ಬೆಂಗಳೂರು:ಸಿಲಿಕಾನ್ ಸಿಟಿಯ ಅತ್ಯಂತ ದೊಡ್ಡ ಮಾರುಕಟ್ಟೆ ಪ್ರದೇಶ ಮತ್ತು ಜನನಿಬಿಡ ಪ್ರದೇಶ ಹೊಂದಿರುವ ಕ್ಷೇತ್ರ ಎಂದರೆ ಅದು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ. ಬೆಂಗಳೂರಿನ ಮೆಜೆಸ್ಟಿಕ್ನ ಕೂಗಳತೆ ದೂರದಲ್ಲಿರುವ ಚಿಕ್ಕಪೇಟೆ ವ್ಯಾಪಾರ ದೃಷ್ಟಿಯಲ್ಲಿ ಬೆಂಗಳೂರಿನ ಲ್ಯಾಂಡ್ ಮಾರ್ಕ್ ಆಗಿದೆ. ಬಿಜೆಪಿ ಕಾಂಗ್ರೆಸ್ ನಡುವೆ ನೇರ ಪೈಪೋಟಿ ಮತ್ತು ದಳದ ಅಸ್ತಿತ್ವವೂ ಇರುವ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಕುರಿತ ಪಕ್ಷಿನೋಟ ಇಲ್ಲಿದೆ.
ಹಬ್ಬ ಹರಿದಿನ, ಮದುವೆ ಮುಂಜಿ, ಕಾರ್ಯಕ್ರಮಗಳು ಹೀಗಿ ವರ್ಷವಿಡೀ ಚಿಕ್ಕಪೇಟೆಯಲ್ಲಿ ವ್ಯಾಪಾರ ವಹಿವಾಟು ಜೋರಾಗಿಯೇ ನಡೆಯುತ್ತದೆ. ಎಲ್ಲ ಬಗೆಯ ಉಡುಪುಗಳು, ರೇಷ್ಮೆ ವಸ್ತ್ರಗಳು, ಮದುವೆ ಇತ್ಯಾದಿ ಸಮಾರಂಭದ ಜವಳಿ ಅಂಗಡಿ, ಎಂಪೋರಿಯಮ್, ಪುಸ್ತಕದ ಮಳಿಗೆಗೆ ಖ್ಯಾತಿಯಾಗಿರುವ ಕ್ಷೇತ್ರವಾಗಿದೆ. ನಗರದ ಪ್ರಮುಖ ಹಾಗೂ ಬೃಹತ್ ಮಾರುಕಟ್ಟೆಯಾಗಿರುವ ಕೆಆರ್ ಮಾರುಕಟ್ಟೆ, ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟಕ್ಕೆ ಹೆಸರಾಗಿರುವ ಎಸ್ಪಿ ರಸ್ತೆ, ಸಸ್ಯ ಕಾಶಿ ಲಾಲ್ ಬಾಗ್, ಕರಗಕ್ಕೆ ಪ್ರಸಿದ್ದವಾಗಿರುವ ಧರ್ಮರಾಯಸ್ವಾಮಿ ದೇವಾಲಯ ಈ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ. ಹಾಗೂ ವ್ಯಾಪಾರೀ ತಾಣ, ಪರಿಸರ ತಾಣ ಮತ್ತು ಧಾರ್ಮಿಕ ತಾಣಕ್ಕೆ ಈ ಕ್ಷೇತ್ರ ಹೆಸರುವಾಸಿಯಾಗಿದೆ.
ವಾರ್ಡ್ಗಳು:ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಬಿಎಂಪಿಯ ಏಳು ವಾರ್ಡ್ಗಳು ಬರಲಿವೆ. ಸುಧಾಮನಗರ, ಧರ್ಮರಾಯ ಸ್ವಾಮಿ ದೇವಸ್ಥಾನ, ಸುಂಕೇನಹಳ್ಳಿ, ವಿಶ್ವೇಶ್ವರಪುರ, ಸಿದ್ದಾಪುರ, ಹೊಂಬೇಗೌಡನಗರ ಹಾಗೂ ಜಯನಗರ ವಾರ್ಡ್ಗಳನ್ನು ಚಿಕ್ಕಪೇಟೆ ಕ್ಷೇತ್ರ ಒಳಗೊಂಡಿದೆ.
ಜಾತಿ ಲೆಕ್ಕಾಚಾರ: 2,28,200 ಮತದಾರರು ಕ್ಷೇತ್ರದಲ್ಲಿದ್ದಾರೆ, 1,18,050 ಪುರುಷ ಮತದಾರರು,1,10,150 ಮಹಿಳಾ ಮತದಾರರಿದ್ದಾರೆ. 60 ಸಾವಿರ ಮುಸ್ಲಿಂ, 40 ಸಾವಿರ ಎಸ್ಸಿ/ಎಸ್ಟಿ, 32 ಸಾವಿರ ಬ್ರಾಹ್ಮಣ, 45 ಸಾವಿರ ಒಕ್ಕಲಿಗ, 25 ಸಾವಿರ ದೇವಾಂಗ, 15 ಸಾವಿರ ತಿಗಳ, 20 ಸಾವಿರ ಇತರ ಮತದಾರರಿದ್ದಾರೆ. ಜೈನರು, ಗುಜರಾತಿಗಳು, ರಾಜಸ್ತಾನ್ ವರ್ತಕರೂ ಇಲ್ಲಿ ಇದ್ದಾರೆ.
ಚುನಾವಣೆ ಹಿನ್ನೋಟ: 2008 ರಲ್ಲಿ ಬಿಜೆಪಿ ಅಭ್ಯರ್ಥಿ ಹೇಮಚಂದ್ರಸಾಗರ್ 40252 ಮತಗಳನ್ನು ಪಡೆದು ಗೆದ್ದರೆ, ಕಾಂಗ್ರೆಸ್ ಅಭ್ಯರ್ಥಿ ಆರ್ವಿ ದೇವರಾಜ್ 32971 ಮತ ಪಡೆದಿದ್ದರು. 2013 ರಲ್ಲಿ ಕಾಂಗ್ರೆಸ್ನ ಆರ್ವಿ ದೇವರಾಜ್ 44714 ಮತ ಪಡೆದು ಗೆದ್ದರೆ, ಬಿಜೆಪಿಯ ಉದಯ್ ಗರುಡಾಚಾರ್ 31655 ಮತ ಪಡೆದಿದ್ದರು. 2018 ರಲ್ಲಿ ಬಿಜೆಪಿಯ ಉದಯ್ ಗರುಡಾಚಾರ್ 57312 ಮತ ಪಡೆದು ಗೆದ್ದರೆ, ಕಾಂಗ್ರೆಸ್ನ ಆರ್ವಿ ದೇವರಾಜ್ 49378 ಮತ ಪಡೆದಿದ್ದರು. 1994, 1999, 2004, 2008, 2018 ರಲ್ಲಿ ಬಿಜೆಪಿ ಗೆದ್ದಿದ್ದು, 2013 ರಲ್ಲಿ ಮಾತ್ರ ಸೋತಿದೆ. ಹಾಗಾಗಿ ಇದು ಬಿಜೆಪಿಯ ಭದ್ರಕೋಟೆ ಎನ್ನಬಹುದು.
ಈವರೆಗೂ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 15 ಬಾರಿ ಚುನಾವಣೆ ನಡೆದಿದ್ದು, ಕಾಂಗ್ರೆಸ್ ಮೂರು ಬಾರಿ, ಬಿಜೆಪಿ ಐದು ಬಾರಿ, ಜನತಾ ಪಕ್ಷ ಮೂರು ಬಾರಿ, ಜನತಾದಳ ಒಂದು ಬಾರಿ ಗೆದ್ದಿದ್ದು, ಎರಡು ಬಾರಿ ಪಕ್ಷೇತರ, ಒಂದು ಬಾರಿ ಜೆಪಿಪಿ ಪಕ್ಷ ಗೆದ್ದಿದೆ.
ಆಕಾಂಕ್ಷಿಗಳು: ಬಿಜೆಪಿಯಿಂದ ಹಾಲಿ ಶಾಸಕ ಉದಯ್ ಗರುಡಾಚಾರ್ ಆಕಾಂಕ್ಷಿಯಾಗಿದ್ದು, ಮರು ಆಯ್ಕೆಗೆ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಇನ್ನು ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಎನ್ಆರ್ ರಮೇಶ್ ಕೂಡ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಕಳೆದ ಬಾರಿ ಜಯನಗರ ಕ್ಷೇತ್ರಕ್ಕೆ ಯತ್ನಿಸಿದ್ದ ಎನ್ಆರ್ ರಮೇಶ್ ವರಿಷ್ಠರ ಸಲಹೆಯಂತೆ ಬಂಡಾಯದಿಂದ ದೂರ ಉಳಿದರು. ಆದರೆ, ಈ ಬಾರಿ ಜಯನಗರದ ಜೊತೆಗೆ ಚಿಕ್ಕಪೇಟೆ ಮೇಲೆಯೂ ಕಣ್ಣಿಟ್ಟಿದ್ದಾರೆ. ಜಯನಗರದಲ್ಲಿ ಈ ಬಾರಿ ತೇಜಸ್ವಿನಿ ಅನಂತ್ ಕುಮಾರ್ಗೆ ಟಿಕೆಟ್ ನೀಡಲು ನಿರ್ಧರಿಸಿದರೆ.. ಇದಕ್ಕೆ ರಮೇಶ್ ವಿರೋಧಿಸಲು ಸಾಧ್ಯವಿಲ್ಲ. ಅನಂತ್ ಕುಮಾರ್ ಒಡನಾಡಿಯಾಗಿ ಅವರ ಕುಟುಂಬಕ್ಕೆ ಆತ್ಮೀಯವಾಗಿಯೇ ಇದ್ದಾರೆ. ಹಾಗಾಗಿ ಜಯನಗರ ಕೈತಪ್ಪಿದರೆ ಚಿಕ್ಕಪೇಟೆ ಸಿಗಲಿ ಎನ್ನುವ ನಿರೀಕ್ಷೆಯಲ್ಲಿದ್ದಾರೆ.