಲ ತೆಕ್ಕೆಯಲ್ಲಿತ್ತು. ನಂತರ ಕಾಂಗ್ರೆಸ್​ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಆಪರೇಷನ್ ಕಮಲದ ಮೂಲಕ ಮತ್ತೆ ಮರಳಿ ಕ್ಷೇತ್ರ ಕೇಸರಿ ಪಾಳಯದ ವಶದಲ್ಲಿದೆ. ಆದರೆ, ಈ ಬಾರಿ ಈ ಕ್ಷೇತ್ರ ಯಾರ ಕೈಗೆ ಸಿಗಲಿದೆ. ಕ್ಷೇತ್ರ ಉಳಿಸಿಕೊಳ್ಳುವಲ್ಲಿ ಬಿಜೆಪಿ ಸಫಲವಾಗುತ್ತಾ?, ಕಾಂಗ್ರೆಸ್​ ಕ್ಷೇತ್ರವನ್ನು ಮರಳಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತಾ? ಅಥವಾ ಪ್ರಬಲ ಹೋರಾಟ ನಡೆಸಿಕೊಂಡು ಬಂದಿರುವ ಜೆಡಿಎಸ್​ಗೆ ಈ ಬಾರಿ ಮತದಾರರು ಮಣೆ ಹಾಕುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:ಬಿಜೆಪಿಯ 'ಸಾಮ್ರಾಟ'ನ ಭದ್ರಕೋಟೆ.. ಪದ್ಮನಾಭನಗರ ವಶಕ್ಕೆ ಕೈ-ತೆನೆ ಕಸರತ್ತು

ABOUT THE AUTHOR

...view details