ಕರ್ನಾಟಕ

karnataka

ETV Bharat / state

ರಾಜ್ಯ ಚುನಾವಣೆಗೆ ಅಖಾಡ ಸಜ್ಜು: ಅಭ್ಯರ್ಥಿಗಳ ವೆಚ್ಚದ ಮೇಲೆ ಆಯೋಗದ ಹದ್ದಿನ ಕಣ್ಣು - ರಾಜಕೀಯ ಜಾಹೀರಾತು

ರಾಜ್ಯದಲ್ಲಿ ಮೇ 10ರಂದು ವಿಧಾನಸಭೆ ಚುನಾವಣೆ ನಡೆಯಲಿದೆ. ಚುನಾವಣಾ ಆಯೋಗವು ಅಭ್ಯರ್ಥಿಗಳ ಖರ್ಚು ವೆಚ್ಚಗಳ ಮೇಲೆ ವಿಶೇಷ ನಿಗಾ ಇಟ್ಟಿದೆ.

election commission
ಚುನಾವಣಾ ಆಯೋಗ

By

Published : Mar 30, 2023, 7:13 AM IST

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣಾ ಅಖಾಡ ಸಜ್ಜಾಗಿದೆ.‌ ಮೇ 10 ರಂದು ನಡೆಯುವ ಮತಸಮರ ಗೆಲ್ಲಲು ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದೆ. ಈಗಾಗಲೇ ವಿವಿಧ ಪಕ್ಷಗಳ ಅಭ್ಯರ್ಥಿಗಳು ಗೆಲುವಿಗಾಗಿ ಪ್ರಚಾರ ಕಾರ್ಯ ಬಿರುಸುಗೊಳಿಸಿದ್ದಾರೆ. ಇತ್ತ ಬುಧವಾರ ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾಗಿದೆ. ಇನ್ನೊಂದೆಡೆ, ಚುನಾವಣಾ ಆಯೋಗವು ಅಭ್ಯರ್ಥಿಗಳ ಖರ್ಚು ವೆಚ್ಚದ ಮೇಲೆ ನಿಗಾ ಇಟ್ಟಿದೆ.

ಚುನಾವಣಾ ವೆಚ್ಚಕ್ಕೆ ಮಿತಿ: ಈ ಬಾರಿ ಅಭ್ಯರ್ಥಿಗಳು ಚುನಾವಣಾ ವೆಚ್ಚವಾಗಿ ಗರಿಷ್ಠ 40 ಲಕ್ಷ ರೂ. ಖರ್ಚು ಮಾಡಬಹುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಸ್ಪಷ್ಟಪಡಿಸಿದ್ದಾರೆ. 2014ರವರೆಗೆ ವಿಧಾನಸಭೆ ಚುನಾವಣಾ ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮಿತಿ 28 ಲಕ್ಷ ರೂಪಾಯಿ ಇತ್ತು. ಈಗ ಅದನ್ನು 40 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ವೆಚ್ಚ ಮಿತಿಗಿಂತ ಹೆಚ್ಚು ಖರ್ಚು ಮಾಡದಂತೆ ಚುನಾವಣಾ ಆಯೋಗ ಗಮನ ಹರಿಸಿದೆ.

ಫ್ಲೈಯಿಂಗ್ ಸ್ಕ್ಯಾಡ್, ಸ್ಥಿರ ಕಣ್ಗಾವಲು ತಂಡ, ಬಯೋ ವೀಕ್ಷಣೆ ತಂಡ, ವಿಡಿಯೋ ವೀಕ್ಷಣೆ ತಂಡ, ಖಾತೆ ತಂಡಗಳನ್ನು ರಚನೆ ಮಾಡಲಾಗಿದ್ದು, ಅಭ್ಯರ್ಥಿಗಳ ಖರ್ಚುಗಳ ಮೇಲೆ ಆಯೋಗ ಹದ್ದಿನ ಕಣ್ಣಿಟ್ಟಿದೆ. ಮಾಧ್ಯಮ ಪ್ರಮಾಣೀಕರಣ ಮತ್ತು ಮಾನಿಟರಿಂಗ್ ಕಮಿಟಿ, ಜಿಲ್ಲಾ ಖರ್ಚು ಮಾನಿಟರಿಂಗ್, ರಾಜ್ಯ ಪೊಲೀಸ್, ರಾಜ್ಯ ಅಬಕಾರಿ, ಆದಾಯ ತೆರಿಗೆ ಇಲಾಖೆ, ತನಿಖಾ ನಿರ್ದೇಶನಾಲಯ, ಸಿಬಿಐಸಿ, ಜಾರಿ ನಿರ್ದೇಶನಾಲಯ, ಹಣಕಾಸು ಗುಪ್ತಚರ ಘಟಕಗಳೂ ಚುನಾವಣಾ ವೆಚ್ಚದ ಮೇಲೆ ಕಣ್ಗಾವಲಿರಿಸಿವೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಚುನಾವಣಾ ವೆಚ್ಚದ ಮೇಲ್ವಿಚಾರಣೆಯನ್ನು ಸುಲಭಗೊಳಿಸಲು ಅಭ್ಯರ್ಥಿಗಳು ಪ್ರತ್ಯೇಕ ಬ್ಯಾಂಕ್ ಖಾತೆಯನ್ನು ಮತ್ತು ಆ ಖಾತೆಯಿಂದ ಮಾತ್ರ ವೆಚ್ಚಗಳನ್ನು ಬಳಸಬೇಕು. ಕರ್ನಾಟಕದಲ್ಲಿ ದೊಡ್ಡ ಮೊತ್ತದ ಹಣದ ಸಂಗ್ರಹದ ಮತ್ತು ಹಂಚಿಕೆ ಸಾಗಾಣಿಕೆಯನ್ನು ಪರಿಶೀಲಿಸಲು ಆದಾಯ ತೆರಿಗೆ ಇಲಾಖೆ ಮತ್ತು ತನಿಖಾ ನಿರ್ದೇಶನಾಲಯಕ್ಕೆ ಸೂಚಿಸಲಾಗುವುದು. ನಿಮಾನ ನಿಲ್ದಾಣಗಳಲ್ಲಿ ಏರ್ ಇಂಟಲಿಜೆನ್ಸ್ ಮತ್ತು ರಾಜ್ಯ ಗುಪ್ತಚರ ಘಟಕಗಳನ್ನು ಸಕ್ರಿಯಗೊಳಿಸಲಿದೆ.

ಬ್ಯಾಂಕ್‌ನಿಂದ ಅಸಾಮಾನ್ಯ ಮತ್ತು ಅನುಮಾನಾಸ್ಪದ ಒಂದು ಲಕ್ಷ ರೂ. ವರೆಗಿನ ನಗದು ಪಡೆಯಲು ಅಥವಾ ಠೇವಣಿ ಮಾಡುವ ಕಾರಣವನ್ನು ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ಸೂಚಿಸಲಾಗಿದೆ. 10 ಲಕ್ಷ ರೂ.ಗೂ ಹೆಚ್ಚಿನ ನಗದು ಇದ್ದರೆ, ಜಿಲ್ಲಾ ಚುನಾವಣಾ ಅಧಿಕಾರಿಗಳು ಅಗತ್ಯ ಕ್ರಮಕ್ಕಾಗಿ ಆದಾಯ ತೆರಿಗೆ ಇಲಾಖೆಗೆ ರವಾನಿಸಬೇಕು. ಅನುಮಾನಾಸ್ಪದ ವಹಿವಾಟು ಮೇಲ್ವಿಚಾರಣೆ ಹಂಚಿಕೊಳ್ಳಲು ಹಣಕಾಸು ಗುಪ್ತಚರ ವಿಭಾಗಕ್ಕೆ ತಿಳಿಸಲಾಗಿದ್ದು, ವಹಿವಾಟು ವರದಿ ಮತ್ತು ಕೇಂದ್ರ ನೇರ ತೆರಿಗೆ ಮಂಡಳಿ (CBDT) ಸಹ ಅಭ್ಯರ್ಥಿಯ ಚುನಾವಣಾ ವೆಚ್ಚಗಳ ಬಗ್ಗೆ ನಿಗಾ ವಹಿಸಲಿದೆ.

ಇದನ್ನೂ ಓದಿ:ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಾಲಿನ ಪ್ರತಿಷ್ಠೆಯ ಕಣ: ವಿಷ್ಣು- ಶಿವನ ನಾಡು ಹರಿಹರದಲ್ಲಿ ಯಾರ ಕೊರಳಿಗೆ ಜಯದ ಮಾಲೆ?

ವಾಹನ ವೆಚ್ಚಗಳ ಮೇಲೂ ನಿಗಾ: ಅಭ್ಯರ್ಥಿಗಳು ಚುನಾವಣಾ ಪ್ರಚಾರಕ್ಕಾಗಿ ವಾಹನಗಳನ್ನು ಬಳಸಲು ಚುನಾವಣಾಧಿಕಾರಿಯಿಂದ ಅನುಮತಿ ಪಡೆಯಬೇಕು. ಆದರೆ, ಕೆಲವು ಅಭ್ಯರ್ಥಿಗಳು ತಮ್ಮ ಚುನಾವಣಾ ವೆಚ್ಚದ ಖಾತೆಯಲ್ಲಿ ವಾಹನ ಬಾಡಿಗೆ ಶುಲ್ಕ ಅಥವಾ ಇಂಧನ ವೆಚ್ಚಗಳನ್ನು ತೋರಿಸುವುದಿಲ್ಲ. ಆದ್ದರಿಂದ, ಚುನಾವಣಾ ಪ್ರಚಾರದಿಂದ ವಾಹನಗಳನ್ನು ಹಿಂತೆಗೆದುಕೊಳ್ಳುವ ಬಗ್ಗೆ ಅಭ್ಯರ್ಥಿಯು ಚುನಾವಣಾಧಿಕಾರಿಗೆ ತಿಳಿಸದ ಹೊರತು, ಅನುಮತಿ ನೀಡಲಾದ ವಾಹನಗಳ ಸಂಖ್ಯೆಯ ಆಧಾರದ ಮೇಲೆ ಪ್ರಚಾರ ವಾಹನಗಳ ಕಾಲ್ಪನಿಕ ವೆಚ್ಚವನ್ನು ಲೆಕ್ಕ ಹಾಕಲು ನಿರ್ಧರಿಸಲಾಗಿದೆ.

ರಾಜಕೀಯ ಜಾಹೀರಾತು:ರಾಜಕೀಯ ಜಾಹೀರಾತು ಮೇಲೂ ಚುನಾವಣಾ ಆಯೋಗ ಕಣ್ಣಿಟ್ಟಿದೆ. ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣೆ ಸಮಿತಿಗಳು (ಎಂಸಿಎಂಸಿ) ಎಲ್ಲಾ ಜಿಲ್ಲೆಗಳು ಮತ್ತು ರಾಜ್ಯ ಮಟ್ಟದಲ್ಲಿ ಅಸ್ತಿತ್ವದಲ್ಲಿರಲಿವೆ. ವಿದ್ಯುನ್ಮಾನ ಮಾಧ್ಯಮಗಳಲ್ಲಿ ಕೊಡಲು ಉದ್ದೇಶಿಸಿರುವ ಎಲ್ಲಾ ರಾಜಕೀಯ ಜಾಹೀರಾತುಗಳಿಗೆ ಸಂಬಂಧಪಟ್ಟ ಎಂಸಿಎಂಸಿಯಿಂದ ಪೂರ್ವ-ಪ್ರಮಾಣೀಕರಣ ಪಡೆಯಬೇಕು. ಖಾಸಗಿ ಎಫ್‌ಎಂ ಚಾನೆಲ್​ಗಳು / ಸಿನೆಮಾ ಹಾಲ್​ಗಳು / ಸಾರ್ವಜನಿಕ ಸ್ಥಳಗಳಲ್ಲಿ ಆಡಿಯೋ-ವಿಶುವಲ್ ಡಿಸ್ ಪ್ಲೇಗಳು, ಧ್ವನಿ ಸಂದೇಶಗಳು ಮತ್ತು ಫೋನ್ ಮತ್ತು ಸಾಮಾಜಿಕ ಮಾಧ್ಯಮ ಮತ್ತು ಇಂಟರ್​ನೆಟ್ ವೆಬ್ ಸೈಟ್ ಗಳ ಮೂಲಕ ಎಸ್‌ಎಂಎಸ್ ಸೇರಿದಂತೆ ಎಲ್ಲಾ ವಿದ್ಯುನ್ಮಾನ ಮಾಧ್ಯಮ / ಟಿವಿ ಚಾನಲ್​ಗಳು / ಕೇಬಲ್ ನೆಟ್ ವರ್ಕ್ / ರೆಡಿಯೋದಲ್ಲಿನ ರಾಜಕೀಯ ಜಾಹೀರಾತುಗಳು ಪೂರ್ವ-ಪ್ರಮಾಣೀಕರಣದ ವ್ಯಾಪ್ತಿಗೆ ಬರುತ್ತವೆ. ಎಂಸಿಎಂಸಿ ಮಾಧ್ಯಮಗಳಲ್ಲಿ ಪೇಯ್ಡ್ ನ್ಯೂಸ್​ನ ಶಂಕಿತ ಪ್ರಕರಣಗಳ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಲಿದೆ.

ಇದನ್ನೂ ಓದಿ:ಬಿಜೆಪಿ - ಕಾಂಗ್ರೆಸ್​ನಲ್ಲಿ​ ಕುತೂಹಲ ಕೆರಳಿಸಿದ ಚನ್ನಗಿರಿ ಟಿಕೆಟ್... ಪೈಪೋಟಿ ಕಣವಾದ ಕ್ಷೇತ್ರ

ಸೋಷಿಯಲ್ ಮೀಡಿಯಾ ಬಳಕೆ: ಚುನಾವಣೆ ವೇಳೆ ಅಭ್ಯರ್ಥಿಗಳ ಸಾಮಾಜಿಕ ಜಾಲತಾಣದ ಮೇಲೂ ಚುನಾವಣಾ ಆಯೋಗ ನಿಗಾ ಇರಿಸಲಿದೆ. ಸಾಮಾಜಿಕ ಮಾಧ್ಯಮಗಳ ದುರ್ಬಳಕೆ ಮತ್ತು ಪೇಯ್ಡ್ ನ್ಯೂಸ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಮುಖ ಸಾಮಾಜಿಕ ಮಾಧ್ಯಮ ವೇದಿಕೆಗಳು 2019 ರ ಮಾರ್ಚ್​ನಲ್ಲಿ ರೂಪಿಸಿದ ಸ್ವಯಂಪ್ರೇರಿತ ನೀತಿ ಸಂಹಿತೆಯನ್ನು ಆಚರಿಸಲು ಒಪ್ಪಿಕೊಂಡಿವೆ. ಚುನಾವಣಾ ವಾತಾವರಣ ಕೆಡದಂತೆ ನೋಡಿಕೊಳ್ಳಲು ಸಾಮಾಜಿಕ ಮಾಧ್ಯಮ ಪೋಸ್ಟ್​ಗಳ ಮೇಲೆ ಕ್ರಮ ಜರುಗಿಸಲಾಗುತ್ತದೆ.

ಚುನಾವಣೆ ಮುಗಿದ 30 ದಿನಗಳ ಒಳಗಾಗಿ ಅಭ್ಯರ್ಥಿ ವೆಚ್ಚದ ಮಾಹಿತಿ ನೀಡಬೇಕು. ಅವರು ನೀಡಿದ ವೆಚ್ಚದ ಮಾಹಿತಿ ಮತ್ತು ಚುನಾವಣಾ ವೀಕ್ಷಕರು ನೀಡುವ ವೆಚ್ಚದ ಮಾಹಿತಿಯನ್ನು ಹಿರಿಯ ಅಧಿಕಾರಿ ಪರಿಶೀಲನೆ ನಡೆಸಲಿದ್ದಾರೆ. ನಂತರ ಒಪ್ಪಿಗೆ ಆದರೆ ಮಾತ್ರ ಲೆಕ್ಕ ಪತ್ರ ಒಪ್ಪಿಕೊಳ್ಳಲಾಗುತ್ತದೆ.

ABOUT THE AUTHOR

...view details