ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಗೆ ದಿನಗಣನೆ ಶುರುವಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನ ಜಯನಗರ ವಿಧಾನಸಭೆ ಕ್ಷೇತ್ರವು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿಗೆ ಕಾರಣವಾಗಿದೆ. ಹಾಲಿ ಶಾಸಕಿ ಸೌಮ್ಯಾ ರೆಡ್ಡಿ ಕಾಂಗ್ರೆಸ್ನಿಂದ ಮತ್ತೊಮ್ಮೆ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ. ಮತ್ತೊಂದೆಡೆ, ಬಿಜೆಪಿ ಯಾರಿಗೆ ಟಿಕೆಟ್ ನೀಡುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
2008 ಮತ್ತು 2013ರಲ್ಲಿ ಬಿಜೆಪಿಯ ವಿಜಯ್ ಕುಮಾರ್ ಅವರಿಗೆ ಮಣೆ ಹಾಕಿದ್ದರು. 2018ರ ಚುನಾವಣೆಯಲ್ಲೂ ಅವರ ಪರವಾದ ಅಲೆಯೇ ಇತ್ತು. ಆದರೆ, ಚುನಾವಣೆ ದಿನ ಸಮೀಪದಲ್ಲೇ ಹೃದಯಾಘಾತದಿಂದ ನಿಧನರಾಗಿದ್ದರು. ಈ ಹಿನ್ನೆಲೆ ಒಂದು ತಿಂಗಳು ತಡವಾಗಿ ಚುನಾವಣೆ ನಡೆದಿತ್ತು. ಆಗ ಪಕ್ಕದ ಬಿಟಿಎಂ ಲೇಔಟ್ ಶಾಸಕ ಹಾಗೂ ಕಾಂಗ್ರೆಸ್ ಪ್ರಭಾವಿ ನಾಯಕ ರಾಮಲಿಂಗರೆಡ್ಡಿ ತಮ್ಮ ಪುತ್ರಿ ಸೌಮ್ಯಾ ರೆಡ್ಡಿಯನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಂಡರು. ಈ ಸಮಯದಲ್ಲಿ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರ ಇದ್ದ ಕಾರಣ ಸೌಮ್ಯಾ ರೆಡ್ಡಿ ಅವರನ್ನು ಮತದಾರರು ಕೈ ಹಿಡಿದಿದ್ದರು.
2018ರಲ್ಲಿ ವಿಜಯ್ ಕುಮಾರ್ ಸೋದರ ಬಿ.ಎನ್. ಪ್ರಹ್ಲಾದ್ರನ್ನು ಕಣಕ್ಕಿಳಿಸಿ ಗೆಲ್ಲುವ ಬಿಜೆಪಿ ಆಶಯಕ್ಕೆ ಬೆಂಬಲ ಸಿಗಲಿಲ್ಲ. ಬಿಟಿಎಂ ಲೇಔಟ್ ಕ್ಷೇತ್ರದಲ್ಲಿ ರಾಮಲಿಂಗರೆಡ್ಡಿ ನಿರಂತರವಾಗಿ ಗೆಲ್ಲುತ್ತಾ ಬಂದಿದ್ದರೂ, ಇಲ್ಲಿನ ಅಭಿವೃದ್ಧಿ ಹಿಂದೆ ಸೌಮ್ಯಾ ರೆಡ್ಡಿ ಕೆಲಸ ಇದೆ ಎಂಬ ಮಾತಿದೆ. ಆದರೆ ಜಯನಗರದಂತ ವಾಣಿಜ್ಯ ಚಟುವಟಿಕೆಯಿಂದ ಕೂಡಿರುವ ಕ್ಷೇತ್ರದಲ್ಲಿ ಅಂತಹ ನಿರೀಕ್ಷಿತ ಅಭಿವೃದ್ಧಿ ಕಳೆದ ಐದು ವರ್ಷದಲ್ಲಿ ಆಗಿಲ್ಲ. ಕೆಲವೆಡೆ ಉತ್ತಮ ಅಭಿವೃದ್ಧಿ ಆಗಿದ್ದರೆ, ಹಲವೆಡೆ ರಸ್ತೆ, ಒಳಚರಂಡಿ ಸಮಸ್ಯೆ ಕಾಡುತ್ತಲೇ ಇದೆ. ಅಭಿವೃದ್ಧಿ ವಿಚಾರದಲ್ಲಿ ಸಾಕಷ್ಟು ಹಿನ್ನಡೆ ಇದೆ. ಪ್ರಮುಖ ಆಸ್ಪತ್ರೆಗಳು, ವಾಣಿಜ್ಯ ಮಳಿಗೆಗಳು, ಶಾಲಾ, ಕಾಲೇಜುಗಳು, ಪ್ರಮುಖ ನಿಲ್ದಾಣ, ಮೆಟ್ರೊ ರೈಲು ಸಂಪರ್ಕ, ಉದ್ಯಾನಗಳು ಇದ್ದು, ಜಯನಗರದ ನಾಗರಿಕರ ಸಮಸ್ಯೆ ಸಂಪೂರ್ಣ ಬಗೆಹರಿದಿಲ್ಲ ಎನ್ನುವ ಮಾತಿದೆ.
ಪ್ರಸ್ತುತ ಸ್ಥಿತಿ:ಕಾಂಗ್ರೆಸ್ ಪಕ್ಷದಲ್ಲಿ ಸೌಮ್ಯಾ ರೆಡ್ಡಿ ಅವರೇ ಅಭ್ಯರ್ಥಿ ಆಗುವುದು ಖಚಿತ. ಆಕಾಂಕ್ಷಿಯಾಗಿ ಅರ್ಜಿ ಸಹ ಸಲ್ಲಿಸಿದ್ದಾರೆ. ಬಿಜೆಪಿಯಲ್ಲಿ ಟಿಕೆಟ್ಗಾಗಿ ಸಾಕಷ್ಟು ಪೈಪೋಟಿ ಇದೆ. ಮಾಜಿ ಕಾರ್ಪೋರೇಟರ್ ಸಿ.ಕೆ. ರಾಮಮೂರ್ತಿ, ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್. ರಮೇಶ್, ಆಮ್ ಆದ್ಮಿ ಪಕ್ಷ ತೊರೆದು ಇತ್ತೀಚೆಗೆ ಬಿಜೆಪಿ ಸೇರಿರುವ ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.